ಕಲಬುರಗಿ(ಮಾ.16): ಮತ್ತೆ ನಾಲ್ವರಲ್ಲಿ ಕೊರೋನಾ ಲಕ್ಷಣ ಕಂಡು ಬಂದಿರುವ ಕಾರಣ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಅವರು ಹೇಳಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಇಬ್ಬರು ಹೊರದೇಶದಿಂದ ಬಂದವರು ಸೇರಿ ನಾಲ್ವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದೇವೆ.ಈ ನಾಲ್ವರನ್ನು ಇಎಸ್ಐ ಆಸ್ಪತ್ರೆಯ ಐಸೊಲೆಷನ್ ವಾರ್ಡ್‌ನಲ್ಲಿ ದಾಖಲು ಮಾಡಿದ್ದೇವೆ ಎಂದು ಹೇಳಿದ್ದಾರೆ. 

ಕೊರೋನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ 71 ಜನರಿಗೆ ಹೋಂ ಐಸೋಲೆಷನ್ ಮಾಡಲಾಗಿದೆ. ಈಗ ಅವರೊಂದಿಗೆ ಸಂಪರ್ಕ ಮಾಡಿರುವ 238 ಜನರ ಪಟ್ಟಿ ಸಿದ್ಧವಾಗಿದೆ. ಈ 238 ಜನರನ್ನೂ ಈಗ ಹೋಂ ಐಸೊಲೆಷನ್‌ಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಗಾಯಕ ಅರ್ಜುನ್ ಇಟಗಿಗೂ ತಟ್ಟಿದ ಕೊರೋನಾ ಭೀತಿ!

61 ಜನ ಇತ್ತೀಚೆಗೆ ವಿದೇಶದಿಂದ ಕಲಬುರಗಿಗೆ ಬಂದಿರುವ ಮಾಹಿತಿ ಇದೆ. ಆದರೆ ಇವರಾರು ನಮಗೆ ಭೇಟಿಯಾಗಿ ಮಾಹಿತಿ ನೀಡುತ್ತಿಲ್ಲ. ಸಾರ್ವಜನಿಕರು ನೀಡಿರುವ ಮಾಹಿತಿ ಆಧರಿಸಿ 61 ಜನರನ್ನು ಗುರುತಿಸಲಾಗಿದೆ. ಈ ವಿಚಾರದಲ್ಲಿ ಯಾರೂ ಮಾಹಿತಿ ಮುಚ್ಚಿಡಬೇಡಿ. ಸಾರ್ವಜನಿಕರೂ ಸಹ ಏನಾದ್ರೂ ಮಾಹಿತಿ ಇದ್ರೆ 278604, 278677 ಟೋಲ್ ಫ್ರೀ ನಂಬರ್ ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಶರತ್ ಬಿ ಮನವಿ ಮಾಡಿಕೊಂಡಿದ್ದಾರೆ.