ಬೆಂಗಳೂರು [ಜು.11] :  ಏಕಾಏಕಿ ಕನ್ನಡ ಮಾಧ್ಯಮ ತರಗತಿಗಳನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಕಬ್ಬನ್‌ ಪೇಟೆಯ ಲೂರ್ದು ಪಾಠಶಾಲೆಯ ಎದುರು ಪೋಷಕರು ಮತ್ತು ವಿದ್ಯಾರ್ಥಿಗಳು ಬುಧವಾರ ಪ್ರತಿಭಟಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ತರಗತಿಗಳನ್ನು ಮುಚ್ಚುತ್ತಿರುವುದಾಗಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಇದರಿಂದ 8ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 45 ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಬಿದ್ದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ಸ್ಥಗಿತಗೊಳಿಸಲಿ. ಆದರೆ, ಪ್ರಸಕ್ತ ವರ್ಷ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ತರಗತಿಗಳನ್ನು ಸ್ಥಗಿತಗೊಳಿಸಬಾರದು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಲೆಯ ಹಿರಿಯ ವಿದ್ಯಾರ್ಥಿ ಅನಂತ ಅವರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆಯೇ ಶಾಲೆಗೆ ನೋಟಿಸ್‌ ನೀಡಲಾಗಿದೆ. ಹೀಗಿದ್ದರೂ ಶಾಲಾ ಆಡಳಿತ ಮಂಡಳಿ ಮಕ್ಕಳ ಸಂಖ್ಯೆ ಕುಸಿಯುವ ಕುರಿತು ಪೋಷಕರ ಗಮನಕ್ಕೆ ತಂದಿಲ್ಲ. ಇದೀಗ ಏಕಾಏಕಿ ಬೇರೊಂದು ಶಾಲೆಯಲ್ಲಿ ಪ್ರವೇಶ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ತರಗತಿಗಳು ಆರಂಭವಾಗಿ ಎರಡು ತಿಂಗಳ ಬಳಿಕ ಈ ಮಾಹಿತಿ ನೀಡಿದ್ದಾರೆ. ಇದೀಗ ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಶಾಲೆಯ ಮಕ್ಕಳ ಶೈಕ್ಷಣಿಕ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪೋಷಕರ ಪ್ರತಿಭಟನೆ ಕುರಿತಂತೆ ಮಾತನಾಡಿದ ಶಾಲಾ ಆಡಳಿತ ಮಂಡಳಿ ವ್ಯವಸ್ಥಾಪಕ ಭಾಸ್ಕರ್‌, ಸರ್ಕಾರದ ನಿಯಮದ ಪ್ರಕಾರ ಮಕ್ಕಳು ಮತ್ತು ಶಿಕ್ಷಕರ ಅನುಪಾತ 50:1 ಇರಬೇಕು. ನಮ್ಮ ಶಾಲೆಯಲ್ಲಿ 15:1 ಇದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಸಮಸ್ಯೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 8 ಮತ್ತು 9ನೇ ತರಗತಿ ಕನ್ನಡ ಮಾಧ್ಯಮ ಮಕ್ಕಳನ್ನು ಸಮೀಪದ ಶಾಲಾಗಳಿಗೆ ವರ್ಗಾವಣೆ ಪತ್ರ ನೀಡುವಂತೆ ಸರ್ಕಾರ ಸೂಚಿಸಿದೆ ಎಂದು ವಿವರಿಸಿದ್ದಾರೆ.

ಪೋಷಕರಿಂದ ಮನವಿ :  ಪ್ರತಿಭಟನೆ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ಲೋಹಿತೇಶ್ವರ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಮಾತನಾಡಿದ ಪ್ರೌಢಶಿಕ್ಷಣ ನಿರ್ದೇಶಕ ಕೆ.ಎಸ್‌.ಮಣಿ, ಶಾಲೆಗೆ ನೋಟಿಸ್‌ ನೀಡಿರುವ ಕುರಿತು ಪರಿಶೀಲನೆ ನಡೆಸುತ್ತೇನೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.