ಕೆ.ಆರ್‌. ನಗರ (ಏ.09): 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರಲು ಪಕ್ಷದ ಮುಖಂಡರು ಗುರಿ ಹಾಕಿಕೊಂಡಿದ್ದೇವೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ತಾಲೂಕಿನ ಗೊರಗುಂಡಿ ಗ್ರಾಮದಲ್ಲಿ ಗುರುವಾರ ನಡೆದ ಲಕ್ಷ್ಮೀ ದೇವಿ, ದಂಡಮ್ಮ ಮತ್ತು ಲಕ್ಕಮ್ಮ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಗುದ್ದಾಡಲಿ ಎಂದು ಬಿಟ್ಟಿದ್ದೇವೆ ಎಂದರು.

ಅಲ್ಲಾನ ದಯೆಯಿಂದ ನಾನು ಪಾಸ್‌ ಆದ್ರೆ 2023ರಲ್ಲಿ ನಮ್ಮದೇ ಸರ್ಕಾರ: ಎಚ್ಡಿಕೆ .

ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ ಅವರು ಉಪ ಚುನಾವಣೆ ಮತ್ತು ಸಿಡಿ ಹಗರಣಗಳ ಚರ್ಚೆಯಲ್ಲಿ ತೊಡಗಿದ್ದು, ಜನರೆ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆಂದು ಮಾಜಿ ಸಚಿವರು ಎಚ್ಚರಿಕೆ ನೀಡಿದರು.

ಮಳೆಯಿಲ್ಲದೆ ರಾಜ್ಯದ ಜನತೆ ಕುಡಿವ ನೀರಿನ ಸಮಸ್ಯೆ ಸೇರಿದಂತೆ ಇತರ ಮೂಲ ಸವಲತ್ತುಗಳಿಲ್ಲದೆ ಪರದಾಡುತ್ತಿದ್ದು, ಇದರ ಚಿಂತೆ ಇಲ್ಲದ ಎರಡು ಪಕ್ಷಗಳವರು ರಾಜಕೀಯ ನಾಟಕವಾಡುತ್ತಿದ್ದು, ಇವರ ಆಟಕ್ಕೆ 2023ರ ಚುನಾವಣೆಯಲ್ಲಿ ತೆರೆ ಬೀಳಲಿದೆ ಎಂದು ಅವರು ಭವಿಷ್ಯ ನುಡಿದರು.

ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಆ ಮೂಲಕ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಂಸ್ಥೆಗೆ ನಷ್ಟವಾದರೆ ನೌಕರರಿಗೆ ತೊಂದರೆಯಾಗುತ್ತದೆ, ಆದ್ದರಿಂದ ಸರ್ಕಾರದ ಜತೆ ಸೌಹಾರ್ದತೆಯಿಂದ ಮಾತುಕತೆ ನಡೆಸಬೇಕೆಂದು ಮಾಜಿ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.