ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಶಿ, ಎಂಬಿಪಾ ಲಾಬಿ!
ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಶಿ, ಎಂಬಿಪಾ ಲಾಬಿ| ದಿನೇಶ್ ಗುಂಡೂರಾವ್ ಬದಲಾವಣೆ ವೇಳೆ ಕುರ್ಚಿ ಗಿಟ್ಟಿಸಲು ಯತ್ನ| ಹಿರಿಯ ಕಾಂಗ್ರೆಸ್ಸಿಗ ಕೆ.ಎಚ್.ಮುನಿಯಪ್ಪ ಅವರೂ ರೇಸ್‌ನಲ್ಲಿ
ಬೆಂಗಳೂರು[ಡಿ.12]: ಸದ್ಯಕ್ಕೆ ಅಲ್ಲದಿದ್ದರೂ ನಿಕಟ ಭವಿಷ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಬದಲಾಗುವ ಸಾಧ್ಯತೆ ಹೆಚ್ಚಿದೆ. ಇದನ್ನು ಮನಗಂಡಿರುವ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಈ ಹುದ್ದೆ ಗಿಟ್ಟಿಸಲು ಪ್ರಬಲ ಲಾಬಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದರೂ ಹೈಕಮಾಂಡ್ ಅವರಿಬ್ಬರಿಗೂ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ನಾಯಕರ ಪೈಕಿ ಸಿದ್ದರಾಮಯ್ಯ ಅವರ ಹುದ್ದೆಗೆ ಚ್ಯುತಿ ಬರುವ ಸಾಧ್ಯತೆಯಿಲ್ಲ. ಆದರೆ, ಸದ್ಯಕ್ಕೆ ಅಲ್ಲದಿದ್ದರೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಈ ಹುದ್ದೆಯ ಮೇಲೆ ಡಿ.ಕೆ.ಶಿವಕುಮಾರ್ (ಒಕ್ಕಲಿಗ), ಎಂ.ಬಿ. ಪಾಟೀಲ್ (ಲಿಂಗಾಯತ) ಹಾಗೂ ಕೆ.ಎಚ್. ಮುನಿಯಪ್ಪ (ಪರಿಶಿಷ್ಟ) ಅವರು ಕಣ್ಣಿಟ್ಟಿದ್ದಾರೆ. ಈ ಪೈಕಿ ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ನಡುವೆ ತೀವ್ರ ಪೈಪೋಟಿ ನಡೆದಿದೆ ಎನ್ನಲಾಗುತ್ತಿದೆ.
ಐಟಿ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ದೆಹಲಿಗೆ ತೆರಳಲಿರುವ ಡಿ.ಕೆ.ಶಿವಕುಮಾರ್ ಅವರು ಸಂಜೆ ಹೈಕಮಾಂಡ್‌ನ ಪ್ರಮುಖರನ್ನು ಭೇಟಿ ಮಾಡಿ ಈ ಹುದ್ದೆಯ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎಂ.ಬಿ.ಪಾಟೀಲ್ ಅವರು ಹೈಕಮಾಂಡ್‌ನಲ್ಲಿರುವ ತಮ್ಮ ಸಂಪರ್ಕಗಳ ಮೂಲಕ ಹುದ್ದೆ ಗಿಟ್ಟಿಸಲು ತೀವ್ರ ಪ್ರಯತ್ನ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಹೈಕಮಾಂಡ್ ಈ ನಾಯಕರ ಪೈಕಿ ಯಾರಿಗೆ ಮತ್ತು ಯಾವಾಗ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.