DCM DK Shivakumar: ಕನಕಪುರದ ದೊಡ್ಡಾಲಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಗೆ, ಭೂಮಿ ದಾನ ಮಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪೂರ್ವಜರಾದ 'ಶ್ರೀ ಡಿ.ಕೆ.ಕೆಂಪೇಗೌಡ' ಅವರ ಹೆಸರನ್ನು ಮರುನಾಮಕರಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಸರ್ಕಾರಿ ಶಾಲೆಗೆ 3.20 ಎಕರೆ ಭೂಮಿಯನ್ನು ಹಿಂದೆ ದಾನವಾಗಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪೂರ್ವಜರ ಹೆಸರನ್ನು ಈಗ ಅಲ್ಲಿ ಮೇಲ್ದರ್ಜೆಗೇರಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಮರು ನಾಮಕರಣ ಮಾಡಲು ಸರ್ಕಾರ ಆದೇಶಿಸಿದೆ.

ದೊಡ್ಡ ಆಲಹಳ್ಳಿಯ ಕೆಪಿಎಸ್‌ಅನ್ನು ‘ಶ್ರೀ ಡಿ.ಕೆ.ಕೆಂಪೇಗೌಡ ಕರ್ನಾಟಕ ಪಬ್ಲಿಕ್ ಶಾಲೆ’ ಎಂದು ಮರು ನಾಮಕರಣ ಮಾಡಲು ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಮಾಡಿದೆ.
ಡಿ.ಕೆ.ಕೆಂಪೇಗೌಡ ಶಾಲೆ
ಡಿ.ಕೆ.ಶಿವಕುಮಾರ್ ಅವರ ಪೂರ್ವಜರಾದ ನಿಂಗಮ್ಮ ಕೋಂ ಲೇಟ್ ದೊಡ್ಡ ಕೆಂಪೇಗೌಡ ಅವರು ಈ ಹಿಂದೆ ದೊಡ್ಡ ಆಲಹಳ್ಳಿ ಸರ್ಕಾರಿ ಶಾಲೆಗೆ 3 ಎಕರೆ 20 ಗುಂಟೆ ಜಮೀನನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನವಾಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಶಾಲೆಗೆ ‘ಶ್ರೀ ಡಿ.ಕೆ.ಕೆಂಪೇಗೌಡ ಕೆಪಿಎಸ್’ ಎಂದು ಮರು ನಾಮಕರಣ ಮಾಡಲು ಶಿಫಾರಸು ಮಾಡಿದ್ದರು. ಅದರಂತೆ ಶಿಕ್ಷಣ ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡು ಮರು ನಾಮಕರಣಕ್ಕೆ ಆದೇಶ ಮಾಡಿದೆ. ಮಾಹಿತಿ ಪ್ರಕಾರ, ಡಿ.ಕೆ.ಶಿವಕುಮಾರ್ ಅವರ ತಾತ ಮತ್ತು ತಂದೆ ಇಬ್ಬರ ಹೆಸರನ್ನೂ ಸೇರಿಸಿ ಡಿ.ಕೆ.ಕೆಂಪೇಗೌಡ ಎಂಬ ಹೆಸರು ಇಡಲಾಗಿದೆ ಎನ್ನಲಾಗಿದೆ.
ದೊಡ್ಡ ಆಲಹಳ್ಳಿ ಕೆಪಿಎಸ್‌ಗೆ ಡಿ.ಕೆ.ಕೆಂಪೇಗೌಡ ಕರ್ನಾಟಕ ಪಬ್ಲಿಕ್ ಶಾಲೆ
ರಾಜ್ಯದಲ್ಲಿ ಮೂಂದಿನ ಮೂರು ವರ್ಷಗಳಲ್ಲಿ ಸುಮಾರು 900 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ಆಸಕ್ತಿ ವಹಿಸಿರುವ ಸರ್ಕಾರ, ಸಾಮಾನ್ಯ ಶಾಲೆಗಳನ್ನು ಕೆಪಿಎಸ್‌ಗಳಾಗಿ ಅಭಿವೃದ್ಧಿಪಡಿಸಲು ಮುಂದೆ ಬರುವ ದಾನಿಗಳು, ಸಂಸ್ಥೆಗಳು ಇಚ್ಚಿಸಿದರೆ ಅವರ ಹೆಸರನ್ನು ಶಾಲೆಗಳಿಗೆ ನಾಮಕರಣ ಮಾಡಲು ಕೆಲ ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ದೊಡ್ಡ ಆಲಹಳ್ಳಿ ಕೆಪಿಎಸ್‌ಗೆ ಡಿ.ಕೆ.ಕೆಂಪೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ಎಂದು ನಾಮಕರಣ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


