Asianet Suvarna News Asianet Suvarna News

ಬಳ್ಳಾರಿ: ಕೊರೋನಾ ಆತಂಕದ ಮಧ್ಯೆಯೇ ರಾತ್ರೋರಾತ್ರಿ ರಸ್ತೆ ನಿರ್ಮಾಣಕ್ಕೆ ಮುಂದಾದ ಜಿಂದಾಲ್‌

ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ ಸೋಂಕಿತರ ಹೆಚ್ಚಳ| ಕುಡಿತಿನಿ ಗ್ರಾಮಸ್ಥರಿಂದ ಜಿಂದಾಲ್‌ ನೌಕರರಿಗೆ ನಿರ್ಬಂಧ| ಜಿಂದಾಲ್‌ನಲ್ಲಿ ಸೋಂಕಿತರ ಸಂಖ್ಯೆ 103ಕ್ಕೇರಿದೆ| ಇದರಿಂದ ಭಯಭೀತಗೊಂಡಿರುವ ಕುಡಿತಿನಿಯ ಗ್ರಾಮಸ್ಥರು ಸೋಂಕು ನಿಯಂತ್ರಣ ಸಂಬಂಧ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ|

Jindal Company Started Road Work in Kuditini in Ballari district
Author
Bengaluru, First Published Jun 15, 2020, 10:46 AM IST

ಬಳ್ಳಾರಿ(ಜೂ.15): ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಭಯಭೀತಗೊಂಡಿರುವ ಕುಡಿತಿನಿ ಗ್ರಾಮಸ್ಥರು ತಮ್ಮ ಊರ ಮೇಲೆ ತೆರಳುತ್ತಿದ್ದ ಜಿಂದಾಲ್‌ ನೌಕರರನ್ನು ತಡೆದು ವಾಪಾಸ್‌ ಕಳಿಸಲು ಮುಂದಾಗುತ್ತಿದ್ದಂತೆಯೇ ಜಿಂದಾಲ್‌ ಕಂಪನಿ ನನೆಗುದಿಗೆ ಬಿದ್ದಿದ್ದ ಬೈಪಾಸ್‌ ಸಂಪರ್ಕ ರಸ್ತೆಯನ್ನು ರಾತೋರಾತ್ರಿ ನಿರ್ಮಿಸಿಕೊಳ್ಳಲು ಮುಂದಾಗಿದೆ.

ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಜಿಂದಾಲ್‌ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂಬ ಕೂಗು ಜಿಲ್ಲೆಯಲ್ಲಿ ಬಲಗೊಳ್ಳುತ್ತಿರುವ ನಡುವೆಯೇ ನನೆಗುದಿಗೆ ಬಿದ್ದಿದ್ದ ಕುಡಿತಿನಿ ಬಳಿಯ ಬೈಪಾಸ್‌ ರಸ್ತೆಯ ಸಂಪರ್ಕ ರಸ್ತೆಯನ್ನು ನಿರ್ಮಿಸಿಕೊಳ್ಳುವ ಮೂಲಕ ಜಿಂದಾಲ್‌ಗೆ ಬರುವ ನೌಕರರಿಗೆ ದಾರಿ ಮಾಡಿಕೊಡಲು ಮುಂದಾಗಿದೆ.

 ಕೊರೋನಾ ಭೀತಿ: ಬಾಯಲ್ಲಿ ನಿರೂರಿಸುವ ಕೌಲ್‌ಬಜಾರ್‌ ಬಿರಿಯಾನಿ ಕೇಳೋರೇ ಇಲ್ಲ..!

ಆಗಿರುವುದೇನು?:

ಜಿಂದಾಲ್‌ನ ನೌಕರರಲ್ಲಿ ದಿನದಿನಕ್ಕೆ ಕೊರೋನಾ ವೈರಸ್‌ ಸೋಂಕು ಹಬ್ಬುತ್ತಿದೆ. ಇದರಿಂದ ಜಿಂದಾಲ್‌ ಸುತ್ತಮುತ್ತಲ ಗ್ರಾಮಗಳು ಹಾಗೂ ವಿವಿಧೆಡೆಯಿಂದ ತೆರಳುವ ನೌಕರರಿಗೂ ವೈರಸ್‌ ಹರಡಿದೆ. ಹೀಗಾಗಿಯೇ
ಜಿಂದಾಲ್‌ನಲ್ಲಿ ಸೋಂಕಿತರ ಸಂಖ್ಯೆ 103ಕ್ಕೇರಿದೆ. ಇದರಿಂದ ಭಯಭೀತಗೊಂಡಿರುವ ಕುಡಿತಿನಿಯ ಗ್ರಾಮಸ್ಥರು ಸೋಂಕು ನಿಯಂತ್ರಣ ಸಂಬಂಧ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಂಗಡಿ, ಮುಂಗಟ್ಟುಗಳು ಸೇರಿದಂತೆ ವಿವಿಧ ವ್ಯಾಪಾರ-ವಹಿವಾಟುಗಳನ್ನು ಬೆಳಗ್ಗೆ 6ರಿಂದ 11ರ ವರೆಗೆ ಮಾತ್ರ ನಡೆಸಲು ತೀರ್ಮಾನಿಸಿದ್ದಾರೆ. ಇದರ ನಡುವೆ ಜಿಂದಾಲ್‌ನ ನೂರಾರು ನೌಕರರು ಕುಡಿತಿನಿಯ ಗ್ರಾಮದ ಮೇಲೆಯೇ ಸಂಚರಿಸಬೇಕಾಗಿದ್ದರಿಂದ ಇವರಿಂದ ಗ್ರಾಮಕ್ಕೆ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಆತಂಕದಿಂದ ಜಿಂದಾಲ್‌ಗೆ ಹೋಗುವ ವಾಹನಗಳು ಹಾಗೂ ಬೈಕ್‌ ತಡೆದು ವಾಪಸ್‌ ಕಳಿಸುತ್ತಿದ್ದಾರೆ. ಸ್ಥಳೀಯರು ಆಕ್ರೋಶಕ್ಕೆ ಗುರಿಯಾಗುವ ಬದಲು ನಾವೇ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ತೀರ್ಮಾನಿಸಿರುವ ಜಿಂದಾಲ್‌ ಕಂಪನಿ, ಈ ವರೆಗೆ ನನೆಗುದಿಗೆ ಬಿದ್ದಿದ್ದ ಕುಡಿತಿನಿ ಬೈಪಾಸ್‌ನ ಸಂಪರ್ಕ ರಸ್ತೆಯನ್ನು ತಾವೇ ನಿರ್ಮಿಸಿಕೊಳ್ಳಲು ಮುಂದಾಗಿದೆ.

ಈ ರಸ್ತೆಯನ್ನು ಗ್ಯಾಮನ್‌ ಇಂಡಿಯಾ ಕಂಪನಿ ಗುತ್ತಿಗೆ ಪಡೆದು ಅರ್ಧಕ್ಕೆ ಬಿಟ್ಟು ಹೋಗಿತ್ತು. ನೌಕರರ ವಾಹನ ಓಡಾಡಲು ರಸ್ತೆ ಅನಿವಾರ್ಯ ಆಗಿರುವುದರಿಂದ ಜಿಂದಾಲ್‌ ಕಂಪನಿ, ಗ್ಯಾಮನ್‌ ಇಂಡಿಯಾ ಕಂಪನಿಯ ಸಿಬ್ಬಂದಿಯ ಸಹಕಾರ ಪಡೆದು ಸುಮಾರು ಒಂದೂವರೆ ಕಿಮೀ ರಸ್ತೆ ನಿರ್ಮಿಸಿಕೊಂಡು ಜಿಂದಾಲ್‌ಗೆ ಸಂಪರ್ಕ ಮಾಡಿಕೊಳ್ಳಲು ನಿರ್ಧರಿಸಿ, ಕೆಲಸ ಆರಂಭಿಸಿದೆ. ಸ್ಥಳೀಯರ ವಿರೋಧ ವ್ಯಕ್ತವಾಗಬಹುದು ಎಂಬ ಭೀತಿಯಿಂದ ರಾತ್ರೋರಾತ್ರಿ ರಸ್ತೆ ನಿರ್ಮಾಣ ಕಾರ್ಯ ಜಿಂದಾಲ್‌ ನಡೆಸಿದೆ.
 

Follow Us:
Download App:
  • android
  • ios