ಕಲಬುರಗಿ ಜಿಲ್ಲಾ ಉಸ್ತುವಾರಿ ಮುರುಗೇಶ್ ನಿರಾಣಿ ಹೆಗಲಿಗೆ| ಕಲಬುರಗಿಯಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭ| ಕೋವಿಡ್ -19‌ ನಿಯಮ‌ ಪಾಲನೆ ಮಾಡಿ| ಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸಿದ ನಿರಾಣಿ| ಎಲ್ಲರ ವಿಶ್ವಾಸದೊಂದಿಗೆ ಜಿಲ್ಲೆಯ ‌ಸರ್ವಾಂಗೀಣ‌ ಅಭಿವೃದ್ಧಿ| ಸದ್ಯದಲ್ಲೇ ಅಧಿಕಾರಿಗಳ ಜೊತೆ ‌ಸಭೆ| 

ಬೆಂಗಳೂರು(ಮೇ.02): ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ಜಿಲ್ಲೆಯಲ್ಲಿ ಆಭರಣ ತಯಾರಿಕೆಯ ಘಟಕ (ಜ್ಯುವೆಲರಿ ಪಾರ್ಕ್)ವನ್ನು ಪ್ರಾರಂಭಿಸಲು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದಾರೆ. ವಿಶೇಷವೆಂದರೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕವಾದ ಬೆನ್ನಲ್ಲೇ ನಿರಾಣಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಈ ಹಿಂದೆ ಬೀದರ್ ಇಲ್ಲವೇ ಕಲಬುರಗಿಯಲ್ಲಿ ಜ್ಯುವೆಲ್ಲರಿ ಪಾರ್ಕ್‌ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಇದೀಗ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಇದೇ ಜಿಲ್ಲೆಯಲ್ಲಿ ತೆರೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಮುರುಗೇಶ್ ನಿರಾಣಿ, ಹಿಂದುಳಿದ ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 50 ರಿಂದ 75 ಎಕರೆ ಜಾಗದಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸಲು ನಿರ್ಧರಿಸಿದ್ದಾರೆ‌. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸಲಿದ್ದು, ಅಭರಣಗಳ‌ ತಯಾರಿಕೆ, ಗ್ರಾಹಕರು ಒಂದೇ ಸೂರಿನಡಿ ಖರೀದಿಸಬಹುದಾಗಿದೆ. ಇಲ್ಲಿಂದಲೇ ‌ದೇಶ- ವಿದೇಶಕ್ಕೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ

ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವ ಸಂವಿಧಾನದ 371 ನೇ (ಜೆ)ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ನಿವಾರಣೆಗೆ ಒತ್ತು ನೀಡಲಾಗುವುದು. ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಹಾಗೂ ರೈಲ್ವೆ ಸಂಪರ್ಕ ಸಾಕಷ್ಟು ಉತ್ತಮವಾಗಿದೆ. ದೇಶ- ವಿದೇಶಗಳಿಂದ ಬಂದು ಹೋಗುವವರಿಗೆ ಎಲ್ಲಾ ಸೌಲಭ್ಯಗಳಿವೆ. ಜಾಗತಿಕ ಮಟ್ಟದಲ್ಲಿ ಕಲಬುರಗಿ ಜಿಲ್ಲೆಯ ಹೆಸರು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜೊತೆಗೆ ರಾಜ್ಯ ಸರ್ಕಾರ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಿರುವ ಕಾರಣ ಸಚಿವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ತಮ್ಮ ಮೇಲೆ ವಿಶ್ವಾಸವಿಟ್ಡು ಕಲಬುರಗಿ ಜಿಲ್ಲೆಯ ‌ಉಸ್ತುವಾರಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೆ ಇದೇ ವೇಳೆ ನಿರಾಣಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಭಾಗದ ಶಾಸಕರು, ಸಂಸದರು ಸೇರಿದಂತೆ ಪಕ್ಷಾತೀತವಾಗಿ‌ ಎಲ್ಲಾ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ‌ಅಭಿವೃದ್ಧಿಗೆ ಪರಿಶ್ರಮಿಸುವುದಾಗಿ ನಿರಾಣಿ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಬಳಿ ಇಂತಹದ್ದೇ ಜಿಲ್ಲೆಯ ಉಸ್ತುವಾರಿ ಕೊಡಬೇಕೆಂದು ಬೇಡಿಕೆ ಇಟ್ಡಿರಲಿಲ್ಲ. ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಾಗ ಹಾಗೂ ಖಾತೆ ಹಂಚಿಕೆ ಮಾಡವಾಗಲೂ ಯಾವುದೇ ರೀತಿಯ ಒತ್ತಡ ಹಾಕಿರಲಿಲ್ಲ. ಮೊದಲಿನಿಂದಲೂ ನಾನು ಒಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವತಃ ತಾವೇ ವಿಮಾನದಲ್ಲಿ ರೆಮ್‌ಡೆಸಿವಿರ್‌ ತಂದು ಕೊಟ್ಟ ಸಂಸದ ಜಾದವ್

ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರು ಯಾವುದೇ ಸಂದರ್ಭದಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಕಲ್ಯಾಣ ಕರ್ನಾಟಕ ಪ್ರದೇಶವನ್ನು ಇನ್ನಷ್ಟು ‌ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಿಯಮ‌ ಪಾಲನೆ ಮಾಡಿ

ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್-19‌ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ‌ಹೆಚ್ವಾಗುತ್ತಿವೆ. ಜಿಲ್ಲೆಯ ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನು ಚಾಚುತಪ್ಪದೆ ನಿಯಮಗಳನ್ನು ಪಾಲನೆ ಮಾಡಬೇಕು. ಸಾರ್ವಜನಿಕರು ನಿಗಧಿತ ಸಮಯದಲ್ಲಿ ತಮಗೆ ಅಗತ್ಯವಿರುವ ಸಾಮಾನುಗಳನ್ನು‌ ಖರೀದಿಸಬೇಕು. ಉಳಿದ ಸಮಯದಲ್ಲಿ ಮನೆಯಿಂದ ಆಚೆ ಬಾರದೆ, ಮಾಸ್ಕ್ ಬಳಕೆ, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಕಾಪಾಡುಕೊಳ್ಳಬೇಕೆಂದು ಸಲಹೆ ಮಾಡಿದರು. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವುದಾಗಿ‌ ನಿರಾಣಿ ಅವರು ತಿಳಿಸಿದ್ದಾರೆ.