ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಉಡುಪಿ ಕೃಷ್ಣಮಠದ ಕನಕನ ಕಿಂಡಿಯ ಸ್ವರ್ಣ ಲೇಪನವು ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಸೇವೆಗೆ ಕೊಡುಗೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೇ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಡುಪಿ (ನ.29): ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೃಷ್ಣನಗರಿ ಉಡುಪಿಗೆ ಆಗಮಿಸಿ ಲಕ್ಷಕಂಠ ಭಗವದ್ಗೀತಾ ಶ್ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೃಷ್ಣಮಠದಲ್ಲಿ ಕೆಲವೊಂದು ಉದ್ಘಾಟನೆಯನ್ನೂ ಮಾಡಿದರು. ಕೃಷ್ಣಮಠದ ಕನಕನ ಕಿಂಡಿಗೆ ಸ್ವರ್ಣಲೇಪನ ಮಾಡಿದ್ದನ್ನು ಮೋದಿ ಅನಾವರಣ ಮಾಡಿದರು. ಇದರ ಬೆನ್ನಲ್ಲಿಯೇ ಹೊಸ ವಿವಾದ ಸೃಷ್ಟಿಯಾಗಿದೆ. ಉಡುಪಿಯ ಕೃಷ್ಣಮಠದ ಕನಕನ ಕಿಂಡಿಗೆ ಸ್ವರ್ಣ ಲೇಪನ ಮಾಡಲು ಕೊಡುಗೆ ನೀಡಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಕರಾವಳಿ ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.
ಐತಿಹಾಸಿಕ ಕನಕನ ಕಿಂಡಿಗೆ ಪ್ರಮೋದ್ ಮಧ್ವರಾಜ್ ಅವರೇ ಸ್ವರ್ಣಲೇಪನ ಮಾಡಿಸಿದ್ದರು. ದಶಕಗಳ ಹಿಂದೆ ಪ್ರಮೋದ್ ತಂದೆ ಮಧ್ವರಾಜ್ ಕನಕನ ಗುಡಿ ನಿರ್ಮಾಣ ಮಾಡಿದ್ದರು. ಇದೀಗ ಗುಡಿ ಮರು ನಿರ್ಮಾಣ ಮಾಡಿ ಕಿಂಡಿಗೆ ಚಿನ್ನದ ಲೇಪನವನ್ನು ಪ್ರಮೋದ್ ಮಧ್ವರಾಜ್ ಮಾಡಿಸಿದ್ದರು. ಪ್ರಮೋದ್ ಮಧ್ವರಾಜ್ ಆಹ್ವಾನ ನೀಡದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ದಾನ ಕೊಟ್ಟವರನ್ನೇ ಕಾರ್ಯಕ್ರಮಕ್ಕೆ ಕರೆಯಲಿದ್ದ ಎಂದು ಆಕ್ಷೇಪ ವ್ಯಕ್ತವಾಗಿದೆ. ಅಂದು ಕನಕದಾಸರನ್ನು ಬಿಡಲಿಲ್ಲ, ಇಂದು ಪ್ರಮೋದ್ ರನ್ನು ಕರೆಯಲಿಲ್ಲ ಎಂದು ಆಕ್ಷೇಪ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಚರ್ಚೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೂಡ ಉತ್ತರ ನೀಡಿದ್ದಾರೆ.
'ಪ್ರಧಾನಿ ಮೋದಿ ಕನಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಿನ್ನದ ಕವಚ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಗದಿರುವುದು ದೊಡ್ಡ ವಿಷಯವಲ್ಲ. ಪ್ರದೇಶಕ್ಕೆ ಬೇರೆ ಬೇರೆ ಕಾರಣಗಳಿಂದ ನನಗೆ ಹೋಗಲು ಅವಕಾಶ ಸಿಗಲಿಲ್ಲ. ಸ್ವರ್ಣಮಯ ಕವಚ ನಿರ್ಮಾಣ ಮಾಡುವಾಗ ಮೋದಿಯವರು ಬರುವ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ಮೋದಿಯವರು ಬರುವ ಕಾರ್ಯಕ್ರಮ ನಿಗದಿಯಾದಾಗ ಸ್ವಾಮೀಜಿ ಉದ್ಘಾಟನೆಗೆ ವ್ಯವಸ್ಥೆ ಮಾಡಿದರು. ನನ್ನ ತಂದೆ ನಿರ್ಮಿಸಿದ ಕನಕನ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದ್ದಾರೆ. ಇದು ಕೊನೆಯ ಗಳಿಗೆಯಲ್ಲಿ ನಿರ್ಧಾರವಾದ ಕಾರ್ಯಕ್ರಮ. ಪ್ರಧಾನಿ ಮೋದಿಯವರಿಗೆ ದೇವರು ಬುದ್ಧಿ ಕೊಟ್ಟು ಗೌರವಾರ್ಪಣೆ ಮಾಡಿದ್ದಾರೆ. ಸ್ವಾಮೀಜಿಯವರು ಹೇಳಿದ ಮಾತನ್ನು ಉಳಿಸಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.
ಈ ಸಂತೋಷದ ಮುಂದೆ, ಆಹ್ವಾನ ನೀಡದಿರುವುದು ವಿಷಯವೇ ಅಲ್ಲ. ಬೇಸರ ದುಮ್ಮಾನ ಜಿಗುಪ್ಸೆ ಏನೂ ಆಗಿಲ್ಲ. ಟಿವಿಯಲ್ಲಿ ಅರ್ಪಣೆಯ ದೃಶ್ಯ ನೋಡಿ ಸಂತೋಷ ಪಟ್ಟಿದ್ದೇನೆ. ನನಗೆ ಪ್ರವೇಶ ಯಾರಿಂದ, ಯಾಕಾಗಿ ನಿಷೇಧಿಸಲ್ಪಟಿತು ಅನ್ನೋದು ಗೊತ್ತಿಲ್ಲ. ಇವೆಲ್ಲ ಕ್ಷುಲ್ಲಕ ವಿಚಾರಗಳು, ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೋದಿ ಅವರೇ ಬಂದು ನನ್ನ ಮತ್ತು ತಂದೆಯ ಸೇವೆಯನ್ನು ಸ್ಪರ್ಶಿಸಿದ್ದಾರೆ. ಇದಕ್ಕಿಂತ ಬೇರೆ ಖುಷಿ ನನಗೆ ಬೇಡ. ಅಷ್ಟು ಜನರನ್ನು ಕರೆದಾಗ ನನ್ನನ್ನು ಕರೆಯಲು ಅವಕಾಶ ಇಲ್ಲದೇ ಇರಬಹುದು. ಯಾವ ಕಾರಣಕ್ಕಾಗಿ ಕರೆದಿಲ್ಲ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
ಇದು ಕೂಡ ದೈವೇಚ್ಛೆ ಆಗಿರಬಹುದು ಎಂದು ಭಾವಿಸುತ್ತೇನೆ ಯಾರನ್ನು ಕೂಡ ದೂಷಿಸುವುದಿಲ್ಲ. ಯಾವುದೇ ನೋವು ಬೇಸರ ಆಗದಂತೆ ನಾನೊಂದು ಕವಚದ ಒಳಗೆ ಸುರಕ್ಷಿತವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ಕನಕದಾಸರ ಭಕ್ತಿ ಮುಂದೆ ನಾನು ಕ್ಷುಲ್ಲಕ
ಕನಕದಾಸರಂತೆ ಪ್ರಮೋದ್ ಮಧ್ವರಾಜರನ್ನು ಹೊರಗಿಟ್ಟರು ಆರೋಪದ ಬಗ್ಗೆ ಮಾತನಾಡಿದ ಅವರು, ಎಲ್ಲಾ ಅಪಮಾನ ಸಹಿಸಿಕೊಂಡು ಕನಕದಾಸರು ಕೃಷ್ಣನ ಭಕ್ತಿಯ ಶಕ್ತಿ ಎಂದು ಭಾವಿಸಿದವರು. ಕೃಷ್ಣದೇವರು ಕನಕದಾಸರಿಗಿಂತ ಮುಂಚೆಯೂ ಯಾರಿಗೂ ಒಲಿದಿಲ್ಲ ನಂತರ ಒಲಿದಿಲ್ಲ. ಕನಕದಾಸರ ಭಕ್ತಿ ಶಕ್ತಿಯ ಮುಂದೆ ನಾನು ಕ್ಷುಲ್ಲಕ. ಅವರು ಸೂರ್ಯನಾದರೆ ನಾನು ಮಿಂಚುಹುಳ. ನನಗೆ ಯಾವುದೇ ಅವಮಾನ ಆಗಿಲ್ಲ ಸನ್ಮಾನವಾಗಿದೆ. ಬಿಜೆಪಿಯವರು ಯಾಕೆ ಕರೆದಿಲ್ಲ ಅನ್ನೋದು ಪಕ್ಷಕ್ಕೆ ಬಿಟ್ಟ ವಿಚಾರ. ಬಿಜೆಪಿಯಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಪಕ್ಷ ಕೊಟ್ಟ ಎಲ್ಲಾ ಕೆಲಸ ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದೇನೆ. ಮುಂದಿನದ್ದು ಕೃಷ್ಣ ಕನಕದಾಸರಿಗೆ ಬಿಟ್ಟ ವಿಚಾರ. ನಾನು ಯಾರ ಬಳಿಯೂ ಕರೆದಿಲ್ಲ ಎಂದು ಹೇಳಿಕೊಂಡಿಲ್ಲ. ಎಲ್ಲರೂ ಅವರಾಗಿಯೇ ಕರೆ ಮಾಡಿ ನಾವಲ್ಲ ನಾವಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.
ಕೊನೆಯ ಗಳಿಗೆಯವರೆಗೂ ಮಾಹಿತಿ ಇರಲಿಲ್ಲ
ಪುತ್ತಿಗೆ ಸ್ವಾಮೀಜಿಗಳು ಕೂಡ ನಾವಲ್ಲ ಎಂದು ಹೇಳಿದ್ದಾರೆ. ಸೇವೆ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಪುತ್ತಿಗೆ ಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸಿದ್ದೇನೆ. ಕನಕನ ಗುಡಿ ಕನಕನಕಿಂಡಿ ನಮ್ಮ ಕುಟುಂಬಕ್ಕೆ ಸಂಬಂಧಿಸಿದ್ದು. ಹಾಗಾಗಿ ಆ ಪ್ರದೇಶದಲ್ಲಿ ನನಗೆ ಎಲ್ಲಾದರೂ ಪ್ರವೇಶ ಇರಬಹುದು ಎಂದು ನಿರೀಕ್ಷಿಸಿದ್ದೆ. ಕೊನೆಯ ಗಳಿಗೆಯವರೆಗೂ ಮಾಹಿತಿ ಬರಲಿಲ್ಲ. ಸಭೆಗೆ ಹೋಗಲು ನಾನು ಪಾಸ್ ವ್ಯವಸ್ಥೆ ಮಾಡಿಕೊಂಡಿಲ್ಲ. ಸಭೆಗೆ ಪಾಸ್ ಕೂಡ ನನಗೆ ಸಿಕ್ಕಿಲ್ಲ ಎಂದರು.
ಮೋದಿಯವರನ್ನು ನೋಡಲೇಬೇಕು ಎಂದಿದ್ದರೆ ರೋಡ್ ಶೋಗೆ ಹೋಗಬೇಕಿತ್ತು ಎನ್ನುವ ಮಾತಿಗೆ, ರೋಡ್ ಶೋ ಗೆ ಬಂದರೆ ಬೇರೆ ಬಣ್ಣ ಬರುತ್ತದೆ. ಮನೆಯಲ್ಲಿ ಟಿವಿಯಲ್ಲಿ ಕಣ್ತುಂಬಿಕೊಂಡು ನೋಡಿದ್ದೇನೆ ಎಂದು ಹೇಳಿದರು.


