ಮಂಗಳೂರಿನಲ್ಲಿ ಸಾಹಿತ್ಯ-ಸಲ್ಲಾಪ..ಯುವಕರ ತಲ್ಲಣ ಬಿಚ್ಚಿಡುವ ಜೋಗಿ ‘ಎಲ್’

'ಎಲ್' ಕಾದಂಬರಿಯ ಸಾಹಿತ್ಯ ಸಲ್ಲಾಪ ಕಾರ್ಯಕ್ರಮ/  ವಿಮರ್ಶಕ, ಸಾಹಿತಿ ಜೋಗಿ ಅವರ ಕಾದಂಬರಿ/ ಮಂಗಳೂರಿನಲ್ಲಿ ಸಾಹಿತ್ಯ ಸಾಧಕರ ಸಮ್ಮಿಲನ

jogi l kannada novel Reflects Youth angst Subraya Chokkadi

ಮಂಗಳೂರು[ಸೆ, 08] ಪತ್ರಕರ್ತ, ಕತೆಗಾರ ಜೋಗಿ ಅವರ ಎಲ್ ಕಾದಂಬರಿಯು ಯೌವನದ ತಲ್ಲಣಗಳ ಸೂಕ್ಷ್ಮತೆಯನ್ನು ಪ್ರತಿನಿಧಿಸುತ್ತದೆ. ವಿರಹದ ಬಗೆಯನ್ನು ಚಿತ್ರಿಸುವ ಬಹಳ ಅಪರೂಪದ ಕಾದಂಬರಿ ಇದಾಗಿದೆ ಎಂದು ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಪಟ್ಟರು. 

ಸಾವಣ್ಣ ಪ್ರಕಾಶನ, ಕಥೆಕೂಟ ಹಾಗೂ ಕರ್ಣಾಟಕ ಬ್ಯಾಂಕ್ ಆಯೋಜಿಸಿದ ಜೋಗಿ ಅವರ ಎಲ್ ಕಾದಂಬರಿಯ ಅನಾವರಣ ಹಾಗೂ ಸಾಹಿತ್ಯ ಸಲ್ಲಾಪದಲ್ಲಿ ಮಾತನಾಡಿ, ಪ್ರೀತಿಯ ನಿರಾಕರಣೆ, ಉಲ್ಲಂಘನೆ, ವಿಕ್ಷಿಪ್ತ, ಹಂಬಲ, ಹುಡುಕಾಟ ಇವೇ ವಿರಹದ ವಿವಿಧ ಹಂತಗಳೇ ಇವರ ಕಾದಂಬರಿಯ ಪ್ರಮುಖ ವಸ್ತುವಾಗಿವೆ. ಪ್ರೀತಿ ಶಾಶ್ವತವಲ್ಲ, ಪ್ರೀತಿಯ ನಿರಾಕರಣೆಯಿಂದ ಮಧುರ ಅನುಭೂತಿ ಆರಂಭಗೊಳ್ಳಲು ಸಾಧ್ಯ ಹಾಗಾಗಿ ಕತ್ತಲೆಯಲ್ಲಿ ಬೆಳಕನ್ನು ಹುಡುಕುವ ಪ್ರಯತ್ನವನ್ನು ಕಾದಂಬರಿಯಲ್ಲಿ ಸಾಕಾರಗೊಳಿಸಿದ್ದಾರೆ. ಇದು ಗದ್ಯ ಮತ್ತು ಪದ್ಯದ ನಡುವಿನ ಸಾಹಿತ್ಯವಾಗಿದ್ದು, ಇದನ್ನು ಕಾವ್ಯಾಂಬರಿ ಎಂದು ಕರೆಯಬಹುದು ಎಂದು ಮಾರ್ಮಿಕವಾಗಿ ಹೇಳಿದರು.

ಬದುಕಿನ ತಲ್ಲಣಗಳನ್ನು ಕಟ್ಟಿಕೊಡುತ್ತಾ ಯಾವುದೇ ಸಾಹಿತ್ಯ ಪಂಥಕ್ಕೆ ಸೇರದ ನಿಷ್ಠುರ ಬರಹಗಾರ ಜೋಗಿ ಆಗಿದ್ದಾರೆ. ಬದುಕಿನ ಅನುಭವವನ್ನು ಅನುಭವಿಸುವ, ಓದಿನ ಅಭಿರುಚಿಯನ್ನು ಬೆಳೆಸುವ ಅಪರೂಪದ ಸಾಹಿತಿಗಳಲ್ಲಿ ಜೋಗಿಯವರೂ ಒಬ್ಬರು. ಅವರ ಕೃತಿಗಳು ಯುವ ಬರಹಗಾರರು, ಸಾಹಿತ್ಯಾಸಕ್ತರು ಹಾಗೂ ಓದುಗರಿಗೆ ಓದುವಂತೆ ಪ್ರೇರೇಪಿಸುತ್ತದೆ ಎಂದು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಕಾರ್ನಾಡ್ ಅರಿಯಲು ಅವರ ಸಾಹಿತ್ಯವೇ ಮಾಧ್ಯಮ : ಜೋಗಿ

ತನ್ನ ಕೃತಿಗಳ ಮೂಲಕ ಸಾಮಾಜಿಕ ಎಚ್ಚರಿಕೆ ಹಾಗೂ ಜಾಗೃತಿಯನ್ನು ಮೂಡಿಸಿದ್ದಾರೆ ಜೋಗಿ. ಅವರ ಪ್ರತಿಯೊಂದು ಕೃತಿಯಲ್ಲೂ ಕುತೂಹಲದ ಅಂಶ ಇರುತ್ತದೆ. ಅವರು ವಿಶಿಷ್ಟ ರೀತಿಯ ಕಥಾವಸ್ತುವನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಪಂಥದ ಹಿಡಿತಕ್ಕೆ ಸಿಲುಕದೆ ನಿಷ್ಠುರವಾಗಿ ಮಾನವೀಯ ಪ್ರಸಂಗಗಳನ್ನು ಹಿಡಿದುಕೊಂಡು ಬರೆಯುತ್ತಾರೆ. ಮಾನವೀಯ ಅಂತಃಕರಣದ ತಲ್ಲಣಗಳನ್ನು ಎದುರಿಸುವ ಬಗೆಯನ್ನು ತಮ್ಮ ಬರಹಗಳಲ್ಲಿ ತೋರ್ಪಡಿಸುತ್ತಾರೆ ಎಂದರು.

21ನೇ ಶತಮಾನದ ಸಾಹಿತ್ಯ: ಎಲ್-ಮೊಬೈಲ್ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಂಪಿ ಕನ್ನಡ ವಿವಿ ಮಾಜಿ ಕುಲಪತಿ ಪ್ರೊ.ಬಿ.ಎ. ವಿವೇಕ ರೈ, ಎಲ್ ಕಾದಂಬರಿಯು ಕಥೆ, ಕಾದಂಬರಿ, ಕವನ, ಜೀವನ ಚರಿತ್ರೆ, ಆತ್ಮಕಥೆ ಇವೆಲ್ಲವನ್ನೂ ಒಳಗೊಂಡಿದೆ. ನಮ್ಮ ಒಳಬದುಕಿನ ಅನಾವರಣ, ಸಾಮಾಜಿಕ ವೈರುಧ್ಯಗಳ ಹೊಳಹು ಇದರಲ್ಲಿದೆ. ಕಾವ್ಯ ಹಾಗೂ ಸಾಹಿತ್ಯದ ಓದಿನಲ್ಲಿ ಬದುಕಿನ ಚರ್ಚೆಗೆ ಇದು ಮುನ್ನುಡಿಯನ್ನು ಹಾಕಿಕೊಡುತ್ತದೆ. ಇದನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿರಿಸುವುದು ಸಾಧ್ಯವಿಲ್ಲ, ಇದೊಂದು 21ನೇ ಶತಮಾನದ ಸಾಹಿತ್ಯ ಎಂದು ಬಣ್ಣಿಸಿದರು.

jogi l kannada novel Reflects Youth angst Subraya Chokkadi

ವಿದ್ಯಾರ್ಥಿಗಳು ಸಾಹಿತ್ಯವನ್ನು ಓದುವುದು ಬಹಳ ಉತ್ತಮ. ಯಾಕೆಂದರೆ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡರೆ ಮತ್ತೆಲ್ಲವೂ ಅರ್ಥವಾಗುತ್ತದೆ ಎಂದು ವಿವೇಕ್ ರೈ ಹೇಳಿದರು.  ಲೇಖಕ ನರೇಂದ್ರ ಪೈ ಮಾತನಾಡಿ, ಕಾವ್ಯಾತ್ಮಕ ಹಾಗೂ ಭಾವನಾತ್ಮಕದಿಂದ ಕೂಡಿದ ಈ ಕಾದಂಬರಿಯಲ್ಲಿ ಗಂಡು-ಹೆಣ್ಣಿನ ಸಂಬಂಧದ ಬಗ್ಗೆಯೂ ಚರ್ಚೆ ನಡೆಯುತ್ತದೆ. ಇಂಥ ಕಾದಂಬರಿಗಳು ಓದುಗರಿಗೆ ಹೆಚ್ಚು ಸ್ವೀಕಾರವಾಗಬೇಕು ಎಂದು ಆಶಿಸಿದರು. 

ಮೂಡುಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ ಮಾತನಾಡಿ, ಈ ಕಾದಂಬರಿಯ ಬರಹದಲ್ಲಿ ಮಾತಿನ ಲಹರಿ ಚೆನ್ನಾಗಿದೆ. ಪಾತ್ರಗಳಲ್ಲಿ ಬರುವ ಆನಂದ, ವಿಷಾದ, ಕವಿತೆಗಳು ಚರ್ಚೆಯನ್ನು ಹುಟ್ಟು ಹಾಕುತ್ತವೆ. ಬದುಕಿನ ನಡುವಿನ ಕಳವಳ ಹಾಗೂ ಹಂಬಲವನ್ನು ಇದರಲ್ಲಿ ಕಾಣಬಹುದು. ಸುಡುವ ಹಾಗೂ ಸಂಗ್ರಹಿಸುವ ಸಾಹಿತ್ಯದ ಹುಚ್ಚು ನಮಗೆ ಬೇಕಾಗಿಲ್ಲ, ಆದರ ಬದಲು ಓದುಗರ ಮನಸ್ಸಿಗೆ ಹಚ್ಚುವ ಇಂತಹ ಸಾಹಿತ್ಯಗಳು ಹೆಚ್ಚಾಗಬೇಕು ಎಂದರು.
 
ಕಾದಂಬರಿಕಾರ ಜೋಗಿ, ಕರ್ಣಾಟಕ ಬ್ಯಾಂಕ್ ಎಜಿಎಂ ಶ್ರೀನಿವಾಸ ದೇಶಪಾಂಡೆ ಇದ್ದರು.  ಪತ್ರಕರ್ತರಾದ ಪಿ.ಬಿ.ಹರೀಶ್ ರೈ ಹಾಗೂ ಗೋಪಾಲಕೃಷ್ಣ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಲ್ ಕಾದಂಬರಿ ಕುರಿತು ಸಂವಾದ ನಡೆಯಿತು. ಸಂವಾದದಲ್ಲಿ ಸುವರ್ಣ ನ್ಯೂಸ್‌.ಕಾಂ ಪ್ರಧಾನ ಸಂಪಾದಕ ಎಸ್.ಕೆ. ಶಾಮಸುಂದರ, ಸಚಿನ್ ತೀರ್ಥಹಳ್ಳಿ, ಪ್ರಶಾಂತ್ ಭಟ್, ವಿವೇಕಾನಂದ ವೈದ್ಯ, ಗುಣೇಶ್ , ಸಂತೋಷ್ ಅನಂತಪುರ ಪಾಲ್ಗೊಂಡರು.

 

Latest Videos
Follow Us:
Download App:
  • android
  • ios