* ಗದಗ ಜಿಲ್ಲೆರ ರೋಣ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದ ಘಟನೆ*  ತನ್ನ ತಾಯಿಯ ತಲೆಗೂದಲು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದ ಪತ್ರಕರ್ತ*  ಪತ್ರಕರ್ತನ ಅಮಾನುಷ ದೌರ್ಜನ್ಯದ ಬಗ್ಗೆ ಭಾರೀ ಚರ್ಚೆ  

ರೋಣ(ಜು.24): ತನ್ನ ತಾಯಿ ಮತ್ತು ತಂಗಿಯ ಮೇಲೆ ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿ ಪೌರುಷ ಮೆರೆದಿರುವ ಸೂಡಿ ಗ್ರಾಮದ ಪತ್ರಕರ್ತ ಚಂದ್ರಕಾಂತ ಬಾರಕೇರ ಅವರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾನೆ.

ಹಲ್ಲೆಗೊಳಗಾದ ಚಂದ್ರಕಾಂತನ ಸಹೋದರಿ ಲಕ್ಷ್ಮೀ ಮಹಾಂತಪ್ಪ ಬಾರಕೇರ ಈ ಕುರಿತು ಚಂದ್ರಕಾಂತ ಮತ್ತು ರೋಣ ಪುರಸಭೆಯ ಉದ್ಯೋಗಿ ರೇಖಾ ಹೊಂಬಳ ವಿರುದ್ಧ ಗಜೇಂದ್ರಗಡ ಪೊಲೀಸರಿಗೆ ದೂರು ನೀಡಿದ್ದು, ಪಿಎಸ್‌ಐ ಗುರುಶಾಂತ ದಾಶ್ಯಾಳ ನೇತೃತ್ವದ ತಂಡ ಗುರುವಾರ ಆರೋಪಿಗಳನ್ನು ಬಂಧಿಸಿದೆ.

ಘಟನೆ ವಿವರ:

ಸೂಡಿ ಗ್ರಾಮದಲ್ಲಿ ವೃದ್ಧ ತಾಯಿ ಮತ್ತು ತಂಗಿ ವಾಸವಿದ್ದ ಮನೆಯ ಶೌಚಾಲಯಕ್ಕೆ ಗುರುವಾರ ಪತ್ರಕರ್ತ ಚಂದ್ರಕಾಂತ ಬಾರಕೇರ ಹಾಗೂ ರೇಖಾ ಹೊಂಬಳ ಅವರು ವಿನಾಕಾರಣ ಬೀಗ ಜಡಿದಿದ್ದರು. ಇದರಿಂದ ಶೌಚಕ್ಕೆ ಪರದಾಡಿದ ತಾಯಿ ಹಾಗೂ ಮಗಳು, ಕೀಲಿ ಹಾಕಿದ್ಯಾಕೆ? ತಕ್ಷಣ ತೆರೆವುಗೊಳಿಸಿ ಎಂದು ಕೋರಿದ್ದಾರೆ. ಇದರಿಂದ ಕುಪಿತಗೊಂಡ ಚಂದ್ರಕಾಂತ ಹಾಗೂ ರೇಖಾ ನಿಮಗೇಕೆ ಕೀಲಿ ಕೊಡಬೇಕು ಎಂದು ಇಬ್ಬರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಕಾಂತ ತನ್ನ ತಾಯಿಯ ತಲೆಗೂದಲು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕತ್ತು ಹಿಚುಕಿ ಸಾಯಿಸಲು ಯತ್ನಿಸಿದ್ದಾನೆ. ಜೀವ ಬೆದರಿಕೆ ಸಹ ಹಾಕಿದ್ದಾನೆ. ಈ ಘಟನೆಯಲ್ಲಿ ತಾಯಿಯ ಮುಖ, ತಲೆ ಮತ್ತು ಹೊಟ್ಟೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಗದಗ: ರೌಡಿ ಶೀಟರ್‌ ಕೊಲೆ ಪ್ರಕರಣ, ಮೂವರ ಬಂಧನ

ವೃದ್ಧೆ ತಾಯಿಗೆ ಚಂದ್ರಕಾಂತ ಬಾರಕೇರ ಹಿಗ್ಗಾಮುಗ್ಗಾ ಥಳಿಸಿ ಅಮಾನುಷವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಲಕ್ಷ್ಮೀ ಬಾರಕೇರ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಗಜೇಂದ್ರಗಡ ಪೊಲೀಸರು ಚಂದ್ರಕಾಂತ ಬಾರಕೇರ ಹಾಗೂ ರೇಖಾ ಹೊಂಬಳ ವಿರುದ್ಧ ಐಪಿಸಿ ಕಲಂ 307, 325, 354, 504,506,35ಯಂತೆ ಪ್ರಕರಣ ದಾಖಲಿಸಿದ್ದಾರೆ.

ಹನಿಟ್ರ್ಯಾಪ್‌ ಆರೋಪ:

ರೇಖಾ ಹೊಂಬಳ ಪತಿ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆದು ರೋಣ ಪುರಸಭೆಯಲ್ಲಿ ಸಿ-ದರ್ಜೆ ನೌಕರಳಾಗಿದ್ದಾಳೆ. ರೇಖಾ ಹಾಗೂ ಪತ್ರಕರ್ತ ಚಂದ್ರಕಾಂತ ಮೇಲೆ ಗಜೇಂದ್ರಗಡ ಠಾಣೆಯಲ್ಲಿ ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್‌ ಮಾಡಿದ ಪ್ರಕರಣ ದಾಖಲಿಸಿದ್ದರು. ಅದಿನ್ನೂ ವಿಚಾರಣೆ ಹಂತದಲ್ಲಿದೆ.

ಸುಮಾರು ಒಂದೂವರೆ ದಶಕದಿಂದ ವಿವಿಧ ಪತ್ರಿಕೆಗಳಿಗೆ ಸುದ್ದಿಗಾರನಾಗಿ ಕೆಲಸ ಮಾಡುತ್ತಿದ್ದ ಈ ಪತ್ರಕರ್ತ ಸ್ವತಃ ತಾಯಿ, ತಂಗಿಯ ಮೇಲೆ ನಡೆಸಿದ ಅಮಾನುಷ ದೌರ್ಜನ್ಯದ ಬಗ್ಗೆ ಜಿಲ್ಲೆಯಾದ್ಯಂತ ಭಾರೀ ಚರ್ಚೆ ಆಗುತ್ತಿದೆ.