ಜಾತ್ಯತೀತ ಜನತಾದಳದ ಪ್ರತಿಯೊಬ್ಬ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ ಆ ಶಕ್ತಿಯಿಂದ ಮತ್ತೊಮ್ಮೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು

ಸಾಲಿಗ್ರಾಮ : ಜಾತ್ಯತೀತ ಜನತಾದಳದ ಪ್ರತಿಯೊಬ್ಬ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ ಆ ಶಕ್ತಿಯಿಂದ ಮತ್ತೊಮ್ಮೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ಮಿರ್ಲೆ ಹೋಬಳಿಯ ಜೆಡಿಎಸ್‌ ಪಕ್ಷದ ಸಮಾವೇಶದಲ್ಲಿ ಮಾತನಾಡಿದರು. 2013ರ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ತಲೆಯ ಮೇಲೆ ಅತಿ ಹೆಚ್ಚು ಸಾಲಮಾಡಿ ಹೋಗಿ ಇಂದು ಡಬಲ್‌ ಎಂಜಿನ್‌ ಸರ್ಕಾರ ಬಿಜೆಪಿಯವರು ಮುಂದುವರಿಸಿ ಅತಿಹೆಚ್ಚು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ. ರಾಜ್ಯದ ರೈತರ ಸಾಮಾನ್ಯರು ಉಳಿಯಬೇಕಾದರೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂದರು.

ಎಚ್‌.ಡಿ. ದೇವೇಗೌಡರು ಹಾರಂಗಿ, ಹೇಮಾವತಿ ನೀರಾವರಿ ಹೀಗೆ ಅನೇಕ ರೈತಪರ ಕಲ್ಯಾಣ ಕಾರ್ಯಕ್ರಮ ನೀಡಲು ಹಂಬಲಿಸುತ್ತಿದ್ದಾರೆ. ಮಾತೆತ್ತಿದರೆ ನಾನು ಐದು ವರ್ಷಗಳ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದೆ ಎಂದು ಹೇಳುವ ಸಿದ್ದರಾಮಯ್ಯ ಅವರೇ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಹೇಗೆ? ನಿಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದರು. ಕ್ಷೇತ್ರದ ಮತದಾರರಿಗೆ ಗೊತ್ತಿದೆ ತಮ್ಮ ಕಷ್ಟಸುಖದಲ್ಲಿ ಬಾಗಿ ಆಗಿ ಗ್ರಾಮಗಳ ಅಭಿವೃದ್ಧಿಗೆ ಸ್ಪಂದನೆ ನೀಡುವ ವ್ಯಕ್ತಿಗೆ ಆಯ್ಕೆ ಮಾಡಿ ಕೆಲವರು ಚುನಾವಣೆ ಬರುತ್ತಿದ್ದಂತೆ ಬಹಳ ಸುತ್ತಾಡುತ್ತಾ ನಾನು ಎರಡು ಬಾರಿ ಸೋತಿದ್ದೇನೆ. ಈ ಬಾರಿ ನೀವು ಗೆಲ್ಲಿಸದಿದ್ದರೆ ನಾನು ಇರುವುದಿಲ್ಲ ಎಂದು ಕಣ್ಣೀರು ಹಾಕುತ್ತಾ ಕಾಲಿಗೆ ಬೀಳ್ತಾರೆ. ಇಂತವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಪರೋಕ್ಷವಾಗಿ ರವಿಶಂಕರ್‌ ವಿರುದ್ಧ ಹರಿಹಾಯ್ದರು.

ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದು ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿದ್ದು ಮುಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಅವರ ಸಂಪುಟದಲ್ಲಿ ನಾನು ಕೂಡ ಸಚಿವನಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದರು. ಇದಕ್ಕೂ ಮೊದಲು ಶಾಸಕ ಸಾ.ರಾ. ಮಹೇಶ್‌ ಮಿರ್ಲೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಮಂದಿ ಬೈಕ್‌ ಮೂಲಕ ಶಾಸಕರನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಮುಂಭಾಗದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮೂಲಕ ಅದ್ಧೂರಿಯಾಗಿ ವೇದಿಕೆವರೆಗೂ ಕರೆದು ತಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಮೆಡಿಕಲ್‌ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಸಾಲಿಗ್ರಾಮ ಲಾಲೂ ಸಾಹೇಬ್‌, ಅಯಾಜ್‌ ಅಹಮದ್‌, ಪ್ರಕಾಶ್‌, ಮಿರ್ಲೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ನರಚನಹಳ್ಳಿ ಗ್ರಾಪಂ ಅಧ್ಯಕ್ಷ ಮೋಹನ್‌ ಮಿರ್ಲೆ, ಅರವಿಂದ್‌, ಧನಂಜಯ್‌, ತುಕಾರಾಮ, ದೊಡ್ಮನೆ ಮಂಜು, ವಿಎಸ್‌ಎಸ್‌ಎನ್‌ ಅಧ್ಯಕ್ಷ ಅರುಣ್‌, ನಿರ್ದೇಶಕರಾದ ನಾಗೇಂದ್ರ, ಲೋಕೇಶ್‌, ಬುದ್ಧಿವಂತ ಚಂದು, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.