Asianet Suvarna News Asianet Suvarna News

ಕನ್ನಡ ಹೋರಾಟಗಾರರ ಬಂಧನ ಖಂಡಿಸಿ ಬೆಂಗಳೂರು ಬಂದ್, ಯಾವತ್ತು?

ಬೆಂಗಳೂರು ಬಂದ್‌ಗೆ ಶೀಘ್ರದಲ್ಲೇ ನಿರ್ಧಾರ/ ಕನ್ನಡಪರ ಹೋರಾಟಗಾರರ ಬಂಧನಕ್ಕೆ ಖಂಡನೆ/ ರಾಜ್ಯ ಸರ್ಕಾರ, ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ

Kannada Activists arrest Kannada organizations call for Bengaluru Bandh
Author
Bengaluru, First Published Aug 20, 2019, 9:42 PM IST

ಬೆಂಗಳೂರು[ಆ. 20]  ಹಿಂದಿ ಭಾಷೆಯಲ್ಲಿದ್ದ ಫಲಕವನ್ನು ಕನ್ನಡಪರ ಹೋರಾಟಗಾರರು ಕಿತ್ತು ಹಾಕಿದ ಸಂಬಂಧ ಬೆಂಗಳೂರು ಬಂದ್‌ ಮಾಡಲು ಮಾರ್ವಾಡಿಗಳು ಉದ್ದೇಶಿಸಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಆದರೆ, ನಾವು ಎಲ್ಲ ಸಂಘಟನೆ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರು ಬಂದ್‌ ಮಾಡುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಕನ್ನಡಪರ ಹೋರಾಟಗಾರರು ಘೋಷಿಸಿದ್ದಾರೆ.

ಸರೋಜಿನಿ ಮಹಿಷಿ ವರದಿ ಆಧರಿಸಿ ರಾಜ್ಯದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಸಿಗುವಂತಾಗಬೇಕು ಮತ್ತು ಕನ್ನಡಿಗರ ಪರ ಹೋರಾಡುವರನ್ನು ಬಂಧಿಸಿರುವುದನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪುರಭವನದ ಎದುರು ಪ್ರತಿಭಟನೆ ನಡೆಸಿದವು. ಈ ವೇಳೆ ಮಾತನಾಡಿದ ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರ ಜೊತೆ ಚರ್ಚಿಸಿ ಶೀಘ್ರದಲ್ಲಿ ಬಂದ್‌ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.

ಕನ್ನಡ ನೆಲದಲ್ಲಿ ಕನ್ನಡಿಗರು ಕನ್ನಡಕ್ಕಾಗಿ ಹೋರಾಟ ಮಾಡಿದರೆ ಅದಕ್ಕೆ ಸ್ಪಂದಿಸದೇ ಧರ್ಮದ ಹೆಸರಿನಲ್ಲಿ ಅವರನ್ನು ಸಿಲುಕಿಸಿ, ಬಂಧಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರನ್ನು ಗೂಂಡಾಗಳು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಹೋರಾಟ ಮಾರ್ವಾಡಿಗಳು, ಪರಭಾಷಿಕರು, ಜೈನರು, ಸರ್ಕಾರಗಳು, ಧರ್ಮ ಹಾಗೂ ವ್ಯಕ್ತಿ ವಿರುದ್ಧವಲ್ಲ. ಬದಲಾಗಿ ಕನ್ನಡಿಗರಿಗೆ ರಾಜ್ಯದಲ್ಲಿನ ಉದ್ಯೋಗ ದೊರಕಬೇಕು. ಕರುನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಪರಭಾಷಿಗರು ಕನ್ನಡ ಭಾಷೆ ಕಲಿಯಬೇಕು ಮತ್ತು ಗೌರವ ಕೊಡಬೇಕು. ಕನ್ನಡತನ ಉಳಿಯಬೇಕು. ಧರ್ಮ ಹೆಸರಿನಲ್ಲಿ ಕನ್ನಡಪರ ಹೋರಾಟಗಾರರನ್ನು ಬಂಧಿಸುವ, ಗೂಂಡಾಗಳು ಎಂದು ಕರೆಯುವವರ ವಿರುದ್ಧ ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಕುಮಾರ್‌ ಶೆಟ್ಟಿಮಾತನಾಡಿ, ಇತ್ತೀಚೆಗೆ ನಡೆದ ಕನ್ನಡಿಗರ ಅಹೋರಾತ್ರಿ ಉಪವಾಸ ಸತ್ಯಾಗ್ರಹದ ಬಳಿಕ ಹಿಂದಿ ಭಾಷೆಯ ಬೋರ್ಡ್‌ವೊಂದನ್ನು ಹೋರಾಟಗಾರರು ಕಿತ್ತು ಹಾಕಿದ್ದರು. ಧರ್ಮದ ಹೆಸರಿನಲ್ಲಿ ಕನ್ನಡಿಗರನ್ನು ಒಡೆಯುತ್ತಿರುವ ಮಾರ್ವಾಡಿಗಳು ನೀಡಿರುವ ಸುಳ್ಳು ದೂರಿನ ಮೇಲೆ ಹೋರಾಟಗಾರರನ್ನು ಬಂಧಿಸಲಾಗಿದೆ. ಕನ್ನಡತನ, ನೆಲ, ಭಾಷೆ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರ ನಿಲ್ಲಬೇಕು ಎಂದರು.

#ReleaseKannadaActivists ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಧ್ವನಿ

ಗೀತ ರಚನೆಕಾರ ಕವಿರಾಜ್‌ ಮಾತನಾಡಿ, ಹೋರಾಟಗಾರರನ್ನು ಗೂಂಡಾಗಳು ಎಂದು ಕರೆದರೂ ಬೇಸರ ಪಟ್ಟುಕೊಳ್ಳದೇ ನಾವು ಗೂಂಡಾಗಳಾಗಿಯೇ ನಮ್ಮ ಭಾಷೆ, ನಾಡನ್ನು ರಕ್ಷಿಸುತ್ತೇವೆ ಎಂದರು.

ಪತ್ರಕರ್ತ ದಿನೇಶ್‌ ಅಮೀನಮಟ್ಟು ಮಾತನಾಡಿ, ಕನ್ನಡಕ್ಕಾಗಿ ಹೋರಾಡುವ ಕನ್ನಡಿಗನನ್ನು ಬಂಧಿಸಿರುವ ಬಗ್ಗೆ ಚರ್ಚಿಸುವ ಹಾಗೂ ಒಗ್ಗಟ್ಟು ಪ್ರದರ್ಶಿಸುವ ಸಮಯ ಬಂದಿದೆ. ಕನ್ನಡಕ್ಕಾಗಿ ಹೋರಾಡಿದ್ದೇವೆ ಹೊರತು ನಾವು ಯಾವ ಜಾತಿ, ಜನಾಂಗ, ಧರ್ಮದವರ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿದರು.

ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್‌ ಪಾಟೀಲ್‌ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಅವರ ಮೈಯಲ್ಲಿ ಕನ್ನಡ ರಕ್ತದ ಬದಲಾಗಿ ಗುಜರಾತ್‌, ಮಹಾರಾಷ್ಟ್ರದ ರಕ್ತ ಹರಿಯುತ್ತಿರಬೇಕು ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಈವರೆಗೆ 1.48 ಲಕ್ಷ ಕನ್ನಡಿಗರ ಮೇಲೆ ಪ್ರಕರಣಗಳಿವೆ, ಆದರೆ ಇದಕ್ಕೆ ಹೆದರುವುದಿಲ್ಲ ಎಂದರು.

ವಕೀಲ ಸೂರ್ಯ ಮುಕುಂದರಾಜ್‌ ಮಾತನಾಡಿ, ಕನ್ನಡ ವಿರೋಧಿ ನೀತಿ ತಾಳಿರುವ ಮುಖ್ಯಮಂತ್ರಿಗಳಿಗೆ, ಹೋರಾಟಗಾರರನ್ನು ಗೂಂಡಾಗಳು ಎಂದಿರುವ ಸಂಸದರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಹೋರಾಟಗಾರರಾದ ನಾಗೇಶ್‌, ಭಾರತಿ, ನಿಖಿತಾ, ರಮೇಶ್‌, ಮಂಜು, ಲಕ್ಷಣ ಹೂಗಾರ್‌, ಮುನೀರ್‌ ಕಾಟಿಪಾಳ್ಯ, ನೀಲೇಶ್‌ಗೌಡ ಸೇರಿದಂತೆ ಹಲವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಕನ್ನಡ ಒಕ್ಕೂಟ, ಕರ್ನಾಟಕ ರಣಧೀರಪಡೆ, ಕರುನಾಡು ಸೇವಕರು, ಕರ್ನಾಟಕ ಚಾಲಕರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಷ್ಟ್ರೀಯ ಪಕ್ಷ, ಆಟೋ ಮತ್ತು ಟ್ಯಾಕ್ಸಿ ಸಂಘ ಸೇರಿದಂತೆ 20ಕ್ಕೂ ಅಧಿಕ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

 

Follow Us:
Download App:
  • android
  • ios