Asianet Suvarna News Asianet Suvarna News

ಇಂದು ಗಾರ್ಡನ್ ಸಿಟಿಯಲ್ಲಿ ಕಂಬಳದ ಕಲರವ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು..!

ಲಕ್ಷಾಂತರ ಜನರು ಕಂಬಳ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದ್ದು, ಶನಿವಾರ ಬೆಳಗ್ಗೆ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕಂಬಳ ಕರೆ ಉದ್ಘಾಟಿಸಲಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬೆಂಗಳೂರು ಕಂಬಳ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಲಾ ಆರು ಪ್ರಥಮ ಮತ್ತು ದ್ವಿತೀಯ ಬಹುಮಾನ ಹಾಗೂ 4 ತೃತೀಯ ಬಹುಮಾನಗಳನ್ನು ವಿತರಿಸಲಾಗುತ್ತದೆ.

Kambala to be Held on November 25th in Bengaluru grg
Author
First Published Nov 25, 2023, 10:01 AM IST

ಬೆಂಗಳೂರು(ನ.25):  ನಗರದಲ್ಲಿ ಮೊದಲ ಬಾರಿ ನಡೆಯುತ್ತಿರುವ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಅರಮನೆ ಮೈದಾನ ಸಜ್ಜಾಗಿದ್ದು, ಇಂದು(ಶನಿವಾರ) ಬೆಳಗ್ಗೆ ಆರಂಭವಾಗುವ ಕೋಣಗಳ ಓಟದ ಸ್ಪರ್ಧೆ ರಾತ್ರಿಯಿಡೀ ನಡೆಯಲಿದೆ.

ಲಕ್ಷಾಂತರ ಜನರು ಕಂಬಳ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದ್ದು, ಶನಿವಾರ ಬೆಳಗ್ಗೆ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕಂಬಳ ಕರೆ ಉದ್ಘಾಟಿಸಲಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಬೆಂಗಳೂರು ಕಂಬಳ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ತಲಾ ಆರು ಪ್ರಥಮ ಮತ್ತು ದ್ವಿತೀಯ ಬಹುಮಾನ ಹಾಗೂ 4 ತೃತೀಯ ಬಹುಮಾನಗಳನ್ನು ವಿತರಿಸಲಾಗುತ್ತದೆ.

ತುಳುಕೂಟ, ಕಂಬಳ ಹಿನ್ನೆಲೆ ಬೃಹತ್‌ ಜಾಮ್, 3 ದಿನ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡೋದೇ ಬೇಡ!

‘ಸಾಂಪ್ರದಾಯಿಕ ಕಂಬಳ ಮತ್ತು ಸ್ಪರ್ಧಾತ್ಮಕ ಕಂಬಳ ಎಂದು ಎರಡು ಪ್ರಕಾರದ ಕಂಬಳ ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವುದು ಶಕ್ತಿ, ಯುಕ್ತಿ, ಪ್ರತಿಷ್ಠೆಯ ಸ್ಪರ್ಧಾತ್ಮಕ ಕಂಬಳ. ಇದರಲ್ಲಿ ಹಿರಿಯ ಮತ್ತು ಕಿರಿಯ ವಿಭಾಗಗಳಿವೆ. ಸುಮಾರು 200 ಜೋಡಿ ಕೋಣಗಳು ಸ್ಪರ್ಧಿಸುವ ಸಾಧ್ಯತೆ ಇದೆ. ಮೊದಲ ಸುತ್ತಿನಲ್ಲಿ ಗೆದ್ದ ಒಂದು ತಂಡ ಮುಂದಿನ ಹಂತಕ್ಕೆ ಹೋಗುತ್ತದೆ’ ಎಂದು ಕಂಬಳ ತಜ್ಞ ಗುಣಪಾಲ್ ಕಡಂಬ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಶನಿವಾರ ಮತ್ತು ಭಾನುವಾರ ಮಧ್ಯಾಹ್ನದವರೆಗೆ ಟ್ರಯಲ್ ಓಟ ಇರುತ್ತದೆ. ಮಧ್ಯಾಹ್ನದ ನಂತರವೇ ನೈಜ ಸ್ಪರ್ಧೆ ಆರಂಭವಾಗುತ್ತದೆ. ಶನಿವಾರ ರಾತ್ರಿಯಿಡೀ ಓಟದ ಸ್ಪರ್ಧೆ ಇರುತ್ತದೆ. ರಾತ್ರಿ 10ರ ಬಳಿಕ ಮೈಕ್ ಬಳಕೆ ಮಾಡುವುದಿಲ್ಲ’ ಎಂದು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದರು.

‘ಕಳೆದ 18 ವರ್ಷಗಳಿಂದ 200ಕ್ಕೂ ಹೆಚ್ಚು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಆದರೆ, ಕರಾವಳಿಯಿಂದ ಹೊರಗೆ ಬಂದು ಸ್ಪರ್ಧಿಸುತ್ತಿರುವುದು ಇದೇ ಮೊದಲು. 180ಕ್ಕೂ ಹೆಚ್ಚು ಪದಕ, ಬಹುಮಾನಗಳನ್ನು ಗೆದ್ದಿದ್ದೇವೆ. ಈ ಬಾರಿಯು ಉತ್ತಮ ಸ್ಪರ್ಧೆ ನೀಡುವ ವಿಶ್ವಾಸವಿದೆ’ ಎಂದು ಜೋಡಿ ಕೋಣದ ಮಾಲೀಕ ಪಾಂಡು ತಿಳಿಸಿದರು.

8.76 ಸೆಕೆಂಡುಗಳಲ್ಲಿ 100 ಮೀಟರ್ ದಾಖಲೆ!

ಎರಡು ವರ್ಷಗಳ ಹಿಂದೆ ಕಕ್ಕೆಪದವು ಕಂಬಳದಲ್ಲಿ ಕೇವಲ 8.76 ಸೆಕೆಂಡುಗಳಲ್ಲಿ ಶ್ರೀನಿವಾಸಗೌಡ ಎಂಬುವರು 100 ಮೀಟರ್ ಕ್ರಮಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರು ಕಂಬಳದಲ್ಲಿ ಆ ದಾಖಲೆ ಮುರಿದು ಹೊಸ ದಾಖಲೆ ನಿರ್ಮಾಣವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಕಂಬಳ ತಜ್ಞ ಗುಣಪಾಲ್ ಕಡಂಬ ತಿಳಿಸಿದರು.

ರಾಜ್ಯ ರಾಜಧಾನಿಯಲ್ಲೂ ಕರಾವಳಿಯ ಕ್ರೀಡೆಯ ಕಂಪು..! ಪುನೀತ್-ರಾಜ್ ಹೆಸರಲ್ಲಿ ನಡೆಯುತ್ತೆ ಅದ್ಧೂರಿ ಕಂಬಳ..!

ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ

ಕಂಬಳದ ಜೊತೆಗೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹುಲಿ ವೇಷ ಕುಣಿತ, ಯಕ್ಷಗಾನ ಸೇರಿದಂತೆ ಕರಾವಳಿಯ ಕಲೆ, ಸಂಸ್ಕೃತಿಯ ಪ್ರದರ್ಶನವಿದೆ. ಸಿನಿಮಾ ನಟ, ನಟಿಯರು, ಸಂಗೀತ ನಿರ್ದೇಶಕರು, ಗಾಯಕರು ಬೆಂಗಳೂರು ಕಂಬಳದಲ್ಲಿ ಪ್ರದರ್ಶನ ನೀಡುತ್ತಾರೆ. ಅದಕ್ಕಾಗಿ ಎರಡು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. 80ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದು, ಕರಾವಳಿಯ ನಾನಾ ಬಗೆಯ ಆಹಾರ, ತಿಂಡಿ-ತಿನಿಸುಗಳು, ಪಾನೀಯಗಳು ಇರಲಿದೆ. ಶನಿವಾರ ಮತ್ತು ಭಾನುವಾರ ಕಂಬಳದ ಜೊತೆಗೆ ಬೆಂಗಳೂರಿಗರಿಗೆ ಭರಪೂರ ಮನೋರಂಜನೆ ಸಿಗಲಿದೆ.

ಪಾರ್ಕಿಂಗ್ ಶುಲ್ಕ 50: 

ಮೇಕ್ರಿ ವೃತ್ತದ ಬಳಿಯ ಅರಮನೆ ಮೈದಾನದ ಗೇಟ್‌ ನಂಬರ್‌ 1ರಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ದ್ವಿಚಕ್ರ ವಾಹನಗಳಿಗೆ ₹50 ಶುಲ್ಕ ನಿಗದಿಪಡಿಸಲಾಗಿದೆ.

ಕೆಲ ರಸ್ತೆಗಳಲ್ಲಿ ವಾಹನ ನಿಲುಗಡೆ ಹಾಗೂ ಸಂಚಾರ ನಿರ್ಬಂಧ 

ಅರಮನೆ ರಸ್ತೆ:- ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಸಂತನಗರ ಅಂಡರ್ ಪಾಸ್‌ವರೆಗೆ
ಎಂ.ವಿ.ಜಯರಾಮ ರಸ್ತೆ:- ಅರಮನೆ ರಸ್ತೆ, ಬಿಡಿಎ ಜಂಕ್ಷನ್‌ನಿಂದ ಚಕ್ರವರ್ತಿ ಲೇಔಟ್‌ ಸೇರಿದಂತೆ
ವಸಂತನಗರ ಅಂಡರ್‌ಪಾಸ್ ನಿಂದ ಹಳೆ ಉದಯಟಿವಿ ಜಂಕ್ಷನ್‌ವರೆಗೆ (ಎರಡು ದಿಕ್ಕಿನಲ್ಲಿ)
ಬಳ್ಳಾರಿ ರಸ್ತೆ:- ಬಾಳೇಕುಂದ್ರಿ ಸರ್ಕಲ್‌ನಿಂದ ಲೀ-ಮೆರೆಡಿಯನ್ ಅಂಡರ್‌ಪಾಸ್‌ವರೆಗೆ
ಮಿಲ್ಲರ್ಸ್ ರಸ್ತೆ:- ಹಳೆ ಉದಯ ಟಿವಿ ಜಂಕ್ಷನ್‌ನಿಂದ ಎಲ್.ಅರ್.ಡಿ ಇ ಜಂಕ್ಷನ್‌ವರೆಗೆ
ಜಯಮಹಲ್ ರಸ್ತೆ:- ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆ ಸುತ್ತಮುತ್ಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂದ
ಕಾರ್ಯಕ್ರಮಕ್ಕೆ ಬರುವವರನ್ನು ಹೊರತುಪಡಿಸಿ ಬೇರೆಡೆ ತೆರಳುವವರಿಗೆ ಸಂಚಾರ ನಿರ್ಬಂಧ
ಕಂಬಳ ಹಿನ್ನೆಲೆ ಕೆಲ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ನಿರ್ಬಂಧ 
ಪ್ಯಾಲೇಸ್  ರಸ್ತೆ, ವಸಂತನಗರ ರಸ್ತೆ, ನಂದಿದುರ್ಗ ರಸ್ತೆ
ಎಂ.ವಿ. ಜಯರಾಮ್ ರಸ್ತೆ, 
ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ,, ಸಿ.ವಿ.ರಾಮನ್ ರಸ್ತೆ, ರಮಣ ಮಹರ್ಷಿ ರಸ್ತೆ, 
ತರಳಬಾಳು ರಸ್ತೆ, ಮೌಂಟ್ ಕಾರ್ಮಲ್ ಕಾಲೇಜು ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧ

Follow Us:
Download App:
  • android
  • ios