ಮನ್ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣ ಹಗರಣದ ತನಿಖೆ ನಡೆಸದಂತೆ ಹೇಳಿದ ದೇವೇಗೌಡರ ಆಡಿಯೋ ವೈರಲ್ ಸಾಬೀತಾದರೆ ಪಕ್ಷ ವಿಸರ್ಜನೆ ಸವಾಲು ಹಾಕಿದ ಮುಖಂಡ
ನಾಗಮಂಗಲ (ಜೂ.28): ಮನ್ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣದ ಕುರಿತು ಸಿಬಿಐ ಮಾಡಬೇಡಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಎಲ್ಲಿಯೂ ಹೇಳಿಲ್ಲ. ಇದನ್ನು ಸಾಬೀತುಪಡಿಸಿದರೆ ಜೆಡಿಎಸ್ ಪಕ್ಷವನ್ನು ವಿಸರ್ಜಿಸುತ್ತೇವೆ ಎಂದು ಶಾಸಕ ಕೆ.ಸುರೇಶ್ ಗೌಡ ಮಾಜಿ ಸಚಿವ ಚೆಲುವ ರಾಯಸ್ವಾಮಿಗೆ ಸವಾಲು ಹಾಕಿದರು.
ಭಾನುವಾರ ಸುದ್ದಿಗಾರರೊಂದಿಗೆ ನಾಗಮಂಗಲದಲ್ಲಿ ಮಾತನಾಡಿದ ಸುರೇಶ್ ಗೌಡ ದೇವೇಗೌಡರು ಸೇರಿದಂತೆ ಜೆಡಿಎಸ್‌ನ ಎಲ್ಲ ನಾಯಕರು ಪ್ರಕರಣ ಕುರಿತು ಯಾವುದೇ ತನಿಖೆ ನಡೆಯಲಿ ಎಂದು ಹೇಳುತ್ತಿದ್ದಾರೆ ಹೊರತು ತನಿಖೆಗೆ ಅಡ್ಡಿಪಡಿಸುತ್ತಿಲ್ಲ ಎಂದರು.
ಹಗರಣ ತನಿಖೆಗೆ ಗೌಡರಿಂದ ಅಡ್ಡಿ?: ಆಡಿಯೋ ವೈರಲ್...
ಚಲುವರಾಯಸ್ವಾಮಿ ರಾಜಕೀಯಕ್ಕೊಸ್ಕರ ದೇವೇಗೌಡರ ಕುಟುಂಬವನ್ನು ಎಳೆದು ತರುತ್ತಿದ್ದಾರೆ. ಇದು ಅವರಿಗೆ ಶೋಭೆಯಲ್ಲ. ದೇವೇಗೌಡರನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ ಎನ್ನುವುದು ಕಳೆದ ಚುನಾವಣೆಯಲ್ಲಿಯೇ ಜನ ತೋರಿಸಿದ್ದಾರೆ. ಆದರೂ ಬುದ್ದಿ ಬಂದಿಲ್ಲ ಎಂದರು.
ಜೆಡಿಎಸ್ನಲ್ಲಿ ಎಲ್ಲವನ್ನೂ ಅನುಭವಿಸಿ ಅವರ ಬಗ್ಗೆ ಮಾತನಾಡುತ್ತಿದ್ದೀರಿ. ರಾಜಕೀಯವಾಗಿ ಶಕ್ತಿಕೊಟ್ಟು ಬೆಳೆಸಿದ ದೇವೇಗೌಡರ ತೇಜೋವಧೆ ಮಾಡಲು ತೆರೆ ಮರೆಯಲ್ಲೇ ಯತ್ನ ನಡೆಸುತ್ತಿದ್ದೀರಿ ಎಂದರು.
ಇಂದು ಏನಾಗಿದ್ದೀರೋ ಅದಕ್ಕೆ ಜೆಡಿಎಸ್ ಕಾರಣ ಎಂಬುದನ್ನು ಅರಿಯಬೇಕು ಎಂದು ಕಿಡಿಕಾರಿದರು.
ರಾಜಕೀಯ ಎಲ್ಲಿ ಕಲಿತರು ಯಾರ ಏಣಿ ಹಿಡಿದು ಮೇಲೆ ಬಂದರೂ ಅನ್ನುವುದನ್ನು ಮರೆತು ಜಮೀರ್ ಅಹಮ್ಮದ್ ಹಾಗೂ ಚಲುವರಾಯಸ್ವಾಮಿ ಮಾತನಾಡುತ್ತಿದ್ದಾರೆ. ಉಂಡ ಮನೆಗೆ ದ್ರೋಹ ಬಗೆವ ನಿಮಗೆ ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲವೆಂದರು.
