ಕಮಲಾಪುರ ತಾಲೂಕಿನ ಗಂಡೋರಿ ನಾಲಾ ಜಲಾಶಯದ ಗೇಟ್ ಕೆಟ್ಟು ಒಂದು ವರ್ಷದಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಮಳೆ ಇಲ್ಲದೆ ಬರಗಾಲವಿದ್ದರೂ ನೀರಾವರಿ ಅಧಿಕಾರಿಗಳು ದುರಸ್ತಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಕಲಬುರಗಿ: ಕಮಲಾಪುರ ತಾಲೂಕಿನ ಜನತೆಯ ಜೀವನಾಡಿಯಾದ ಗಂಡೋರಿ ಕಾಲುವೆಗಳಿಗೆ ಸಂಬಂಧಿಸಿ ನೀರಾವರಿ ಅಧಿಕಾರಿಗಳು ಒಂದು ವರ್ಷದಿಂದ ನಿರ್ಲಕ್ಷ್ಯ ವಹಿಸಿದ್ದು, ಈ ಕಾರಣದಿಂದ ನಿತ್ಯವೂ ನೀರು ಪೋಲಾಗುತ್ತಿದೆ.

ತಾಲೂಕಿನ ಬೇಳಕೋಟಾ ಗಂಡೋರಿ ನಾಲ ಜಲಾಶಯದ ಗೇಟ್ ಕೆಟ್ಟು ಹೋಗಿ ಒಂದು ವರ್ಷದಿಂದ ಭಾರಿ ಪ್ರಮಾಣದ ನೀರು ವ್ಯರ್ಥವಾಗುತ್ತಿದ್ದು, ಎಡದಂಡೆ ಕಾಲುವೆಯಿಂದ ನಿತ್ಯ ಕಮಲಾಪುರ ಪಟ್ಟಣ ಸೇರಿದಂತೆ ಮಹಾಗಾಂವ, ದಸ್ತಾಪೂರ, ಕುರಿಕೋಟಾ, ಶಿರಗಾಪೂರ, ಭೂಸಣಗಿ, ಕಣ್ಣುರ್, ಅಂಕಲಗಾ, ನಾಗೂರ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ಹರಿಯುತ್ತಿದೆ.

ದುರಸ್ತಿಯಾಗದ ಕಾಲುವೆ ಗೇಟ್

ಪ್ರಸ್ತುತ ವರ್ಷ ಮಳೆ ಇಲ್ಲದೆ ರೈತರ ಬೆಳೆಗಳು ಸಂಪೂರ್ಣ ಬಾಡಿ ಹೋಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಾಗಿದೆ. ಈ ಪರಿಸ್ಥಿತಿಯಲ್ಲೂ ಕೂಡ ಜಲಾಶಯ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಬೇಜಾವಾಬ್ದಾರಿತನದಿಂದ ಒಂದು ವರ್ಷದಿಂದ ಎಡದಂಡೆ ಕಾಲುವೆ ಗೆಟ್ ದುರಸ್ತಿಯಾಗಿಲ್ಲ. ಈ ಕುರಿತು ಜಲಾಶಯದ ಅಧಿಕಾರಿಯನ್ನು ರೈತರು ಸಂಪರ್ಕಿಸಿದಾಗ ಕರೆ ಸ್ವೀಕರಿಸದೇ ನುಚುಚಿಕೊಳ್ಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಧಿಕಾರಿಗಳಿಗೆ ಎಚ್ಚರಿಕೆ

ಪ್ರಸ್ತುತ ವರ್ಷ ಮಳೆ ಇಲ್ಲದೆ ರೈತರು ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಬಾಡಿ ಹೋಗಿವೆ. ಜನ, ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆ ಬರಗಾಲ ಛಾಯೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ನೀರು ಸಂರಕ್ಷಣೆ ಮಾಡಿಕೊಂಡು ಇಡಬೇಕಾದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ನಿತ್ಯ ಸಾಕಷ್ಟು ನೀರು ವ್ಯರ್ಥವಾಗುತ್ತಿದ್ದು, ಒಂದು ವರ್ಷವಾದರೂ ಗೆಟ್ ದುರಸ್ಥಿಗೆ ಮುಂದಾಗುತ್ತಿಲ್ಲ.

ಮುಂದಿನ ದಿನಗಳಲ್ಲಿ ರೈತರಿಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ಆದರೆ ಅಧಿಕಾರಿಗಳೇ ಹೊಣೆಗಾರರು ಎಂದು ಕಮಲಾಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸುಭಾಷ್ ಬಿರಾದಾರ ಎಚ್ಚರಿಸಿದ್ದಾರೆ.