Asianet Suvarna News Asianet Suvarna News

ರೈತರಿಗೇ ತಿಳಿಯದಂತೆ ಅವರ ಭೂಮಿ ಸ್ವಾಧೀನ: ಪಹಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೆಸರು ಪ್ರತ್ಯಕ್ಷ

ಕೇಂದ್ರ ಸರ್ಕಾರದ ಭಾರತ್‌ಮಾಲಾ ಯೋಜನೆಯಡಿ ‘ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ’ ಷಟ್ಪಥ ನಿರ್ಮಾಣದಲ್ಲಿ ಅಧಿಕಾರಿಗಳು ರೈತರಿಗೆ ಮತ್ತೊಂದು ಟೋಪಿ ಹಾಕಿರುವುದು ಬೆಳಕಿಗೆ ಬಂದಿದೆ. 

Acquisition of their land without the knowledge of the farmers at yadgir gvd
Author
First Published Sep 4, 2022, 4:00 AM IST

ಆನಂದ್‌ ಎಂ. ಸೌದಿ

ಯಾದಗಿರಿ (ಸೆ.04): ಕೇಂದ್ರ ಸರ್ಕಾರದ ಭಾರತ್‌ಮಾಲಾ ಯೋಜನೆಯಡಿ ‘ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ’ ಷಟ್ಪಥ ನಿರ್ಮಾಣದಲ್ಲಿ ಅಧಿಕಾರಿಗಳು ರೈತರಿಗೆ ಮತ್ತೊಂದು ಟೋಪಿ ಹಾಕಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ನೀರಾವರಿ ಜಮೀನುಗಳನ್ನು ಖುಷ್ಕಿ ಎಂದು ಪರಿಗಣಿಸಿ ಅಲ್ಪ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಅದರ ಬೆನ್ನಲ್ಲೇ ಇದೀಗ ಭೂಮಾಲೀಕ ರೈತರ ಅರಿವಿಗೂ ತರದೆ, ಪರಿಹಾರವನ್ನೂ ನೀಡದೆ ಅವರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿರುವುದು ರೈತರ ಆಘಾತಕ್ಕೆ ಕಾರಣವಾಗಿದೆ. 

ಭೂಸ್ವಾಧೀನ ದಾಖಲೆಗಳ ಪರಿಶೀಲನೆ ಕಾರ್ಯವೂ ಮುಗಿದಿಲ್ಲ. ಪರಿಹಾರದ ವಿಚಾರವೂ ಬಗೆಹರಿದಿಲ್ಲ. ಪರಿಹಾರ ಕುರಿತು ಇನ್ನೂ ಅನೇಕ ರೈತರ ವಿಚಾರಣೆ ಬಾಕಿಯಿದೆ. ಇದಕ್ಕಾಗಿ ಸಭೆಗಳು ನಡೆಯಬೇಕಿದೆ. ಆದರೆ ಈಗಾಗಲೇ ಕೆಲವು ರೈತರ ಪಹಣಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆಸರು ನಮೂದಿಸಲಾಗಿದೆ. ತಮ್ಮದು ನೀರಾವರಿ ಜಮೀನು ಆಗಿದ್ದಾಗ್ಯೂ ಖುಷ್ಕಿ ಎಂದು ಪರಿಗಣಿಸಿ ಕಡಮೆ ಮೊತ್ತದ ಪರಿಹಾರ (4 ಲಕ್ಷ ರು.) ನೀಡಲಾಗುತ್ತಿದೆ. ವಾಸ್ತವದಲ್ಲಿ ನೀರಾವರಿಗೆ ನೀಡಬೇಕಿದ್ದ 19 ಲಕ್ಷ ರು.ಗಳ ಪರಿಹಾರ ನೀಡಬೇಕು ಎಂದು ದೂರಿ ರೈತರು ತಿಂಗಳುಗಟ್ಟಲೆ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದ್ದರು. 

ಗಣಪತಿ ಮೂರ್ತಿ ಇಟ್ಟು ಭಾವೈಕ್ಯತೆ ಸಂದೇಶ ಸಾರಿದ ಅಬ್ದುಲ್ ನಬಿ ಕುಟುಂಬ!

ಈ ಬಗ್ಗೆ ಕನ್ನಡಪ್ರಭ ಜು.30ರಂದು ಪ್ರಕಟಿಸಿದ್ದ ವರದಿ ಆಡಳಿತ ವಲಯದಲ್ಲಿ ಸಂಚಲನ ಮೂಡಿಸಿ, ರೈತರಿಗಾದ ಅನ್ಯಾಯ ಸರಿಪಡಿಸುವುದಾಗಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಭರವಸೆ ನೀಡಿದ್ದರು. ತದನಂತರ ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಭೆ ಸಹ ನಡೆಸಿ, ದಾಖಲೆಗಳ ಪರಿಶೀಲನೆಯೂ ನಡೆದಿತ್ತು. ಇನ್ನೇನು ತಮಗೆ ನ್ಯಾಯ ಸಿಗಬಹುದು ಎಂದು ಕಾಯ್ದಿದ್ದ ರೈತರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರಿಗಾದ ಈ ಅನ್ಯಾಯ ಬಗೆಹರಿಸುವುದಾಗಿ ಹೇಳಿದ್ದ ಸರ್ಕಾರದ ಈಗಿನ ನಡೆ ರೈತರ ಬೆನ್ನಿಗೆ ಚೂರಿ ಹಾಕಿದಂತಿದೆ ಎಂದು ವಡಗೇರಾದ ಪೀರ್‌ಸಾಬ್‌ ‘ಕನ್ನಡಪ್ರಭ’ದೆದುರು ನೋವು ತೋಡಿಕೊಂಡರು.

1271 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ವೇ: ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ಐದು ರಾಜ್ಯಗಳನ್ನು ಸಂಪರ್ಕಿಸುವ, 50 ಸಾವಿರ ಕೋಟಿ ರು.ಗಳ ವೆಚ್ಚದ 1271 ಕಿ.ಮೀ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 150-ಸಿ ನಿರ್ಮಾಣ 2025ರಲ್ಲಿ ಪೂರ್ಣಗೊಳ್ಳಬೇಕಿದೆ. ಈ ಎಕ್ಸಪ್ರೆಸ್‌ ವೇ ನಿರ್ಮಾಣದಿಂದ ಚೆನ್ನೈ-ಸೂರತ್‌ ಮಧ್ಯೆ 330 ಕಿ.ಮೀ. ಅಂತರ ಕಡಮೆಯಾಗಲಿದ್ದು, ಐದಾರು ಗಂಟೆಗಳ ಪ್ರಯಾಣದ ಅವಧಿ ಕಡಿತಗೊಳ್ಳಲಿದೆ. ಯಾದಗಿರಿ ಜಿಲ್ಲೆಯ ವಡಗೇರಾ ಹಾಗೂ ಶಹಾಪುರ ತಾಲೂಕಿನ 21 ಹಳ್ಳಿಗಳ ಮೂಲಕ ಹಾದು ಹೋಗಲಿರುವ ಈ ಎಕ್ಸಪ್ರೆಸ್‌ ವೇ ನಿರ್ಮಾಣಕ್ಕಾಗಿ ಈ ತಾಲೂಕುಗಳ ಒಟ್ಟು 540 ಹೆಕ್ಟೇರ್‌ ಪ್ರದೇಶದಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

Yadgir: ಸದಸ್ಯರಿಂದಲೇ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ..!

ಬಹುತೇಕರಿಗೆ ಪರಿಹಾರ ವಿತರಣೆ ಆಗಿದೆ. ಆದರೂ ಪರಿಹಾರ ಪ್ರಕ್ರಿಯೆ ನಡೆದಿರುವಾಗಲೇ ಪಹಣಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡಿರುವಂತೆ ನಮೂದಿಸಿರುವ ಬಗ್ಗೆ ಕೆಲವರು ತಮ್ಮ ಗಮನಕ್ಕೆ ತಂದಿದ್ದಾರೆ. ಇದನ್ನು ಪರಿಶೀಲಿಸಲಾಗುವುದು.
- ಸಂತೋಷಕುಮಾರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಭೂಸ್ವಾಧೀನ ಅಧಿಕಾರಿ, ಯಾದಗಿರಿ

Follow Us:
Download App:
  • android
  • ios