ಕರೋನಾ ವೈರಸ್‌ ಭೀತಿ: ಕಲಬರಗಿಯಲ್ಲಿ ಶಾಲಾ, ಕಾಲೇಜುಗಳಿಗೆ ಒಂದು ವಾರ ರಜೆ

ಕೊರೋನಾ ವೈರಸ್‌ ಹರಡುವುದನ್ನ ತಡೆಯಲು ಸೂಕ್ತ ಕ್ರಮ| ಕಲಬುರಗಿಯಲ್ಲಿ ಕೊರೋನಾ ವೈರಸ್‌ನಿಂದ 75 ವರ್ಷದ ವೃದ್ಧ ಸಾವು| ಶರಣಬಸವೇಶ್ವರ ಜಾತ್ರೆ ನಡೆಸದಂತೆ ಅಪ್ಪಾ ಅವರಿಗೆ ಮನವರಿಕೆ| 

Kalaburagi DC Sharath B Talks over Prevent Coronavirus

ಕಲಬುರಗಿ(ಮಾ.13): ಮಾರಕ ಕೊರೋನಾ ವೈರಸ್‌ನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸೋಂಕು ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಗರದ ಇಎಸ್ಐ ಆಸ್ಪತ್ರೆಯಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗಿದೆ. ನಗರ ಹಾಗೂ ಸುತ್ತ ಮುತ್ತ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್‌ಗಳನ್ನ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಅವರು ಹೇಳಿದ್ದಾರೆ.

"

ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ಅವರು, ಏರ್‌ಪೋರ್ಟ್‌, ರೈಲ್ವೆ ಸ್ಟೇಷನ್ , ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಜನ ಸೇರುವುದಕ್ಕೆ ನಿರ್ಭಂದ ಹೇರುತ್ತಿದ್ದೇವೆ. ಶರಣಬಸವೇಶ್ವರ ಜಾತ್ರೆ ನಡೆಸದಂತೆ ಅಪ್ಪಾ ಅವರಿಗೆ ಮನವರಿಕೆ ಮಾಡಿದ್ದೇವೆ. ನಮ್ಮ ಕುಟುಂಬದವರು ಮಾತ್ರ ಜಾತ್ರೆ ಮಾಡುತ್ತೇವೆ. ಜನಸಾಮಾನ್ಯರಿಗೆ ತಡೆಯಲು ಏನು ಕ್ರಮ ಕೈಗೊಳ್ಳುತ್ತಿರೋ ತಗೊಳ್ಳಿ ಅಂತ ಅಪ್ಪಾ ಅವರು ಹೇಳಿದ್ದಾರೆ. ಜಾತ್ರೆಗೆ ಬಂದವರಿಗೆ ವಾಪಾಸ್ ಹೋಗಲು ಸೂಚಿಸುತ್ತಿದ್ದೇವೆ. ಬರುವವರನ್ನು ತಡೆಯಲು ಕೂಡ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಮಹಾಮಾರಿ ಕರೋನಾಗೆ ಕರ್ನಾಟಕದಲ್ಲೇ ಮೊದಲ ಬಲಿ..ಎಚ್ಚರ ಎಚ್ಚರ

ಧಾರ್ಮಿಕ ಸಾಮೂಹಿಕ ಪ್ರಾರ್ಥನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದೇವೆ. ಜೆಮ್ಸ್‌ನಲ್ಲಿ ಟೆಸ್ಟಿಂಗ್ ಪ್ರಾರಂಭಿಸಲು ಕಿಟ್ ಬರಬೇಕಿತ್ತು ಇನ್ನು ಬಂದಿಲ್ಲ. ಬೇಗ ಕಳುಹಿಸಲು ಮನವಿ ಮಾಡಿದ್ದೇನೆ. ಅರಿವು ಮೂಡಿಸಲು ವಿಶೇಷ ಜಾಥಾಕಾರ್ಯಕ್ರಮಗಳನ್ನ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳು ದಿನದಲ್ಲಿ ಮೂರು ಬಾರಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಕೆಮ್ಮು, ಜ್ವರ,ನೆ ಗಡಿ ರೋಗಿ ಬಂದರೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಕೊರೋನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯನ್ನ ಯಾರೆಲ್ಲ ಭೇಟಿ ಮಾಡಿದ್ದಾರೆ ಅವರನ್ನ ಅವರನ್ನು ಇಎಸ್ಐ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ. ಮೃತ ವ್ಯಕ್ತಿ 31 ಜನರನ್ನ ನೇರ ಸಂಪರ್ಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅವರಲ್ಲಿ ಐವರಿಗೆ ನೆಗಡಿ ಕೆಮ್ಮು ಕಂಡು ಬಂದಿದೆ. ಚಿಕಿತ್ಸೆಗೆ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ.31 ಜನರ ನೇರ ಸಂಪರ್ಕ ಹೈ ರಿಸ್ಕ್‌ ಅಂತ ಪರಿಗಣಿಸಿದ್ದೇವೆ. ಜಿಲ್ಲಾದ್ಯಂತ ಪರೀಕ್ಷೆ ಹೊರತುಪಡಿಸಿ ಶಾಲಾ, ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ನಗರದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಮಾಲ್‌ಗಲೂ ಸಹ ಒಂದು ವಾರ ಮುಚ್ಚಲು ಸೂಚಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ ಎಂದು ತಿಳಿಸಿದ್ದಾರೆ.

ಪ್ರತಿಭಟನಾಕಾರರಿಗೂ ನಿರ್ಬಂಧ ಹೇರಲಾಗಿದೆ. ಗುಂಪಿನಲ್ಲಿ ಕೊರೋನಾ ವೈರಸ್‌ ಹರಡುವುದರಿಂದ ಪ್ರತಿಭಟನೆಗಳನ್ನ ಕೈಬಿಡುವಂತೆ ಮನವಿ ಮಾಡಲಾಗಿದೆ. ವಿದೇಶಕ್ಕೆ ಪ್ರಯಾಣ ಮಾಡಿ ಹಿಂದಿರುಗಿ ಬಂದವರು ಸ್ವಯಂ ಪ್ರೇರಿತವಾಗಿ ತಪಾಸಣೆ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಶರತ್ ಮನವಿ ಮಾಡಿದ್ದಾರೆ.

ಈ ವೇಳೆ ಸಿಇಓ ಡಾ. ರಾಜಾ, ಪೊಲಿಸ್ ಕಮಿಷನರ್ ಎಂ.ಎನ್.ನಾಗರಾಜ್, ಎಸ್ಪಿ ಯಡಾ ಮಾರ್ಟಿನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

ದುಬೈನಿಂದ ಬಂದಿದ್ದ ಕಲಬುರಗಿಯ 75 ವರ್ಷದ ವೃದ್ಧ ಕೊರೋನಾ ವೈರಸ್‌ನಿಂದ ಮೃತಪಟ್ಟಿರುವುದು ಖಚಿತವಾಗಿದೆ. ಈ ಸಂಬಂಧ ಆರೋಗ್ಯ ಸಚಿವ ಶ್ರೀರಾಮಲು ಅವರೇ ಮಾಹಿತಿ ನೀಡಿದ್ದು, ವೃದ್ಧ ಕರೋನಾದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios