ಮಾ.22ರಂದು ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿರ್ವಹಣೆ ಸ್ಥಗಿತಗೊಳಿಸಲಾಗಿತ್ತು. ಈಗ ಮೊಹಿಯುದ್ದೀನ್‌ ಶಾಫಿ ಜುಮ್ಮಾ ಮಸೀದಿಯಲ್ಲಿ ಜು.30ರಿಂದ, ರಾಘವೇಂದ್ರ ನಗರದ ನೂರುಲ್‌ ಆಲಂ ಜುಮ್ಮಾ ಮಸೀದಿಯಲ್ಲಿ ಜು.31ರಿಂದ ಜಮಾತ್‌ ಬಾಂಧವರಿಗೆ ಸಾಮೂಹಿಕ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೊಪ್ಪ(ಜು.29): ಪಟ್ಟಣದ ಕೆಳಗಿನ ಪೇಟೆಯ ಮೊಹಿಯುದ್ದೀನ್‌ ಶಾಫಿ ಜುಮ್ಮಾ ಮಸೀದಿಯಲ್ಲಿ ಜು.30ರಿಂದ, ರಾಘವೇಂದ್ರ ನಗರದ ನೂರುಲ್‌ ಆಲಂ ಜುಮ್ಮಾ ಮಸೀದಿಯಲ್ಲಿ ಜು.31ರಿಂದ ಜಮಾತ್‌ ಬಾಂಧವರಿಗೆ ಸಾಮೂಹಿಕ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಸೀದಿಗಳ ಆಡಳಿತ ಮಂಡಳಿ ತಿಳಿಸಿದೆ.

ಮಾ.22ರಂದು ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿರ್ವಹಣೆ ಸ್ಥಗಿತಗೊಳಿಸಲಾಗಿತ್ತು. ಜು.8ರಿಂದ ಕೊರೋನಾ ನಿಯಂತ್ರಣ ನಿಯಮಾವಳಿಗಳನ್ನು ಅಳವಡಿಸಿಕೊಂಡು ನಮಾಜ್‌ ನಿರ್ವಹಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದರೂ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಎರಡೂ ಮಸೀದಿಗಳ ಆಡಳಿತ ಮಂಡಳಿಗಳು ಸಾಮೂಹಿಕ ನಮಾಜ್‌ಗೆ ಅವಕಾಶ ಕಲ್ಪಿಸಿರಲಿಲ್ಲ. ಪವಿತ್ರ ರಂಜಾನ್‌ ಹಬ್ಬದ ನಮಾಝ್‌ಗಳನ್ನು ಕೂಡಾ ಮನೆಯಲ್ಲೇ ಇದ್ದು ನಿರ್ವಹಿಸುವಂತೆ ಜಮಾತ್‌ ಬಾಂಧವರಿಗೆ ಈ ಮಸೀದಿ ಮಂಡಳಿಗಳು ಮನವಿ ಮಾಡಿಕೊಂಡಿದ್ದವು. ಇದೀಗ ಬಕ್ರೀದ್‌ ಹಬ್ಬದ ನಮಾಜ್ ಸರ್ಕಾರದ ಸುತ್ತೋಲೆಯ ಪ್ರಕಾರ ಕೋವಿಡ್‌-19 ನಿಯಂತ್ರಣ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿಕೊಂಡು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿರ್ವಹಿಸಲು ಆಡಳಿತ ಮಂಡಳಿಗಳು ಕರೆ ನೀಡಿವೆ.

ಜೆಎನ್‌ಯುಗೆ ಹೋಗಿದ್ದ ದೀಪಿಕಾ ಖಾತೆಗೆ 5 ಕೋಟಿ ರೂ.?: ನಟಿ ವಿರುದ್ಧ ಭುಗಿಲೆದ್ದ ಆಕ್ರೋಶ!

ಪಟ್ಟಣದ ಮೊಹಿಯುದ್ದೀನ್‌ ಶಾಫಿ ಜುಮ್ಮಾ ಮಸೀದಿ, ರಾಘವೇಂದ್ರ ನಗರದ ನೂರುಲ್‌ ಆಲಂ ಜುಮ್ಮಾ ಮಸೀದಿ, ನೇತಾಜಿ ನಗರದ ಬದ್ರಿಯಾ ಜುಮ್ಮಾ ಮಸೀದಿ, ಸಣ್ಣಕೆರೆ, ಜೋಗಿಸರ, ನಾರ್ವೆ, ಕುದ್ರೆಗುಂಡಿ ಜುಮ್ಮಾ ಮಸೀದಿಗಳಲ್ಲಿ ಜು.31ರ ಶುಕ್ರವಾರ ಬಕ್ರೀದ್‌ ಹಬ್ಬ ಆಚರಿಸಲಾಗುತ್ತದೆ. ಉಳಿದಂತೆ ಕೆಳಗಿನಪೇಟೆಯ ಜಾಮಿಯಾ ಮಸೀದಿ, ಮೇಲಿನಪೇಟೆಯ ಮದೀನ ಮಸೀದಿ, ನೇತಾಜಿನಗರದ ಮಸ್ಜಿದ್‌-ಉಲ್‌-ನೂರ್‌ ಜುಮ್ಮಾ ಮಸೀದಿಗಳಲ್ಲಿ ಆ.01ರ ಶನಿವಾರ ಬಕ್ರೀದ್‌ ಹಬ್ಬದ ಆಚರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.