ಬೆಳಗಾವಿ: ಹಿಪ್ಪರಗಿ ಅಣೆಕಟ್ಟೆ ವೀಕ್ಷಿಸಿದ ಶಾಸಕ ಶ್ರೀಮಂತ ಪಾಟೀಲ
* ಪ್ರವಾಹ ತಗ್ಗಿದ ನಂತರ ಬೆಳೆಗಳಿಗೆ, ಬಿದ್ದ ಮನೆಗಳಿಗೆ ಪರಿಹಾರ ಘೋಷಣೆ
* ಜನರು ಸುರಕ್ಷಿತ ಸ್ಥಳಗಳಲ್ಲಿದ್ದು ಯಾರೂ ಭಯ ಪಡುವ ಅವಶ್ಯಕತೆ ಇಲ್ಲ
* ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶ್ರೀಮಂತ ಪಾಟೀಲ
ಕಾಗವಾಡ(ಜು.31): ಮಹಾರಾಷ್ಟ್ರದ ಕೊಯ್ನಾ, ಮಹಾಬಳೇಶ್ವರ, ಕೊಲ್ಲಾಪೂರ ಹಾಗೂ ಮತ್ತಿತರ ಘಟ್ಟಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಕೃಷ್ಣೆಗೆ ಪ್ರವಾಹ ಬಂದಿದ್ದು ಪ್ರವಾಹ ಪೀಡಿತ ಗ್ರಾಮಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಪ್ರವಾಹ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ಹಿಪ್ಪರಗಿ ಅಣೆಕಟ್ಟೆಗೆ ಭೇಟಿ ನೀಡಿ ಅಲ್ಲಿಯ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕಾಗವಾಡ ತಾಲೂಕಿನ ಜುಗೂಳ, ಮಂಗಾವತಿ, ಶಹಾಪುರ ಕುಸನಾಳ, ಮೊಳವಾಡ, ಕಾತ್ರಾಳ, ಬಣಜವಾಡ, ಕೃಷ್ಣಾ-ಕಿತ್ತೂರ, ಉಗಾರ ಖುರ್ದ ಹಾಗೂ ಉಗಾರ ಬುದ್ರುಕ್ಗ್ರಾಮಗಳಿಗೆ ಪ್ರವಾಹದ ಪರಿಣಾಮ ಆಗಿದ್ದು ಅಲ್ಲಿನ ಜನ ಹಾಗೂ ಜಾನುವಾರುಗಳನ್ನು ದೋಣಿಯ ಮೂಲಕ ಹೊರ ತೆಗೆಯಲಾಗಿದ್ದು ಕಾಳಜಿ ಕೇಂದ್ರಗಳಲ್ಲಿ ಇಡಲಾಗಿದೆ.
ಪ್ರವಾಹದಿಂದ ಬಾಧೆಗೊಳಗಾದ ಗ್ರಾಮಗಳಿಗೆ ಕಾಗವಾಡ, ಶಿರಗುಪ್ಪಿ, ಉಗಾರ ಖುರ್ದ, ಉಗಾರ ಬಿಕೆ, ಐನಾಪುರಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಅಲ್ಲಿ ವಾಸವಾಗಿರುವ ಜನರಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ನಮ್ಮ ಶ್ರೀಮಂತ ತಾತ್ಯಾ ಫೌಂಡೇಶನ್ವತಿಯಿಂದ 25 ಟನ್ಸಕ್ಕರೆ, 25 ಟನ್ರವೆ, 150 ಡಬ್ಬಿ ಎಣ್ಣೆ ಮತ್ತು ದಿನನಿತ್ಯ ತಗಲುವ ಸಾಬುನು, ಫೇಸ್ಟು ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಜಾನುವಾರುಗಳಿಗೆ 60 ಟನ್ಹಿಂಡಿ ನೀಡಲಾಗಿದೆ. ಶುಕ್ರವಾರದಿಂದ ಸರ್ಕಾರದಿಂದ ಜಾನುವಾರುಗಳಿಗೆ ಹಿಂಡಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಪೊಲೀಸ್ ಅಧಿಕಾರಿಯಾಗೋ ಕನಸು..!
ಪ್ರವಾಹದಿಂದ ಬಾಧೆಗೊಳಗಾದ ಎಲ್ಲ ಜನರು ಸುರಕ್ಷಿತ ಸ್ಥಳಗಳಲ್ಲಿದ್ದು ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಯಾವತ್ತೂ ನಿಮ್ಮ ಜೊತೆ ಇದೆ ಎಂದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸಂತ್ರಸ್ತರಿಗೆ ಇನ್ನಷ್ಟು ಕೇಂದ್ರಗಳನ್ನು ತಕ್ಷಣವೇ ಪ್ರಾರಂಭಿಸಿ ಜನರಿಗೆ ಊಟ ವಸತಿ ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸುವಂತೆ ಹೇಳಲಾಗಿದೆ ಎಂದರು.
ಸಿಎಂಗೆ ಮಾಹಿತಿ:
ಕಾಗವಾಡ, ಅಥಣಿ, ಚಿಕ್ಕೋಡಿ, ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ನೀಡುತ್ತೇನೆಂದು ಶ್ರೀಮಂತ ಪಾಟೀಲ ಹೇಳಿದರು. ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ತಕ್ಷಣ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ ಎಂದರು. ಮುಖ್ಯಮಂತ್ರಿಗಳು ಪ್ರವಾಸ ಕೈಗೊಂಡು ಪ್ರವಾಹ ಪರಿಸ್ಥಿತಿ ವೀಕ್ಷಿಸುವವರಿದ್ದರು. ಆದರೆ ಹವಾಮಾನದ ವೈಪರಿತ್ಯದ ನಿಮಿತ್ತ ಬರಲು ಆಗದಿದ್ದರೂ ಜಿಲ್ಲಾಡಳಿತ ಮೂಲಕ ಎಲ್ಲಾ ಮಾಹಿತಿ ಪಡೆದಿದ್ದಾರೆ ಎಂದು ಶ್ರೀಮಂತ ಪಾಟೀಲ ಹೇಳಿದರು.=
ಪ್ರವಾಹ ಇಳಿದ ನಂತರ ಅಧಿಕಾರಿಗಳಿಂದ ಸರ್ವೇ ಮಾಡಿಸಿ ಬಿದ್ದ ಮನೆಗಳಿಗೆ ಹಾಗೂ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.