ಡಂಬಳ(ಜೂ.15): ರಾಜ್ಯದಲ್ಲಿ ಮಾದಿಗ ಸಮಾಜದವರು ಬಹುಸಂಖ್ಯಾತರಿರುವದರಿಂದ ನಿಮಗೆ ಬಿಜೆಪಿ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು. ಪರಿಶಿಷ್ಟ ಜಾತಿ ಪಟ್ಟಿಯಿಂದ ಯಾವುದೇ ಜಾತಿಯನ್ನು ಕೈಬಿಡುವದಿಲ್ಲ. ಕೈ ಬಿಡುವ ವಿಚಾರ ಸರ್ಕಾರದ ಮುಂದೆ ಇಲ್ಲಾ ಎಂದು ಹೇಳಿಕೆ ನೀಡಿರುವ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಕ್ಷಣ ರಾಜೀನಾಮೆ ನೀಡಬೇಕೆಂದು ತಾಲೂಕು ದಲಿತ ಸಂಘರ್ಷ ಸಮಿತಿ ಮಾಜಿ ಸಂಚಾಲಕ ಹಾಗೂ ಮಾದಿಗ ಸಮಾಜದ ಹಿರಿಯರಾದ ಕೆ.ಎನ್‌. ದೊಡ್ಡಮನಿ ಒತ್ತಾಯಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೊರ್ಟ್‌ ನಿರ್ದೇಶನದಂತೆ ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಯನ್ನು ಪರಿಶಿಷ್ಟ ಪಟ್ಟಿಯಿಂದ ಕೈಬಿಡಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಶೋಷಣೆಗೆ ಒಳಗಾಗಿರುವವರು ನಾವು ರಾಜಕಿಯ ಅಧಿಕಾರ ಸೇರಿದಂತೆ ಸರ್ಕಾರದ ಪ್ರತಿಯೊಂದು ಸೌಲಭ್ಯ ಪಡೆಯುತ್ತಿರುವವರು ಇವರು. ದೇಶದ ಯಾವುದೆ ರಾಜ್ಯದಲ್ಲಿ ಈ ನಾಲ್ಕು ಸಮುದಾಯಗಳು ಪರಿಶಿಷ್ಟಜಾತಿ ಪಟ್ಟಿಯಲ್ಲಿ ಇಲ್ಲಾ ಎಂದು ದೂರಿದರು.

'ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸುವುದೇ ಮೋದಿ ಸರ್ಕಾರದ ಉದ್ದೇಶ'

ಗೋವಿಂದ ಕಾರಜೋಳ ಅವರು ಅಧಿಕಾರ ಪಡೆಯಲು ಮಾದಿಗ ಸಮಾಜಬೇಕು. ಮಾದಿಗ ಸಮಾಜದವರು ಅನುಭವಿಸುತ್ತಿರುವ ಸಮಸ್ಯೆಗಳು ಇವರಿಗೆ ಬೇಡ. ನಿಮಗೆ ನಮ್ಮ ಸಮಾಜದ ಬಗ್ಗೆ ಇರುವ ಸ್ಪಷ್ಟವಾದ ನಿಲುವು ತಿಳಿಸಬೇಕು. ಸಮಾಜದ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ನೀವು ಹೆತ್ತ ತಾಯಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.

ನೀವು ವಿರೋಧ ಪಕ್ಷದಲ್ಲಿರುವಾಗ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ ಸಮಾಜದವರು ಸದಾಶಿವ ಆಯೋಗದ ವರದಿಗೆ ಆಗ್ರಹಿಸಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಅಧಿಕಾರಕ್ಕೆ ಬಂದ ತಕ್ಷಣ ಅದನ್ನು ಶಿಪಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ ಎಂದು ಮಾತು ಕೊಟ್ಟಿದ್ದೀರಿ ಯಾಕೆ ಈ ವಿಚಾರದಲ್ಲಿ ಮೌನವಹಿಸಿದ್ದೀರಿ ಎಂದು ಇಡೀ ಸಮಾಜಕ್ಕೆ ಸ್ಪಷ್ಟಪಡಿಸಬೇಕು.

ಗೋವಿಂದ ಕಾರಜೋಳ ಸೇರಿದಂತೆ ಸುಪ್ರೀಂ ಕೊರ್ಟ್‌ ನಿರ್ದೇಶನಕ್ಕೆ ಸಮಾಜದ ಪರವಾಗಿ ಹೋರಾಟ ಮಾಡದ ಹಾಲಿ ಶಾಸಕರ, ಸಂಸದರ, ಮಾಜಿ ಸಚಿವರ, ಶಾಸಕ ಮನೆ ಮುಂದೆ ಪಂಚ ಜಾತಿಗಳ ವಿವಿಧ ಸಂಘಟನೆಗಳ ಮತ್ತು ಎಲ್ಲಾ ಸಮಾಜದ ಮುಖಂಡರ ಸಮ್ಮುಖದಲ್ಲಿ ಮೂಲ ಅಸ್ಪೃಶೃರು ಹೋರಾಟ ಮಾಡುತ್ತೇವೆ. ಸಮಾಜಕ್ಕಿಂತ ಯಾರು ದೊಡ್ಡವರಲ್ಲ ಎಂದು ದೊಡ್ಡಮನಿ ಎಚ್ಚರಿಕೆ ನೀಡಿದರು.