ಶಿವಾನಂದ ಗೊಂಬಿ

ಹುಬ್ಬಳ್ಳಿ(ಮಾ.24):  ಕೊರೋನಾ ಪೂರ್ಣ ಪ್ರಮಾಣದಲ್ಲಿ ದೂರವಾಗಿಲ್ಲ. ಎರಡನೆಯ ಅಲೆಯ ಭೀತಿ ಎಲ್ಲೆಡೆ ಶುರುವಾಗಿದೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಮಾತ್ರ ಜನರಿಗೆ ಕೊರೋನಾ ಭಯವೇ ಕಾಣಿಸುತ್ತಿಲ್ಲ. ಮಾಸ್ಕ್‌ಗಳೆಲ್ಲ ಮಾಯ. ಸ್ಯಾನಿಟೈಸರ್‌ ಬಳಕೆ ನಿಂತು ಹೋಗಿದೆ. ಸಾಮಾಜಿಕ ಅಂತರದ ಪ್ರಶ್ನೆಯೇ ಎತ್ತುವಂತಿಲ್ಲ!

ಹೌದು, ನೆರೆಯ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೋನಾ ಎರಡನೆಯ ಅಲೆ ಆಗಲೇ ಲಗ್ಗೆ ಇಟ್ಟಿದೆ. ಹೀಗಾಗಿ, ಕರ್ನಾಟಕದಲ್ಲಿ ಎಲ್ಲಿ ಕೊರೋನಾ 2ನೆಯ ಅಲೆ ಲಗ್ಗೆ ಇಡುತ್ತದೆ ಎಂಬ ಆತಂಕ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ಎಲ್ಲ ಜಿಲ್ಲಾಡಳಿತಗಳಿಗೂ ರಾಜ್ಯ ಸರ್ಕಾರ ಕಳೆದ ವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜಾತ್ರೆ, ಧಾರ್ಮಿಕ ಸಭೆ ಸಮಾರಂಭಗಳನ್ನು ರದ್ದುಪಡಿಸಿ, ಮಾಸ್ಕ್‌ ಕಡ್ಡಾಯಗೊಳಿಸಿ, ಮಾಸ್ಕ್‌ ಹಾಕಿಕೊಳ್ಳದವರಿಗೆ ದಂಡ ವಿಧಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳಿ, ಸ್ಯಾನಿಟೈಸರ್‌ ಬಳಸಿ, ಲಸಿಕಾಕರಣವನ್ನು ಹೆಚ್ಚಿಸಿ ಎಂಬಂತಹ ಸೂಚನೆಗಳನ್ನು ರಾಜ್ಯ ಸರ್ಕಾರ ನೀಡಿದ್ದಾಗಿದೆ.

ಸರ್ಕಾರದ ಆತಂಕದಂತೆಯೇ ಧಾರವಾಡ ಜಿಲ್ಲೆಯಲ್ಲಿ ಒಂದಂಕಿಗೆ ಇಳಿದಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸಣ್ಣದಾಗಿ ಎರಡಂಕಿ ಬರುತ್ತಿದೆ. ಇದು ಜಿಲ್ಲಾಡಳಿತವನ್ನು ಹೈರಾಣು ಮಾಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆಗುತ್ತಾ? ಸಚಿವ ಬೊಮ್ಮಾಯಿ ಹೀಗಂದ್ರು

ನವಲಗುಂದ ತಾಲೂಕಿನ ಶ್ರೀರಾಮಲಿಂಗ ಕಾಮಣ್ಣ ದೇವರ, ಚಾಂಗದೇವರ ಉರೂಸ್‌ ಅನ್ನು ರದ್ದುಪಡಿಸಿದ್ದು ಆಗಿದೆ. ಧಾರ್ಮಿಕ ಸಂಸ್ಥೆಗಳಿಗೆ ಕೋವಿಡ್‌ ನಿಯಮಗಳನ್ನು ಪಾಲಿಸಿ ಎಂಬ ಸೂಚನೆಯನ್ನೂ ಕೊಟ್ಟಿದೆ. ಅದರಂತೆ ಇಲ್ಲಿನ ಸಿದ್ಧಾರೂಢ ಮಠ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಧಾರ್ಮಿಕ ಕೇಂದ್ರ ಹೊರತುಪಡಿಸಿ ಉಳಿದ ಸಾರ್ವಜನಿಕ ಕೇಂದ್ರಗಳಲ್ಲಿ ಕೊರೋನಾ ನಿಯಮಗಳನ್ನು ಪಾಲನೆ ಎಳ್ಳಷ್ಟೂ ಆಗುತ್ತಿಲ್ಲ. ಯಾರೊಬ್ಬರೂ ಮಾಸ್ಕ್‌ ಹಾಕಿಕೊಳ್ಳುವುದಿಲ್ಲ. ಹಾಕಿಕೊಂಡರೂ ಅದು ಎಲ್ಲಿರಬೇಕು ಅಲ್ಲಿರಲ್ಲ. ಇನ್ನೂ ಸಾಮಾಜಿಕ ಅಂತರವಂತೂ ಕೇಳುವಂತೆಯೇ ಇಲ್ಲ. ಮಾರುಕಟ್ಟೆ, ಸಾರಿಗೆ ಸಂಸ್ಥೆ ಬಸ್‌, ಸಭೆ ಸಮಾರಂಭ, ಸಿನಿಮಾ ಮಂದಿರ ಸೇರಿದಂತೆ ಎಲ್ಲೂ ಸಾಮಾಜಿಕ ಅಂತರ ಎನ್ನುವುದೇ ಕಾಣಿಸುವುದಿಲ್ಲ. ಗುಂಪು ಗುಂಪಾಗಿ ನಿಂತಿರುವುದು ಕಂಡು ಬರುತ್ತದೆ. ಸ್ಯಾನಿಟೈಸರ್‌ ಬಳಕೆಯಂತೂ ನಿಂತುಹೋಗಿ ತಿಂಗಳುಗಳೇ ಗತಿಸಿದೆ.

ಜಿಲ್ಲಾಡಳಿತ ಏನ್ಮಾಡ್ತಿದೆ?

ಇನ್ನು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಆಗೊಮ್ಮೆ, ಈಗೊಮ್ಮೆ ಮಾಸ್ಕ್‌ ಧರಿಸದವರನ್ನು ಹಿಡಿದು ದಂಡ ವಿಧಿಸುವ ಪ್ರಕ್ರಿಯೆ ಮಾಡಿದಂತೆ ಮಾಡುತ್ತದೆ. ಆದರೆ, ಹೀಗೆ ದಂಡ ವಿಧಿಸಲು ಪ್ರಯತ್ನಿಸಿದ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಜಗಳಕ್ಕೆ ನಿಲ್ಲುವುದೂ ಮಾಮೂಲು ಎಂಬಂತಾಗಿದೆ. ದಂಡ ವಿಧಿಸಲು ಮುಂದಾದರೆ ಸಾಕು ವಾಗ್ವಾದಗಳು ಮಾಮೂಲು ಎಂಬಂತಾಗಿದೆ. ಜಿಲ್ಲಾಧಿಕಾರಿಗಳೇ ದಂಡ ವಿಧಿಸಲು ಮುಂದಾದರೂ ಅವರೊಂದಿಗೆ ಕಳೆದ ವಾರ ವಾಗ್ವಾದಕ್ಕಿಳಿದಿರುವ ಘಟನೆ ನಡೆದಿದ್ದುಂಟು. ಹೀಗೆ ಸಾರ್ವಜನಿಕರಲ್ಲಿ ಕೊರೋನಾ ಭಯವೇ ಇಲ್ಲದಂತಾಗಿರುವುದಂತೂ ಸ್ಪಷ್ಟ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟುಜನರಲ್ಲಿ ಜಾಗೃತಿ ನೀಡಲು ನಿರ್ಧರಿಸಿದ್ದು, ಆ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬುದು ಪ್ರಜ್ಞಾವಂತರ ಆಗ್ರಹ.  ಜಿಲ್ಲಾಡಳಿತ ಏನು ಮಾಡುತ್ತಿದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ.!

ಕೊರೋನಾ ಬಗ್ಗೆ ಜನತೆಯಿಂದ ನಿರ್ಲಕ್ಷ್ಯವಾಗುತ್ತಿದೆ. ಇದು ಸರಿಯಲ್ಲ. ಎರಡನೆಯ ಅಲೆ ಹಬ್ಬಿದರೆ ತುಂಬಾ ಕಷ್ಟವಾಗುತ್ತದೆ. ಆದಕಾರಣ ಜಿಲ್ಲಾಡಳಿತ ಮಾಸ್ಕ್‌ ಕಡ್ಡಾಯಗೊಳಿಸಿ ದಂಡವಿಧಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಮಾಡಬೇಕು ಎಂದು ಕಿಮ್ಸ್‌ ಅಧೀಕ್ಷಕ ಡಾ. ಅರುಣಕುಮಾರ ತಿಳಿಸಿದ್ದಾರೆ.