ಮುನಿಸು ಸರಿಮಾಡಲು ಪತಿ ಜೊತೆ ಹೋದ ಅನಿತಾ ವಿರುದ್ಧವೇ ಅಸಮಾಧಾನ
ಮುನಿಸು ಸರಿಪಡಿಸಲೆಂದು ಪತಿ ಜೊತೆಗೆ ತೆರಳಿದ್ದ ಅನಿತಾ ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ತಿರುಗಿ ಬಿದ್ದಿದೆ.
ರಾಮನಗರ (ಅ.15): ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಡೆಸಿದ ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡದಿರುವ ವಿಚಾರವನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಅನೇಕರು ಶಾಸಕಿ ಅನಿತಾ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದರು ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ರಾಮನಗರ ಶಾಸಕಿ ಅನಿತಾ ಅವರು ಕ್ಷೇತ್ರಕ್ಕೆ ಬರದ ಕಾರಣ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಶಾಸಕರ ಗೈರು, ವಿರೋಧ ಪಕ್ಷಗಳ ನಾಯಕರ ಹೆಚ್ಚಿದ ಓಡಾಟಗಳ ಬಗ್ಗೆ ಕಾರ್ಯಕರ್ತರು ನೋವು ತೋಡಿಕೊಂಡಿದ್ದಾರೆ.
ಮುನಿಸು ಸರಿ ಮಾಡಲು ಪತ್ನಿ ಜೊತೆಗೆ ದಿಢೀರ್ ತೆರಳಿದ್ರು ಎಚ್‌ಡಿಕೆ ...
ರಾಮನಗರದಲ್ಲಿ ಶಾಸಕರ ಪಿಎ ಯಾರು ಅಂತಲೇ ಗೊತ್ತಾಗುತ್ತಿಲ್ಲ. ತಮ್ಮ ವ್ಯಾಪ್ತಿಯ ಅಭಿವೃದ್ಧಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಸರಿಯಾದ ವ್ಯಕ್ತಿಯನ್ನು ಗುರುತಿಸಿ ಕೊಡಿ ಎಂದು ಕಾರ್ಯಕರ್ತರು ಮನವಿ ಮಾಡಿಕೊಂಡರು ಎಂದು ಗೊತ್ತಾಗಿದೆ.
ಕೈಲಾಂಚ ಹೋಬಳಿ ಮುಖಂಡರು - ಕಾರ್ಯಕರ್ತರ ಸಭೆಗೆ ಶಾಸಕಿ ಅನಿತಾ ಕುಮಾರಸ್ವಾಮಿ ಗೈರಾಗಿದ್ದರು. ಕುಮಾರಸ್ವಾಮಿ ಅವರೇ ಪ್ರತಿಯೊಬ್ಬ ಮುಖಂಡ ಮತ್ತು ಕಾರ್ಯಕರ್ತನ ಅಹವಾಲು ಆಲಿಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು.