ಕಲಘಟಗಿ (ಮಾ.30):  ಮಾಜಿ ಶಾಸಕ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ರೆವರೆಂಡ್‌ ಫಾದರ್‌ ಡಾ. ಜೇಕಬ್ ಪಿ.ಜೆ. (90) ಸೋಮವಾರ ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾದರು. 

ಕೇರಳದ ಮೀನಂಕುಲಂನಲ್ಲಿ ಜನಿಸಿದ ರೆವರೆಂಡ್‌ ಫಾದರ್‌ ಜೇಕಬ್‌ ಅವರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಬೆಳಗಾವಿಯಲ್ಲೇ ಧರ್ಮಪ್ರಾಂತದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 

ನಂತರ 1964ರಲ್ಲಿ ಕಲಘಟಗಿ ತಾಲೂಕಿನ ತುಮರಿಕೊಪ್ಪ ಜಪಮಾಲೆ ಮಾತೆಯ ದೇವಾಲಯಕ್ಕೆ ವಿಚಾರಣಾ ಗುರುಗಳಾಗಿ ಬಂದ ಅವರು, ಧಾರ್ಮಿಕ ಬೋಧನೆಯೊಂದಿಗೆ ಕಲಘಟಗಿ ತಾಲೂಕಿನಾದ್ಯಂತ ಸಮಾಜ ಸೇವಾ ಕಾರ್ಯಗಳ ಮೂಲಕ ಜನಾನುರಾಗಿಯಾಗಿದ್ದರು. 1982ರಲ್ಲಿ ಕಲಘಟಗಿಯಲ್ಲಿ ಗುಡ್‌ನ್ಯೂಸ್‌ ಪದವಿಪೂರ್ವ ಕಾಲೇಜು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದರು.

ಕೊರೋನಾ 2ನೇ ಅಲೆಯ ಭೀತಿ ಸರ್ಕಾರಕ್ಕೆ ಮಾತ್ರ: ತಲೇನೇ ಕೆಡಿಸಿಕೊಳ್ಳದ ಜನ..! .

1982-83ರಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿವಿಯ ಗೌರವ ಡಾಕ್ಟರೇಟ್‌ ಹೀಗೆ ಹಲವು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದರು. ಇಂದು ಸಂಜೆ 4ಕ್ಕೆ ಕಲಘಟಗಿಯ ಸೆಂಟ್‌ ಮೇರಿಸ್‌ ಶಾಲೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.