ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೇರಿಸಲು ಮಾಸ್ಟರ್ ಪ್ಲಾನ್
- ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶ
- ಕರ್ನಾಟಕವೂ ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಚುರುಕು
ಮುಂಡರಗಿ (ಸೆ.21): ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶದಿಂದ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಚುರುಕುಗೊಳಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಅವರು ಸೋಮವಾರ ತಾಲೂಕು ಜಾತ್ಯತೀತ ಜನತಾದಳದ ಕಾರ್ಯಾಲಯ ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪದೇ ಪದೇ 100 ಸುಳ್ಳು ಹೇಳಿ ಅದನ್ನೇ ಸತ್ಯಮಾಡಿ ನಂಬಿಸುವ ಬಿಜೆಪಿಯವರನ್ನು ಉತ್ತರ ಕರ್ನಾಟಕದ ಜನತೆ ನಂಬುತ್ತಾರೆ. ಪ್ರಾಮಾಣಿಕವಾಗಿ ರೈತರ 2 ಲಕ್ಷ ರು. ಸಾಲ ಮನ್ನಾ ಮಾಡುವ, ರೈತರ ಪರವಾಗಿ ಕೆಲಸ ಮಾಡುವ ಒಂದು ಪಕ್ಷಕ್ಕೆ ಗೌರವ ಕೊಡುವ ತೀರ್ಮಾನವನ್ನು ಮುಖ್ಯವಾಗಿ ಉತ್ತರ ಕರ್ನಾಟಕದ ಜನತೆ ಮಾಡಬೇಕಾಗಿದೆ ಎಂದರು.
ಕಾಂಗ್ರೆಸ್ ಸೇರ್ಪಡೆಗೆ ಇನ್ನೂ ನಿರ್ಧರಿಸಿಲ್ಲ : ಶೀಘ್ರ ಅಂತಿಮ ತೀರ್ಮಾನ
ಮುಖ್ಯವಾಗಿ ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಯ ಜನತೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಸಾಲಮನ್ನಾದಿಂದ ಹೆಚ್ಚು ಲಾಭ ಪಡೆದುಕೊಂಡಿದೆ. ಆದರೂ ಚುನಾವಣೆ ವಿಷಯ ಬಂದಾಗ ಜನತೆ ಹೆಚ್ಚು ಅಪ್ಪಿಕೊಳ್ಳುತ್ತಿಲ್ಲ ಎನ್ನುವ ನೋವು ಕುಮಾರಸ್ವಾಮಿ ಅವರಿಗಿದೆ. ನಾವೂ ಕೂಡಾ ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಒಂದಿಷ್ಟುಹಿಂದೆ ಬಿದ್ದಿದ್ದು, ಇದೀಗ ಜೆಡಿಎಸ್ ಬಲವರ್ಧನೆಗಾಗಿ ರಾಜ್ಯದ ಪ್ರತಿ ಜಿಲ್ಲೆಯ ಒಬ್ಬರು ವೀಕ್ಷಕರು, ತಾಲೂಕಿಗೊಬ್ಬ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತರ ಕರ್ನಾಟಕ ಹೇಳುಕೊಳ್ಳುಷ್ಟುಅಭಿವೃದ್ಧಿ ಕಂಡಿದೆ. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಎಲ್ಲರೂ ಅಧಿಕಾರದ ಅವಧಿಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಕಳೆದಿದೆ. ಅವರು ಉತ್ತರ ಕರ್ನಾಟಕಕ್ಕೆ ನೀಡಿರುವ ಅನುದಾನ ಬಹಿರಂಗ ಪಡಿಸಲಿ, ನಾವೂ ನಮ್ಮ ಜನತಾ ಪರಿವಾರದ ಸರ್ಕಾರಗಳು ಬಂದಾಗಿನ ಅನುದಾನ ಎಷ್ಟುಬಿಡುಗಡೆಯಾಗಿರುತ್ತದೆ ಎಂದು ಬಹಿರಂಗ ಪಡಿಸುತ್ತೇವೆ ಎಂದು ಸವಾಲು ಹಾಕಿದರು.