ಹೊಸಪೇಟೆ(ನ.27): ಮಹಾರಾಷ್ಟ್ರದಲ್ಲಿನ ಶಿವಸೇನಾ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿ ಅಕ್ರಮ ಸಂಬಂಧ ಎಂದ ವಿಶ್ಲೇಷಿಸಿರುವ ಸಚಿವ ಕೆ.ಎಸ್‌. ಈಶ್ವರಪ್ಪ, ಕಾಂಗ್ರೆಸ್‌ ತನ್ನ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದೆ ಎಂದು ಕಿಡಿಕಾರಿದರು.
ವಿಜಯನಗರ ಉಪಚುನಾವಣೆ ಹಿನ್ನೆಲೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್‌ನ್ನು ಜನರು ತಿರಸ್ಕರಿಸಿದ್ದಾರೆ. ಅವರಿಗೆ ಯಾವುದೇ ಸೈದ್ಧಾಂತಿಕತೆ ಇಲ್ಲ. ಶಿವಸೇನೆಯ ಜತೆ ಹೊಂದಾಣಿಕೆಗೆ ಮುಂದಾಗಿರುವುದು ಕಾಂಗ್ರೆಸ್‌ ಭವಿಷ್ಯ ಅಧಃಪತನದತ್ತ ಸಾಗಿದೆ ಎಂಬುದರ ದಿಕ್ಸೂಚಿಯಾಗಿದೆ. ಮಹಾರಾಷ್ಟ್ರದಲ್ಲಿನ ಅಪವಿತ್ರ ಮೈತ್ರಿ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದ್ದು, ಸೈದ್ಧಾಂತಿಕವಾಗಿ ಪ್ರತಿರೋಧದ ಪಕ್ಷಗಳು ಅಧಿಕಾರಕ್ಕಾಗಿ ಹೊಂದಾಣಿಕೆಯಾಗಿವೆ ಎಂದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕದಲ್ಲೂ ಕಾಂಗ್ರೆಸ್‌ ಛಿದ್ರವಾಗಿದೆ. ಇದಕ್ಕೆ ಕಾರಣ ಸಿದ್ದರಾಮಯ್ಯ. ಜಾತಿ- ಧರ್ಮಗಳನ್ನು ಒಡೆಯಲು ಮುಂದಾದ ಕಾರಣಕ್ಕಾಗಿಯೇ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 78 ಸ್ಥಾನಗಳಿಗೆ ಕುಸಿಯಿತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ವೀರಶೈವ- ಲಿಂಗಾಯತ ಧರ್ಮ ಒಡೆಯಲು ಮುಂದಾಗಿದ್ದೇ ಸಿದ್ದರಾಮಯ್ಯ ಸೋಲುಣ್ಣಲು ಕಾಣವಾಯಿತು ಎಂದರು.

ಇಷ್ಟಾದರೂ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ. ಹಿಂದು- ಮುಸ್ಲಿಂ ಧರ್ಮವನ್ನು ದೂರ ಮಾಡಿದ್ದರ ಬಗ್ಗೆ ಅರಿವಾಗಿಲ್ಲ. ಸಿದ್ದರಾಮಯ್ಯ ಒಬ್ಬಂಟಿಗರಾಗಿ ರಾಜ್ಯದಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ. ಅವರ ಹಿಂದೆ ಯಾರೂ ಇಲ್ಲ. ಮುನಿಯಪ್ಪರಂತಹ ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಬಗ್ಗೆ ದೂರಿದ್ದಾರೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಿಂದ ಉಪಚುನಾವಣೆಯಲ್ಲಿ ಅವರ ಅಭ್ಯರ್ಥಿಗಳು ಸೋಲುವುದು ಖಚಿತವಾಗಿದೆ. ಚುನಾವಣೆ ಬಳಿಕ ಪ್ರತಿಪಕ್ಷದಲ್ಲಿರುವ ಸಿದ್ದರಾಮಯ್ಯ ವಿರುದ್ಧವೂ ಆ ಪಕ್ಷದಲ್ಲಿ ಧ್ವನಿ ಎದ್ದೇಳಲಿದೆ. ರಾಜ್ಯದಲ್ಲಿರುವ ಕುರುಬರು ದಡ್ಡರಲ್ಲ. ಸಿದ್ದರಾಮಯ್ಯನವರ ಮಾತು ಯಾರೂ ಕೇಳೋದಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಕರೆದು ತಂದ ವಿಶ್ವನಾಥ್‌ ಅವರನ್ನು ತುಳಿದಿದ್ದೇ ಸಿದ್ದರಾಮಯ್ಯ. ರಾಜ್ಯದಲ್ಲಿ ಕುರುಬರನ್ನು ತುಳಿದಿದ್ದೇ ಸಿದ್ದರಾಮಯ್ಯ ಎಂದು ಕುರುಬ ಸಮಾಜಕ್ಕೆ ಅರ್ಥವಾಗಿದೆ. ಕುರುಬರು ಯಾವುದೇ ಕಾರಣಕ್ಕೆ ಸಿದ್ದರಾಮಯ್ಯರನ್ನು ನಂಬೋದಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಬಿಟ್ಟು ಯಾರ ಜತೆ ಬೇಕಾದರೆ ನಾವು ಹೋಗುತ್ತೇವೆ. ದೇಶವನ್ನು ಹಾಳು ಮಾಡಿರುವ ಕಾಂಗ್ರೆಸ್‌ ಜತೆ ಮಾತ್ರ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈಶ್ವರಪ್ಪ, ಬಹುಮತ ಇಲ್ಲದಿದ್ದಾಗ ಕಾಂಗ್ರೆಸ್‌ ಬಿಟ್ಟು ಯಾರ ಜತೆಯಾದರೂ ನಾವು ಸೇರಿಕೊಳ್ಳುತ್ತೇವೆ ಎಂದು ಹೇಳಿದರು.