Asianet Suvarna News Asianet Suvarna News

ಮುದ್ರಣ ಮಾಧ್ಯಮದ ಘನತೆ ಉಳಿಸಲು ಕಲ್ಲೆ ಶಿವೋತ್ತಮ ರಾವ್ ಕರೆ

ಹಿರಿಯ ಪತ್ರಕರ್ತ, 'ಜನಪ್ರಗತಿ'ಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾವ್ ಅವರು  ಮುದ್ರಣ ಮಾಧ್ಯಮ ಅತ್ಯಂತ ಶ್ರೇಷ್ಠವಾದದ್ದು ಅದರ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಹೊಣೆ ಇಂದಿನ ಪೀಳಿಗೆಯ ಮೇಲಿದೆ ಎಂದಿದ್ದಾರೆ.

Kalle Sarvottama Rao calls to save dignity of print media gow
Author
Bengaluru, First Published Aug 14, 2022, 7:46 PM IST

ಬೆಂಗಳೂರು (ಆ.14): ಮುದ್ರಣ ಮಾಧ್ಯಮ ಅತ್ಯಂತ ಶ್ರೇಷ್ಠವಾದದ್ದು. ಅದರ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಹೊಣೆ ಇಂದಿನ ಪೀಳಿಗೆಯ ಮೇಲಿದೆ ಎಂದು ಹಿರಿಯ ಪತ್ರಕರ್ತರೂ, 'ಜನಪ್ರಗತಿ'ಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾವ್ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಪತ್ರಿಕೋದ್ಯಮದ ಹಿರಿಯರಿಗೆ ಅವರ ಮನೆಯ ಅಂಗಳದಲ್ಲೇ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸರಣಿಯ ಮೊದಲ ಕಾರ್ಯಕ್ರಮವಾಗಿ ಕಲ್ಲೆ ಶಿವೋತ್ತಮ ರಾವ್ ಅವರನ್ನು ಬೆಂಗಳೂರಿನ ಅವರ ಯಲಹಂಕ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಮುದ್ರಿತವಾದದ್ದು ಒಂದು ದಾಖಲೆಯಿದ್ದಂತೆ. ಹಾಗಾಗಿ ಓದುಗರಿಗೆ ಅದರ ಮೇಲೆ ನಂಬಿಕೆ ಹೆಚ್ಚು. ಆ ನಂಬಿಕೆಯನ್ನು ಉಳಿಸಿಕೊಳ್ಳಲು ಇಂದಿನ ಪತ್ರಿಕೋದ್ಯಮ ಶ್ರಮಿಸಬೇಕಾಗಿದೆ. ನಾನು ನನ್ನ ಇಡೀ ಬದುಕಿನಲ್ಲಿ ನುಡಿದಂತೆ ನಡೆದಿದ್ದೇನೆ. ದಲಿತರು, ಹಿಂದುಳಿದವರಿಗೆ, ದುರ್ಬಲರಿಗೆ ದನಿ ನೀಡಲು ಶ್ರಮಿಸಿದ್ದೇನೆ. ಇದು ನನಗೆ ಧನ್ಯತೆಯನ್ನು ನೀಡಿದೆ. ಬದುಕು ಸಿದ್ಧಾಂತ ಎರಡನ್ನೂ ಒಟ್ಟಿಗೆ ಕೊಂಡೊಯ್ದಿದ್ದೇನೆ ಎಂಬ ಹೆಮ್ಮೆ ಇದೆ ಎಂದರು.

ಲೋಹಿಯಾ, ಗೋಪಾಲಗೌಡ, ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಜೊತೆಗೆ ಒಡನಾಡಿದ ನನಗೆ ಪತ್ರಿಕೋದ್ಯಮ ಎನ್ನುವುದು ಜನ ಸಮುದಾಯಕ್ಕೆ ಸಮಾನತೆಯನ್ನು ತಂದುಕೊಡುವ ಒಂದು ಸೇತುವೆಯಾಗಿತ್ತು. ಹಾಗಾಗಿ ನನ್ನ ಪತ್ರಿಕೆಯ ಮೂಲಕ ಅದನ್ನು ಮಾಡಲು ಶ್ರಮಿಸಿದ್ದೇನೆ ಎಂದರು.

ಇಷ್ಟೆಲ್ಲಾ ಮಾಡಿದ ನನ್ನನ್ನು ಇಂದಿನ ಪೀಳಿಗೆ ನೆನಪಿಟ್ಟುಕೊಂಡಿಲ್ಲವೇನೋ ಎಂದುಕೊಳ್ಳುತ್ತಿರುವಾಗ ಕಾರ್ಯ ನಿರತ ಪತ್ರಕರ್ತರ ಸಂಘ ಮನೆಗೇ ಬಂದು ನನಗೆ ಗೌರವಿಸಿದ್ದು ನನಗೆ ಮನದುಂಬಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟಪತಿ ಹುದ್ದೆಗೆ ಒಬ್ಬ ಹೆಣ್ಣು ಮಗಳು ಶ್ರೀಮತಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿರುವ ಕಾರಣ, ರಾಷ್ಟ್ರಪತಿ ಬದಲಿಗೆ ರಾಷ್ಟ್ರಾಧ್ಯಕ್ಷೆ ಎಂದು ಸಂಬೋದಿಸುವುದು ಸೂಕ್ತ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, 1932ರಲ್ಲಿ ಡಿವಿಜಿ ಅವರು ಹುಟ್ಟುಹಾಕಿದ ಪತ್ರಕರ್ತರ ಸಂಘ ಮುನ್ನಡೆಯಲು ಅನೇಕ ಹಿರಿಯರು ಕಾರಣರಾಗಿದ್ದಾರೆ. ಹಾಗೆಯೇ ನಮ್ಮ ಪತ್ರಿಕೋದ್ಯಮಕ್ಕೆ ಘನತೆಯನ್ನು ತಂದುಕೊಟ್ಟ ಮಹತ್ವದ ಹಿರಿಯರಿದ್ದಾರೆ. ಅಂತಹವರಲ್ಲಿ ಕಲ್ಲೆ ಶಿವೋತ್ತಮ ರಾವ್ ಅವರು ಮುಖ್ಯರು. ಹಾಗಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿರಿಯರನ್ನು ಭೇಟಿ ಮಾಡುವ, ಅವರ ಅನುಭವಗಳಿಗೆ ಕಿವಿಯಾಗಲು ಅದನ್ನು ಇಂದಿನ ಪತ್ರಿಕೋದ್ಯಮದಲ್ಲಿ ಅಳವಡಿಸಿಕೊಳ್ಳಲು 'ಮನೆಯಂಗಳದಲ್ಲಿ ಮನದುಂಬಿ ಗೌರವ' ಎನ್ನುವ ಈ ಯೋಜನೆ ರೂಪಿಸಲಾಯಿತು ಎಂದರು.

ಕಲ್ಲೆ ಶಿವೋತ್ತಮ ರಾವ್ ಅವರ ಮಗಳು ಅನಿತಾ ಪ್ರಿಯಕಾರಿಣಿ ಕಲ್ಲೆ ಅವರು ಮಾತನಾಡಿ, ಅಪ್ಪ ಪತ್ರಿಕೋದ್ಯಮದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾಗ ನಮ್ಮ ಕುಟುಂಬ ಅವರಿಗೆ ಬೆನ್ನೆಲುಬಾಗಿ ನಿಂತಿದ್ದನ್ನು ಸ್ಮರಿಸಿದರು. ಅವರ ತತ್ವ ಆದರ್ಶಗಳನ್ನು  ಮನೆಯೊಳಗೂ ಜಾರಿಯಲ್ಲಿಟ್ಟಿದ್ದರು. ಅದು ನಮಗೆ ದಾರಿದೀಪವಾಯಿತು ಎಂದರು.

ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್, ಕಂಕ ಮೂರ್ತಿ, ಪುತ್ರ ಅಜಿತ್ ಅಶುತೋಷ್ ಕಲ್ಲೆ ಈ ಸಂದರ್ಭದಲ್ಲಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ ಸ್ವಾಗತಿಸಿದರು. ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಕೆ.ವಿ.ಪರಮೇಶ್, ದೇವರಾಜ್‌ ಹಾಜರಿದ್ದರು.

ಅಮೃತ ಸ್ವಾತಂತ್ರ್ಯದ ಅಂಗವಾಗಿ  ಪತ್ರಿಕೋದ್ಯಮದ ಹಿರಿಯರಿಗೆ 'ಮನೆಯಂಗಳದಲ್ಲಿ ಮನದುಂಬಿ ನಮನ' ಕಾರ್ಯಕ್ರಮ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಅಮೃತ ಸ್ವಾತಂತ್ರ್ಯದ ಪ್ರಯುಕ್ತ ಸುದ್ದಿಮನೆಯಲ್ಲಿ ಕೆಲಸ ಮಾಡಿದ ಅತ್ಯಂತ ಹಿರಿಯ ಪತ್ರಕರ್ತರನ್ನು ಅವರ ಮನೆ ಅಂಗಳದಲ್ಲಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನ ಮಾಸಾಂತ್ಯದ ತನಕ ನಡೆಯಲಿದೆ ಎಂದು ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ.

ಕನ್ನಡ ಪತ್ರಿಕೋದ್ಯಮವನ್ನು ಶ್ರದ್ಧೆ ಮತ್ತು ಬದ್ದತೆಯಿಂದ ರೂಪಿಸಿದ ಸುದ್ದಿಮನೆಯ ಹಿರಿಯ ಪತ್ರಕರ್ತರು  ನಮ್ಮೆಲ್ಲರಿಗೆ ಆದರ್ಶ ಮತ್ತು ಸ್ಪೂರ್ತಿಯ ಬೆಳಕು. ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಕರ್ತರಾಗಿ ಬದ್ದತೆಯಿಂದ ಕೆಲಸ ಮಾಡಿದ ಹಿರಿಯರು ನಮ್ಮ ನಡುವೆ ಇದ್ದಾರೆ. ಅವರನ್ನು ಒಳಗೊಂಡು ಸ್ವಾತಂತ್ರ್ಯ ನಂತರದ ಕಾಲಘಟ್ಟದ ಹಿರಿಯ ಪತ್ರಕರ್ತರನ್ನು ಗೌರವಕ್ಕೆ ಆಯ್ಕೆ ಮಾಡಿ, ಸಂಘವೇ ಅವರ ಮನೆ ಅಂಗಳಕ್ಕೆ ತೆರಳಿ ವೃತ್ತಿ ಗೌರವ ಸಮರ್ಪಣೆ ಮಾಡುವುದು ಈ ಕಾರ್ಯಕ್ರಮ ಆಶಯ. ಈ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಬೆಂಗಳೂರಿನಲ್ಲಿ 14ರಂದು ಭಾನುವಾರ ಚಾಲನೆ ನೀಡಲಾಗುವುದು 

ಪತ್ರಿಕೆ ಜವಾಬ್ದಾರಿಯುತ, ಟೀವಿ ಹೊಣೆಗೇಡಿ: ಸಿಜೆಐ ಚಾಟಿ

ವಿಶಾಲ ಕರ್ನಾಟಕ, ಪ್ರಜಾವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಜನಪ್ರಗತಿ ಪತ್ರಿಕೆಯ ಸಂಪಾದಕರಾಗಿದ್ದ ಹಿರಿಯ ಚೇತನ ಕಲ್ಲೆ ಶಿವೋತ್ತಮ ರಾವ್ ಅವರಿಗೆ ತೊಂಬತ್ತರಡು (92) ವಸಂತಗಳು ತುಂಬಿದ ಸಂಭ್ರಮ. ಈ ಹೊತ್ತಿನಲ್ಲಿ ಮೊದಲಿಗೆ ಅವರಿಗೆ ಕೆಯುಡಬ್ಲ್ಯೂಜೆ ವತಿಯಿಂದ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮವನ್ನು ದಿನಾಂಕ 14.8.2022 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಅವರ ಮನೆಯ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.

ಪತ್ರಿಕೆಗಳು ಪಕ್ಷದ ಮುಖವಾಣಿ ಆಗಬಾರದು: ಈಶ್ವ​ರ​ಪ್ಪ

ಅಭಿಯಾನ: ಆಯಾ ಜಿಲ್ಲೆ ಮತ್ತು ತಾಲ್ಲೂಕು ಪತ್ರಕರ್ತರ ಸಂಘಗಳು ಇದೇ ಮಾದರಿಯಲ್ಲಿ ಹಿರಿಯ ಪತ್ರಕರ್ತರನ್ನು ಭೇಟಿ ಮಾಡಿ ಗೌರವ ಸಲ್ಲಿಸುವ ಅಭಿಯಾನ ಮಾಸಾಂತ್ಯದ ತನಕ ನಡೆಯಲಿದೆ ಎಂದು ತಗಡೂರು ತಿಳಿಸಿದ್ದಾರೆ.

Follow Us:
Download App:
  • android
  • ios