ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ₹1.14 ಕೋಟಿ ನಗದು ಸಂಗ್ರಹವಾಗಿದೆ. ಇದರೊಂದಿಗೆ 110 ಗ್ರಾಂ ಚಿನ್ನ ಮತ್ತು 340 ಗ್ರಾಂ ಬೆಳ್ಳಿಯೂ ಕಾಣಿಕೆಯಾಗಿ ಬಂದಿದೆ.
ವರದಿ: ಶರಣಯ್ಯ ಎಸ್ ಹಿರೇಮಠ
ಕಲಬುರಗಿ (ಅ.11): ಇಡೀ ರಾಜ್ಯ ಬರಗಾಲದಿಂದ ಕಂಗೆಟ್ಟಿದೆ. ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗವಂತೂ ವಿಪರೀತ ಮಳೆ ಕೊರತೆ ಎದುರಿಸುತ್ತಿದೆ. ಈ ಭೀಕರ ಬರಗಾಲದ ನಡುವೆಯೂ ಕಲಬುರಗಿ ಜಿಲ್ಲೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನದ ಹುಂಡಿಗೆ ಮಾತ್ರ ಬರ ಇಲ್ಲ. ಪ್ರತಿ ಬಾರಿಗಿಂತ ಈ ಬಾರಿ ದತ್ತನ ಹುಂಡಿಗೆ ಹೆಚ್ಚು ಹಣ , ಚಿನ್ನ ಸಂಗ್ರಹವಾಗಿದೆ. ಭಕ್ತರ ಭಕ್ತಿಗೆ ಬರ ಅಡ್ಡಿಯಾಗಿಲ್ಲ. ಹಾಗಾದ್ರೆ ದತ್ತನ ಹುಂಡಿಗೆ ಸಂಗ್ರಹವಾದ ಹಣವೆಷ್ಟು ? ಎನ್ನುವುದಕ್ಕೆ ಈ ವರದಿ ಪೂರ್ಣ ಓದಿ.
ಗಾಣಗಾಪೂರ ದತ್ತಾತ್ರೆಯ ದೇವಸ್ಥಾನ ರಾಜ್ಯದ ಅತ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪೂರದಲ್ಲಿ ಭೀಮಾ ಅಮರ್ಜಾ ನದಿಗಳ ಸಂಗಮದ ಬಳಿ ಇರುವ ಈ ದೇವಸ್ಥಾನ ದೇಶದಲ್ಲಿಯೇ ಹೆಸರುವಾಸಿಯಾದ ಪುಣ್ಯಕ್ಷೇತ್ರಗಳಲ್ಲಿ ಒಂದು ಎನಿಸಿಕೊಂಡಿದೆ.
ಹೊರ ರಾಜ್ಯಗಳ ಭಕ್ತರೇ ಹೆಚ್ಚು
ಈ ದತ್ತಾತ್ರೆಯ ದೇವಸ್ಥಾನಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದ ಅತಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡಿನಿಂದ ಅಪಾರ ಪ್ರಮಾಣದ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುವುದು ಸಾಮಾನ್ಯ.
ನಿರ್ಗುಣ ಪಾದುಕೆಗಳಿಗೆ ಪೂಜೆ
ದತ್ತಾತ್ರೆಯರ ಎರಡನೇ ಅವತಾರ ಎಂದು ಭಕ್ತರು ನಂಬುವ ಶ್ರೀ ನರಸಿಂಗ ಸರಸ್ವತಿ ಸ್ವಾಮಿ ಅವರದ್ದು ಎನ್ನಲಾದ ನಿರ್ಗುಣ ಪಾದುಕೆಗಳನ್ನು ಪೂಜಿಸುವುದೇ ಈ ದೇವಸ್ಥಾನದ ವಿಶೇಷತೆ. ಅಲ್ಲದೇ ಭೀಮಾ- ಅಮರ್ಜಾ ನದಿಗಳ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ನಿತ್ಯ ಸಹಸ್ರಾರು ಜನ ಇಲ್ಲಿಗೆ ಬಂದು ಭೀಮಾ - ಅಮರ್ಜಾ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ದೇವಸ್ಥಾನದಲ್ಲಿ ನಿರ್ಗುಣ ಪಾದುಕೆಗಳ ದರ್ಶನ ಮಾಡಿ ತೆರಳುತ್ತಾರೆ. ಇಲ್ಲಿ ಸೇವೆ ಮಾಡುತ್ತಾ ಇರುವುದರಿಂದ ಮಾನಸಿಕ ಕಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯೂ ಬಹಳಷ್ಟು ಭಕ್ತರು ಹೊಂದಿದ್ದಾರೆ. ಜೊತೆಗೆ ಧ್ಯಾನ, ಜಪ ಮಾಡಿದರೆ ಪುಣ್ಯ ಪ್ರಾಪ್ತಿ ಎನ್ನುವ ನಂಬಿಕೆ ಇದೆ. ಹಾಗಾಗಿ ದೇಶದ ವಿವಿದೆಡೆಯ ಸಾಧುಗಳು ಇಲ್ಲಿ ಧ್ಯಾನ, ಜಪ ಮಾಡುತ್ತಾರೆ.
ಮೂರು ತಿಂಗಳಿಗೊಮ್ಮೆ ಹುಂಡಿ ಎಣಿಕೆ
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ಭಕ್ತರು ನೀಡುವ ಕಾಣಿಕೆಯೂ ಹೆಚ್ಚುತ್ತಲೇ ಇದೆ. ಹಾಗಾಗಿಯೇ ಪ್ರತಿ ಮೂರು ತಿಂಗಳಿಗೊಮ್ಮೆ ಈ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಆಡಳಿತಾಧಿಕಾರಿ ಅವರ ಸಮ್ಮುಖದಲ್ಲಿ ದೇವಸ್ಥಾನದ ಹತ್ತಾರು ಸಿಬ್ಬಂದಿಗಳು ಹುಂಡಿಯಲ್ಲಿನ ಹಣ ಎಣಿಕೆಯಲ್ಲಿ ತೊಡಗುತ್ತಾರೆ. ನಿನ್ನೆ ನಡೆದ ಈ ಬಾರಿಯ ಹುಂಡಿ ಎಣಿಕೆ ಪೂರ್ಣಗಡಾಗ ಒಟ್ಟು 1 ಕೋಟಿ 14 ಲಕ್ಷ ರೂಪಾಯಿ ನಗದು, 110 ಗ್ರಾಮ್ ಅಂದರೆ 11 ತೊಲಾ ಚಿನ್ನ ಹಾಗೂ 340 ಗ್ರಾಮ್ ಬೆಳ್ಳಿ ಸಂಗ್ರಹವಾಗಿರುವುದು ದೃಢಪಟ್ಟಿದೆ.
ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಹೆಚ್ಚು ಸಂಗ್ರಹ
ಕಳೆದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಈ ಬಾರಿ ದತ್ತನ ಹುಂಡಿಯಲ್ಲಿ ಸಂಗ್ರಹವಾಗಿರುವುದು ಹೆಚ್ಚು ಹಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತ್ರೈಮಾಸಿಕ ಅವಧಿ ಎಣಿಕೆಯಲ್ಲಿ 99 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಈ ಬಾರಿ 15 ಲಕ್ಷ ಹೆಚ್ಚುವರಿ ಹಣ ಜಮೆ ಆಗುವ ಮೂಲಕ ರಾಜ್ಯವನ್ನೇ ಕಾಡುತ್ತಿರುವ ಬರಗಾಲದ ಪರಿಸ್ಥಿತಿ ಇಲ್ಲಿ ಪರಿಣಾಮ ಬೀರಿಲ್ಲ. ದತ್ತನ ಮೇಲಿನ ಭಕ್ತಿಗೆ ಬರದ ಕರಿನೆರಳು ಕಿಂಚಿತ್ತೂ ಬೀರಿಲ್ಲ ಎನ್‌ಉವುದಕ್ಕೆ ಈ ಬಾರಿ ಹುಂಡಿಯಲ್ಲಿ ಪತ್ತೆಯಾದ 1.14 ಕೋಟಿ ಹಣವೇ ಸಾಕ್ಷಿಯಾಗಿದೆ.
ಸಮೃದ್ದಿ ಕೊಡಪ್ಪಾ ದತ್ತಾತ್ರೆಯ
ದೇಶದೆಲ್ಲೆಡೆ ಎಲ್ ನಿನೋ ಪರಿಣಾಮ ಮಳೆ ಕೊರತೆಯಾಗಿ ಬರಗಾಲ ಸೃಷ್ಟಿಯಾಗಿದೆ. ಈ ಭೀಕರ ಬರದಿಂದ ಕಾಪಾಡಪ್ಪಾ ದತ್ತಾತ್ರೆಯ ಅಂತ ಜನ ಬೇಡಿಕೊಳ್ಳುತ್ತಿದ್ದಾರೆ. ಜನ ಹೆಚ್ಚು ಪ್ರಮಾಣದಲ್ಲಿ ದತ್ತನ ಮೊರೆ ಹೋಗುತ್ತಿರುವುದಕ್ಕೆ ಹುಂಡಿಯಲ್ಲಿ ಮೂರು ತಿಂಗಳಲ್ಲಿ ಸಂಗ್ರಹವಾದ ಹಣವೇ ಸಾಕ್ಷಿಯಾಗಿದೆ. ಭಕ್ತರ ಕೋರಿಕೆಯಂತೆ ಭಗವಾನ್ ದತ್ತಾತ್ರೆಯ , ದೇಶಕ್ಕೆ ಮಳೆ ಭಾಗ್ಯ ಕರುಣಿಸಲಿ. ದತ್ತನ ಕೃಪೆಯಿಂದ ರಾಜ್ಯ ಸಹಿತ ಇಡೀ ದೇಶದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ದಿ ನೆಲೆಸಲಿ ಎನ್ನುವುದಷ್ಟೇ ಭಕ್ತರ ಆಶಯವಾಗಿದೆ.


