* ಪ್ರಕರಣ ಭೇದಿಸಲು ಪೊಲೀಸರು ಯಶಸ್ವಿ* ಹೆಚ್ಚಾಗುತ್ತಿರುವ ರೌಡಿಗಳ ಹಾವಳಿ* ಮೊಬೈಲ್‌ ಕರೆ ಆಧರಿಸಿ ಖದೀಮರ ಬಂಧನ 

ಗದಗ(ಜು.23): ಗದಗ -ಬೆಟಗೇರಿ ಜನರನ್ನು ತಲ್ಲಣಗೊಳಿಸಿದ್ದ ರೌಡಿ ಶೀಟರ್‌, ಹಣ್ಣಿನ ವ್ಯಾಪಾರಿ ಗೋವಿಂದಪ್ಪ ಚಲವಾದಿ ಅಲಿಯಾಸ್‌ ಮುತ್ತು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಾದ ರೌಡಿ ಶೀಟರ್‌ ಪ್ರಕಾಶ ಕೋರಿ ಶೆಟ್ಟರ್‌ ಹಾಗೂ ಅಮೀರ್‌ ಸೋಹೈಲ್‌ ನದಾಫ, ಪ್ರವೀಣ ಸಕ್ರಿ ಅವರನ್ನು ಬಂಧಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಎಸ್‌ಪಿ ಎನ್‌. ಯತೀಶ್‌, ಭಾನುವಾರ ರಾತ್ರಿ ನಡೆದಿದ್ದ ಕೊಲೆ ಪ್ರಕರಣದ ತನಿಖೆ ಉಸ್ತುವಾರಿಯನ್ನು ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರಿಗೆ ನೀಡಲಾಗಿತ್ತು. ತನಿಖೆಗಾಗಿ ಶಹರ ಸಿಪಿಐ ಪಿ.ವಿ. ಸಾಲಿಮಠ, ಬೆಟಗೇರಿ ಸಿಪಿಐ ಬಿ.ಜಿ. ಸುಬ್ಬಾಪುರಮಠ ಹಾಗೂ ಶಹರ ಪಿಎಸ್‌ಐ ಗಿರಿಜಾ ಜಕ್ಕಲಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಹಣದ ವ್ಯವಹಾರ ಕಾರಣ:

ಕೊಲೆಯ ಮೊದಲ ಆರೋಪಿ ಪ್ರಕಾಶ ಕೋರಿ ಶೆಟ್ಟರ್‌ ಅಲಿಯಾಸ್‌ 220 ಪಕ್ಕ್ಯಾ ಹಾಗೂ ಕೊಲೆಯಾಗಿರುವ ಮುತ್ತು ಚಲವಾದಿ ನಡುವೆ ಹಲವಾರು ವರ್ಷಗಳಿಂದ ಹಣಕಾಸು ವ್ಯವಹಾರ ಮತ್ತು ಸ್ನೇಹ ಇತ್ತು. ಅದರ ಭಾಗವಾಗಿಯೇ 220 ಪಕ್ಕ್ಯಾ . 80 ಸಾವಿರ ಸಾಲ ನೀಡಿದ್ದ. ಆ ಹಣವನ್ನು ಮರಳಿ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಇನ್ನು ಪ್ರಕರಣದ 2ನೇ ಆರೋಪಿ ಪವನ್‌ ಸಕ್ರಿ ಹಾಗೂ ಕೊಲೆಯಾದ ಮುತ್ತು ಒಂದೇ ಭಾಗದ ನಿವಾಸಿಗಳು. ಕೊಲೆಯಾದ ಮುತ್ತು ಪದೇ ಪದೇ ಪವನ್‌ ಸಕ್ರಿಗೆ ಅನಗತ್ಯ ತೊಂದರೆ ಕೊಡುವುದು, ಮನೆಗೆ ಹೋಗಿ ಧಮ್ಕಿ ಹಾಕುವುದು, ನಿಂದಿಸುವುದು ಮಾಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡು, ಅವನ ಕಾಟ ತಾಳಲಾರದೇ 220 ಪಕ್ಕ್ಯಾ ಹಾಗೂ ಪವನ್‌ ಸಕ್ರಿ ಸೇರಿ ಮುತ್ತು ಚಲವಾದಿಯನ್ನು ಕೊಲೆ ಮಾಡಿರುವುದಾಗಿ ವಿಚಾರಣೆಯ ವೇಳೆ ಅವರು ಒಪ್ಪಿಕೊಂಡಿದ್ದಾರೆ.

ಮೈಸೂರು; ಪ್ರಿಯಕರನ ಜತೆ ಸೇರಿ 50 ವರ್ಷದ ಪತಿಯನ್ನು ಹತ್ಯೆ ಮಾಡಿದ 29ರ ಪತ್ನಿ!

ಇವರಿಗೆ ಸಹಕಾರ ನೀಡಿದ ಅಮೀರ್‌ ಸೊಹೈಲ್‌ ನದಾಫ್‌ ಹೋಟೆಲ್‌ವೊಂದರಲ್ಲಿ ಸಪ್ಲಾಯರ್‌ ಆಗಿ ಕೆಲಸ ಮಾಡುತ್ತಿದ್ದು, ಈ ಕೊಲೆ ಪ್ರಕರಣದಲ್ಲಿ 3ನೇ ಆರೋಪಿಯಾಗಿದ್ದಾನೆ.

5 ದಿನದಲ್ಲಿ ಆರೋಪಿ ಅಂದರ್‌:

ಆರೋಪಿಗಳು ಕೊಲೆ ಮಾಡಿದ ದಿನ ರಾತ್ರಿಯೇ ಹುಬ್ಬಳ್ಳಿಗೆ ಹೋಗಿದ್ದರು. ಗೋವಾಕ್ಕೆ ಹೋಗುವ ತಯಾರಿ ಮಾಡಿದ್ದರು. ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಗದಗಕ್ಕೆ ಮರಳಿದ್ದರು. ಹುಲಕೋಟಿ ಗ್ರಾಮದ ಹೊರವಲಯದಲ್ಲಿರುವ ರೈಲ್ವೆ ಗೂಡ್ಸ್‌ ಶೆಡ್‌ಗಳ ಸಮೀಪ ಬಂದು, ಬೇರೆಯವರಿಂದ ಹಣ ಪಡೆದು ಬೇರೆಡೆ ತೆರಳುವ ಯೋಜನೆ ರೂಪಿಸಿದ್ದರು. ಈ ವೇಳೆ ಆರೋಪಿಗಳ ಮೊಬೈಲ್‌ ಕರೆ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ತನಿಖೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ಹಾಜರಿದ್ದರು.

ರೌಡಿಗಳ ಹೆಚ್ಚಳ:

ಕೊಲೆಯಾಗಿರುವ ಮುತ್ತು ಚಲವಾದಿ ಹಾಗೂ ಕೊಲೆಯ 2ನೇ ಆರೋಪಿ ಪವನ ಸಕ್ರಿ ನಡುವೆ ಈ ಭಾಗದಲ್ಲಿ ತಮ್ಮ ಪ್ರಭಾವ ಬೆಳೆಸುವ ಸಲುವಾಗಿ ಮುಸುಕಿನ ಗುದ್ದಾಟ ನಡೆದಿತ್ತು ಹಾಗೂ ಇಂತಹ ರೌಡಿಗಳನ್ನು ಬೆಳೆಸುತ್ತಿದ್ದ ಪ್ರಭಾವಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಮರಣ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ರೌಡಿಗಳ ಹಾವಳಿ ಹೆಚ್ಚಾಗಿರುವ ಕುರಿತು ಎಸ್ಪಿ ಯತೀಶ್‌ ಎನ್‌. ಪ್ರತಿಕ್ರಿಯಿಸಿ, ಈಚೆಗೆ ಎಸ್‌.ಎಂ. ಕೃಷ್ಣ ನಗರದ ಒಬ್ಬ ವ್ಯಕ್ತಿ ವಿರುದ್ಧ ಅಲ್ಲಿನ ಆಟೋ ಚಾಲಕರು ದೂರು ನೀಡಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳು ಠಾಣೆಗಳಿಗೆ ರೌಡಿ ಶೀಟರ್‌ಗಳನ್ನು ಕರೆಸಿ ತಾಕೀತು ಮಾಡಲಾಗುತ್ತಿದೆ. ಸದ್ಯಕ್ಕೆ ಗದಗ ಜಿಲ್ಲೆಯಲ್ಲಿ ರೌಡಿ ಪರೇಡ್‌, ರೌಡಿ ಶೀಟರ್‌ಗಳ ಮನೆಗಳನ್ನು ಪರಿಶೀಲನೆ ನಡೆಸುವಂತಹ ಸ್ಥಿತಿ ಇಲ್ಲ. ಆದರೂ ಈ ಬಗ್ಗೆ ಎಲ್ಲ ಠಾಣೆಗಳ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.