ಮೈಸೂರು(ಜು.31): ರಾಜ್ಯದಲ್ಲಿಯೇ ಮೊದಲು ಹಾಗೂ ವರ್ಷಕ್ಕೆರಡು ಬಾರಿ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯ ಈ ಬಾರಿ ಜುಲೈ ಅಂತ್ಯಕ್ಕೂ ಭರ್ತಿಯಾಗಿಲ್ಲ.

ಮಂಗಳವಾರ ಜಲಾಶಯದಲ್ಲಿ 2272.96 ಅಡಿ ನೀರಿತ್ತು. ಗರಿಷ್ಠ ಮಟ್ಟ2284 ಅಡಿ. ಜಲಾಶಯಕ್ಕೆ 3148 ಕ್ಯುಸೆಕ್‌ ನೀರು ಬರುತ್ತಿದ್ದು, 3,292 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2282.89 ಅಡಿ ನೀರಿತ್ತು. ಒಳಹರಿವು 17,044 ಕ್ಯುಸೆಕ್‌ ಹಾಗೂ ಹೊರಹರಿವು 16,200 ಕ್ಯುಸೆಕ್‌ ಇತ್ತು. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 19.52 ಟಎಂಸಿ. ಹಾಲಿ 13.18 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ದಿನ 18.79 ಟಿಎಂಸಿ ನೀರಿತ್ತು.

ತಮಿಳುನಾಡಿಗೂ ನೀರು ಬಿಡುವುದು ಕಬಿನಿಯಿಂದಲೇ:

ಸಾಮಾನ್ಯವಾಗಿ ತಮಿಳುನಾಡು ನೀರಿಗೆ ಒತ್ತಾಯ ಮಾಡಿದಾಗಲೆಲ್ಲಾ ಮೊದಲು ನೀರು ಬಿಡುಗಡೆ ಮಾಡುವುದು ಕಬಿನಿ ಜಲಾಶಯದಿಂದಲೇ. ಇದರಿಂದ ಸಂಗ್ರಹ ಸಾಮರ್ಥ್ಯ ಕೇವಲ 84 ಅಡಿ ಮಾತ್ರ, ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿದ್ದಂತೆಯೇ ಭರ್ತಿಯಾಗುವ ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಕಬಿನಿ ಜಲಾಶಯ ಒಂದು ರೀತಿಯಲ್ಲಿ ಸಂಗ್ರಹ ತೊಟ್ಟಿಯಾಗಿ ಬಳಕೆಯಾಗುತ್ತಿದೆ.

ಜಲಾಶಯ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು:

ಈ ಬಾರಿ ಜಲಾಶಯ ಇನ್ನೂ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ, ಇದನ್ನು ವಿರೋಧಿಸಿ ರೈತರು ಮೈಸೂರು, ಟಿ. ನರಸೀಪುರ, ನಂಜನಗೂಡು, ಎಚ್‌.ಡಿ. ಕೋಟೆ ಮತ್ತಿತರ ಕಡೆ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಆದರೂ ರಾಜ್ಯ ಸಕಾರ ಮತ್ತು ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ ಸೊಪ್ಪು ಹಾಕಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಆರ್‌ಎಸ್‌, ಹೇಮಾವತಿ, ಹಾರಂಗಿ ಹಾಗೂ ಕಬಿನಿ ಜಲಾಶಯಗಳು ಬರುತ್ತವೆ.

ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಭರ್ತಿಯಾದ ನಂತರ ಹೆಚ್ಚುವರಿ ನೀರು ಕೆಆರ್‌ಎಸ್‌ ಜಲಾಶಯ ಸೇರಿ ಮುಂದೆ ಸಾಗಿದರೆ, ಕಬಿನಿ ಜಲಾಶಯದ ಹೆಚ್ಚುವರಿ ನೀರು ಟಿ. ನರಸೀಪುರ ಬಳಿ ಕಾವೇರಿಯನ್ನು ಸೇರಿಕೊಂಡು ಮುಂದೆ ಸಾಗುತ್ತದೆ. ತಲಕಾಡು, ಶಿವನಸಮುದ್ರ, ಮೇಕೆದಾಟು, ಪಾಲಾರ್‌ ಮೂಲಕ ಮೆಟ್ಟೂರು ತಲುಪುತ್ತದೆ. ಈ ನೀರು ನಂಜನಗೂಡು, ಟಿ. ನರಸೀಪುರ, ಚಾಮರಾಜನಗರ, ಗುಂಡ್ಲುಪೇಟೆ, ಮೈಸೂರು ಕುಡಿಯುವ ನೀರಿಗೂ ಬಳಕೆಯಾಗುತ್ತದೆ.

ಆಲಮಟ್ಟಿ ಜಲಾಶಯದಿಂದ ನೀರು ಹೊರಕ್ಕೆ, ಸಕಲ ಸುರಕ್ಷಾ ಕ್ರಮ

ಕಳೆದ ಬಾರಿ ಜೂನ್ ಮಧ್ಯದಲ್ಲಿಯೇ ಭರ್ತಿಯಾಗಿತ್ತು ಜಲಾಶಯ:

ಕಪಿಲಾ ನದಿಯು ಟಿ. ನರಸೀಪುರದ ಬಳಿ ಕಾವೇರಿ ನದಿಗೆ ಸೇರುತ್ತದೆ. ಮುಂದೆ ಅದು ಕಾವೇರಿ ನದಿಯಾಗುತ್ತದೆ. ಮದ್ದೂರು ತಾ. ತೊರೆಕಾಡನಹಳ್ಳಿ ಬಳಿಯಿಂದ ಬೆಂಗಳೂರು ನಗರಕ್ಕೂ ನೀರು ಪೂರೈಸಲಾಗುತ್ತದೆ. ಸಾಮಾನ್ಯವಾಗಿ ಜುಲೈ ತಿಂಗಳ ಮಧ್ಯ ಭಾಗದಲ್ಲಿ ಕಬಿನಿ ಜಲಾಶಯ ಭರ್ತಿಯಾಗುತ್ತಿತ್ತು. ಕಳೆದ ವರ್ಷ ಜೂನ್‌ ಮಧ್ಯ ಭಾಗದಲ್ಲಿಯೇ ಭರ್ತಿಯಾಗಿತ್ತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2012, 2015, 2016 ರಲ್ಲಿ ಕೆಆರ್‌ಎಸ್‌ನಂತೆ ಕಬಿನಿ ಜಲಾಶಯ ಕೂಡ ಭರ್ತಿಯಾಗಿರಲಿಲ್ಲ. ಆದರೆ 2017 ರಲ್ಲಿ ಕೆಆರ್‌ಎಸ್‌ ಭರ್ತಿಯಾಗದಿದ್ದರೂ ಕಬಿನಿ ಜಲಾಶಯ ಭರ್ತಿಯಾಗಿತ್ತು. ಕಳೆದ ವರ್ಷ ಎರಡೂ ಜಲಾಶಯಗಳು ಭರ್ತಿಯಾಗಿದ್ದವು.