ಕಲಬುರಗಿ- ದೆಹಲಿಗೆ 2 ಗಂಟೆ ನೇರ ವಿಮಾನ ಹಾರಾಟ ಆರಂಭ

ಕಲಬುರಗಿ ಹಾಗೂ  ರಾಷ್ಟ್ರ ರಾಜಧಾನಿ  ದೆಹಲಿ ನಡುವೆ ನೇರ ವಿಮಾನ ಹಾರಾಟ ಪ್ರಕ್ರಿಯೆ ಆರಮಭವಾಗಿದೆ. 

Kalaburagi Delhi  Plane Service begins snr

ಕಲಬುರಗಿ (ನ.19):  ಕಲಬರಗಿಯಿಂದ ದೆಹಲಿಗೆ ವಿಮಾನ ಯಾನ ಸೇವೆ ನ.18ರ ಬುಧವಾರದಿಂದ ಆರಂಭಗೊಂಡಿದೆ, ಹೀಗಾಗಿ ಇನ್ಮುಂದೆ ಕಲ್ಯಾಣ ನಾಡಿನ ಜನತೆಗೆ ದೆಹಲಿ ದೂರವೇನಲ್ಲ.

ಬಿಸಿಲೂರು ಕಲಬುರಗಿ ಹಾಗೂ ಕಲ್ಯಾಣ ನಾಡಿನ ಜನತೆ ಸುಮಾರು 1800 ಕಿ.ಮೀ. ದೂರದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಗೆ ಈಗ ಎರಡು ಗಂಟೆಯಲ್ಲಿ ತಲುಪಬಹುದಾಗಿದೆ. ಕಲಬುರಗಿ-ದೆಹಲಿ (ಹಿಂಡನ್‌) ವಿಮಾನ ಸೇವೆಗೆ ಕಲಬುರಗಿ ಸಂಸದ ಡಾ. ಉಮೇಶ್‌ ಜಾಧವ್‌ ಚಾಲನೆ ನೀಡಿದ್ದಾರೆ.

ಇದರೊಂದಿಗೆ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜನರ ಬಹುದಿನಗಳ ದೆಹಲಿ ವಿಮಾನ ಹಾರಾಟದ ಕನಸು ಇಂದು ಈಡೇರಿದೆ. ಶ್ರೀನಿವಾಸ ಸರಡಗಿ ಬಲಿಯಲ್ಲಿರುವ ಕಲಬುರಗಿ ಏರ್ಪೋರ್ಟ್‌ನಲ್ಲಿ ದೀಪ ಬೆಳಗಿಸಿ, ಕೇಕ್‌ ಕತ್ತರಿಸಿ, ಮೊದಲನೇ ಪ್ರಯಾಣಿಕರಿಗೆ ಬೋರ್ಡಿಂಗ್‌ ಪಾಸ್‌ ನೀಡುವ ಮೂಲಕ ಸಂಸದ ಡಾ. ಜಾಧವ್‌ ದಿಲ್ಲಿ ವಿಮಾನ ಸೇವೆಗೆ ಚಾಲನೆ ನೀಡಿದರು.

ವಾರಕ್ಕೆ 3 ದಿನ ಓಡಾಟ:

ಸ್ಟಾರ್‌ ಏರ್‌ ವಿಮಾನ ದೆಹಲಿ (ಹಿಂಡನ್‌)ಗೆ ವಾರದಲ್ಲಿ ಮೂರು ದಿನ ಓಡಾಟ ನಡೆಸಲಿದೆ. ಮಂಗಳವಾರ, ಬುಧವಾರ ಹಾಗೂ ಶನಿವಾರಗಳಂದು ಪ್ರತಿದಿನ ಕಲಬುರಗಿಯಿಂದ ಬೆಳಿಗ್ಗೆ 10.20ಕ್ಕೆ ಹೊರಟು, ಮಧ್ಯಾಹ್ನ 12.40ಕ್ಕೆ ದೆಹಲಿ ತಲುಪಲಿದೆ. ಇದೇ ದಿನಗಳಂದು ಮಧ್ಯಾಹ್ನ 1.10ಕ್ಕೆ ದೆಹಲಿಯಿಂದ ಹೊರಟು 3.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ.

ವಿಮಾನಕ್ಕಿಂತ 2 ಪಟ್ಟು ವೇಗ, ಹೈಪರ್‌ ಲೂಪ್‌ನಲ್ಲಿ ಮಾನವ ಸಂಚಾರ ಯಶಸ್ವಿ! .

ಶೀಘ್ರ ಪೈಲಟ್‌ ತರಬೇತಿ ಕೇಂದ್ರ ಆರಂಭ:

ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ವಿಮಾನಗಳ ಪೈಲಟ್‌ ತರಬೇತಿ ಕೇಂದ್ರ ಆರಂಭಿಸಲಾಗುತ್ತದೆ ಎಂದು ಸಂಸದ ಡಾ. ಉಮೇಶ್‌ ಜಾಧವ್‌ ಅವರು ತಿಳಿಸಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್‌ ಅಕಾಡೆಮಿ (ಐಜಿಆರ್‌ಯುಎ) ವತಿಯಿಂದ ಪೈಲಟ್‌ ತರಬೇತಿ ಕೇಂದ್ರ ಆರಂಭವಾಗುತ್ತಿದ್ದು, ಈಗಾಗಲೇ 4 ಟ್ರೈನಿಂಗ್‌ ವಿಮಾನಗಳನ್ನು ಕಲಬುರಗಿಗೆ ಕಳುಹಿಸಲು ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಜ್ಞಾನೇಶ್ವರ್‌ ರಾವ್‌ ಅವರು ಇಂದು ದೆಹಲಿಗೆ ತೆರಳಿ ತರಬೇತಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಪೈಲಟ್‌ ತರಬೇತಿ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕದ ಪೈಲಟ್‌ ಉದ್ಯೋಗಾಂಕ್ಷಿಗಳು ತರಬೇತಿ ಪಡೆದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದರು.

ರಾತ್ರಿ ವಿಮಾನ ಸೇವೆ:

ಮುಂದಿನ ದಿನಗಳಲ್ಲಿ ಕಲಬುರಗಿ ವಿಮಾನನಿಲ್ದಾಣದಿಂದ ರಾತ್ರಿ ವೇಳೆಯೂ ವಿಮಾನಯಾನ ಸಹ ಆರಂಭಿಸಲಾಗುತ್ತದೆ. ನಾನು ಈ ಸಂಬಂಧ ಸಂಸತ್ತಿನಲ್ಲಿ ಹಲವು ಬಾರಿ ಪ್ರಶ್ನೆ ಕೇಳಿದಾಗ, ಇದೇ ಡಿಸೆಂಬರ್‌ನಿಂದ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂಬ ಬಗ್ಗೆ ಸಚಿವರು ಉತ್ತರ ನೀಡಿರುತ್ತಾರೆ. ಆದರೆ, ಕೋವಿಡ್‌-19 ಹಿನ್ನೆಲೆಯಲ್ಲಿ 2021 ಜುಲೈಗೆ ವಿಮಾನಗಳ ರಾತ್ರಿ ಸಂಚಾರ ಶುರುವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಹಾಗೆಯೇ ಸರಕು ಸಾಗಾಣೆ (ಕಾರ್ಗೋ) ವಿಮಾನ ಸಂಚಾರಕ್ಕೂ ಅವಕಾಶ ದೊರೆಯುತ್ತಿದೆ ಎಂದು ಅವರು ಹೇಳಿದರು.

ಕೋವಿಡ್‌-19 ಸಂದರ್ಭದಲ್ಲಿಯೂ ಕಲಬುರಗಿ ವಿಮಾನ ನಿಲ್ದಾಣ ದೇಶದಲ್ಲೇ ಅತಿಹೆಚ್ಚು ಚಟುವಟಿಕೆಯಿಂದ ಕೂಡಿರುವ ವಿಮಾನ ನಿಲ್ದಾಣವಾಗಿದೆ ಎಂದು ಹೇಳಿದರು. ಮುಂಬೈ, ತಿರುಪತಿ,ಹುಬ್ಬಳ್ಳಿ, ಹೈದ್ರಾಬಾದ್‌ಗಳಿಗೂ ಮುಂದಿನ ದಿನದಲ್ಲಿ ವಿಮಾನಯಾನ ಆರಂಭವಾಗಲಿದೆ ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮೂಡ್‌, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ್‌, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಜ್ಞಾನೇಶ್ವರ್‌ ರಾವ್‌, ಸ್ಟಾರ್‌ ಏರ್‌ ನ ಮ್ಯಾನೇಜರ್‌ ಸಪ್ನಿಲ್‌ ಹರ್ಕತ್‌ ಮುಂತಾದವರು ಇದ್ದರು.

Latest Videos
Follow Us:
Download App:
  • android
  • ios