ಜೆಡಿಎಸ್‌ನವರು ಯಾರನ್ನೂ ಬೆಳೆಯಲು ಬಿಡಲ್ಲ: ಕೆಸಿಎನ್
ಜೆಡಿಎಸ್ ವರಿಷ್ಠರು ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಒಬ್ಬರನ್ನು ತೆಗೆಯಲು ಮತ್ತೊಬ್ಬರನ್ನು ಹುಟ್ಟುಹಾಕುತ್ತಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದರು.
ಮಂಡ್ಯ : ಜೆಡಿಎಸ್ ವರಿಷ್ಠರು ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಒಬ್ಬರನ್ನು ತೆಗೆಯಲು ಮತ್ತೊಬ್ಬರನ್ನು ಹುಟ್ಟುಹಾಕುತ್ತಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ನನ್ನ ಕೊಡುಗೆ ಏನೂ ಇರಲಿಲ್ಲ. ಆದರೆ, ಮಾಜಿ ಸ್ಪೀಕರ್ ಕೃಷ್ಣರನ್ನು ಮಟ್ಟಹಾಕಲು ನನ್ನನ್ನು ಹುಟ್ಟು ಹಾಕಿದ ಹಾಗೆ ನನ್ನನ್ನು ಮುಗಿಸಲು ಮತ್ತೊಬ್ಬರನ್ನು ಹುಟ್ಟು ಹಾಕಿದರು ಎಂದು ದೂರಿದರು.
ನಾನು ಆ ಪಕ್ಷದಲ್ಲಿದ್ದೆ. ಅವರ ಮನೆ ಅನ್ನ ತಿಂದಿದ್ದೇನೆ. ಅವರನ್ನು ಟೀಕೆ ಮಾಡೊಲ್ಲ. ಆದರೆ, ನನ್ನ ನೋವನ್ನು ಹೇಳುತ್ತಿದ್ದೇನೆ ಅಷ್ಟೆ. ಎಚ್.ಡಿ.ದೇವೇಗೌಡರ ಕುಟುಂಬ ಯಾ ರನ್ನು ತಾನೆ ಬೆಳೆಯಲು ಬಿಟ್ಟಿದೆ ಹೇಳಿ ? ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ಪಕ್ಷದಲ್ಲಿ ಶೇ.99ರಷ್ಟುನಾಯಕರು ಭಯದ ವಾತಾವರಣದಲ್ಲಿದ್ದಾರೆ ಎಂದರು.
ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಉಸಿರು ಕಟ್ಟುವ ವಾತಾವರಣವಿತ್ತು. ಆ ಪಕ್ಷದಲ್ಲಿ ಇರಲು ಸಾಧ್ಯವಾಗದೇ ಬಿಜೆಪಿ ಸೇರಬೇಕಾಯಿತು ಎಂದ ಅವರು, ಯಡಿಯೂರಪ್ಪ ನನ್ನ ತಂದೆ ಸಮಾನರು, ಈಗ ಬಿಜೆಪಿಯಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಅಮಿತ್ ಷಾ ನನಗೆ ಸೂಚಿಸಿದ್ದಾರೆ ಎಂದರು.
ಕೆ.ಆರ್.ಪೇಟೆ ಕ್ಷೇತ್ರದ ಪ್ರಚಾರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಬರುತ್ತಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವವರೆಗೂ ಯಡಿಯೂರಪ್ಪನವರು ಸುಮ್ಮನೆ ಕೂರಲ್ಲ ಎಂದರು.
KR ಪೇಟೆಯಿಂದಲೇ ಸ್ಪರ್ಧೆ
ಬೆಂಗಳೂರು (ಮಾ.23): ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಮಂಡ್ಯದಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದ ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರುವ ಸುಳಿವು ನೀಡಿದ್ದ ನಾರಾಯಣಗೌಡ ಇದೀಗ ಮತ್ತೆ ಬಿಜೆಯಲ್ಲೇ ಇರಲಿದ್ದಾರೆ. ಹೌದು! ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ನಾರಾಯಣಗೌಡರು ಕೆ.ಆರ್.ಪೇಟೆಯಿಂದ ಬಿಜೆಪಿಯಿಂದಲ್ಲೇ ಸ್ಪರ್ಧೆ ಮಾಡ್ತಾರೆ.
ಕಳೆದ ಭಾನುವಾರ ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಜೊತೆ ನಾರಾಯಣ ಗೌಡರು ಮಾತನಾಡಿಕೊಂಡು ಬಂದಿದ್ದಾರೆ. ಅಮಿತ್ ಶಾ ಭೇಟಿಯಾದ ಬಳಿಕ ನಿನ್ನೆ (ಬುಧುವಾರ) ಬಿ.ಎಸ್.ಯಡಿಯೂರಪ್ಪನವರನ್ನೂ ಸಹ ನಾರಾಯಣ ಗೌಡ ಭೇಟಿಯಾಗಿದ್ದು, ಯುಗಾದಿ ಶುಭಾಶಯ ಹೇಳಿ ಬಂದಿದ್ದಾರೆ. ಇಂದು ತಮ್ಮ ಇಲಾಖೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆ ನಾರಾಯಣ ಗೌಡ ಪಾಲ್ಗೊಳ್ಳುತ್ತಿದ್ದಾರೆ.
ಕಲಬುರಗಿ ಪಾಲಿಕೆ ಮೇಯರ್ ಎಲೆಕ್ಷನ್‌ಗೆ ಬರ್ತಾರಾ ಎಐಸಿಸಿ ಅಧ್ಯಕ್ಷ: ಕಾಂಗ್ರೆಸ್ ಗೆಲ್ಲಬೇಕಾದ್ರೆ ಖರ್ಗೆ ಬರಲೇಬೇಕು!
ನಾರಾಯಣಗೌಡ, ಸೋಮಣ್ಣ ಬಿಜೆಪಿ ಬಿಡಲ್ಲ: ಸಚಿವರಾದ ಕೆ.ಸಿ. ನಾರಾಯಣಗೌಡ, ವಿ. ಸೋಮಣ್ಣ ಅವರು ಬಿಜೆಪಿಯನ್ನು ತೊರೆಯುವುದಿಲ್ಲ. ಅಲ್ಲದೇ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರ ಅಲೆ ರಾಜ್ಯದಲ್ಲಿ ವ್ಯಾಪಕವಾಗಿದೆ. ವಿರೋಧ ಪಕ್ಷದವರು ಬಿಜೆಪಿ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ರಾಜ್ಯದ ಜನ ನಂಬದೇ ಬಿಜೆಪಿ ಪರ ನಿಲ್ಲುತ್ತಾರೆ ಎಂದರು.
ಇತ್ತೀಚೆಗೆ ನಡೆದ ರಾಮನಗರದ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರಕ್ಕೆ ಧಕ್ಕೆಯಾಗಿಲ್ಲ. ಈ ಕುರಿತು ನನ್ನ ಜತೆ ಸಂಸದ ಡಿ.ಕೆ. ಸುರೇಶ ಅವರು ವಾಗ್ವಾದ ನಡೆಸಿದ್ದು ಸರಿಯಲ್ಲ ಎಂದರು. ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪನವರ ಕಚೇರಿಯಲ್ಲಿ ಸಿಕ್ಕ ಕೋಟ್ಯಂತರ ರು. ಬಗ್ಗೆ ಲೋಕಾಯುಕ್ತ ವ್ಯಾಪಕ ತನಿಖೆ ಕೈಗೊಂಡಿದ್ದು, ಅವರು ಈಗಾಗಲೇ ಈ ಸಂಬಂಧ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಾಳು ವಿರುಪಾಕ್ಷಪ್ಪನವರ ಅವರನ್ನು ರಕ್ಷಣೆ ಮಾಡುವ ಕಾರ್ಯವನ್ನು ಸರ್ಕಾರ ಮಾಡಿಲ್ಲ.