ಹಾಸನ (ಏ.17):  ಉದ್ಯೋಗಿನಿ ಯೋಜನಡಯಡಿ ಸಾಲ ನೀಡುವಲ್ಲಿ ವಿಳಂಬ ಹಾಗೂ ಕೆಲವರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರೂ ಆದ ಎಚ್‌.ಡಿ.ರೇವಣ್ಣ ಅವರು ಸಭೆಯಲ್ಲೇ ಕಾವೇರಿ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ಮೇಲೆ ಅವಾಚ್ಯ ಪದಗಳಿಂದ ರೇಗಾಡಿದ ಘಟನೆ ಶುಕ್ರವಾರ ನಡೆದಿದೆ.

ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎಲ್ಲಾ ಶಾಸಕರೂ ಹಾಜರಿದ್ದರು. ಕೇಂದ್ರ ಸರ್ಕಾರದ ಉದ್ಯೋಗಿನಿ ಯೋಜನೆ ವಿಷಯ ಚರ್ಚೆಗೆ ಬಂದಾಗ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಅವರು ಕಾವೇರಿ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳ ಮೇಲೆ ಗರಂ ಆದರು. ಜಿಲ್ಲೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಬಾಗಿಲು ಮುಚ್ಚುವುದೆ ನನ್ನ ಮೊದಲ ಗುರಿ. ಕೆಲ ಫಲಾನುಭವಿಗಳಿಗೆ ನಾನೇ ಜಾಮೀನು ಹಾಕಿದ್ದರೂ ಈ ಬ್ಯಾಂಕಿನವರು ಸಾಲ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾವೇರಿ ಗ್ರಾಮೀಣ ಬ್ಯಾಂಕ್‌ ಮುಚ್ಚಿಸೋದೆ ನನ್ನ ಗುರಿ:

ಕಾವೇರಿ ಗ್ರಾಮೀಣ ಬ್ಯಾಂಕ್‌ನವರು ಜನರನ್ನ ಹಾಳು ಮಾಡುತ್ತಿದ್ದಾರೆ ಎಂದರಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಲೂಟಿ ಕೋರರು, ಜನರ ದುಡ್ಡು ದೋಚಲು ಇವರಿದ್ದಾರೆ ಎಂದು ಹರಿಹಾಯ್ದರು. ನಾನೇ ಜಾಮೀನು ಹಾಕಿದ್ರೂ ಇವರು ಸಾಲ ಕೊಡಲ್ಲ ಎಂದು ಹೇಳಿ ವಾಪಸ್‌ ಕಳುಹಿಸಿದ್ದಾರೆ. ಈ ಜಿಲ್ಲೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಮುಚ್ಚಿಸೋದೆ ನನ್ನ ಮೊದಲ ಗುರಿ ಎಂದು ಶಪಥ ಮಾಡಿದರು. ಉದ್ಯೋಗಿನಿ ಯೋಜನೆಯಲ್ಲಿ ಸಬ್ಸಿಡಿ ಕೊಡುವುದಕ್ಕೆ ನಾನೆ ಖುದ್ಧಾಗಿ ಇಬ್ಬರಿಗೆ ನಾನೇ ಜಾಮೀನು ನೀಡಿ ಸಹಿ ಹಾಕಿದರೂ ಕಾವೇರಿ ಬ್ಯಾಂಕಿನವರು ಸಾಲ ಮಂಜೂರು ಮಾಡಲು ಹಿಂದೇಟು ಹಾಕಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಮುಚ್ಚುವುದೆ ನಮ್ಮ ಮೊದಲ ಆಧ್ಯತೆ ಎಂದು ಎಚ್ಚರಿಸಿದಲ್ಲದೇ ಸಿಟ್ಟಿಗೆದ್ದು ಸಭೆಯಲ್ಲಿ ಕೂಗಾಡಿದರು.

ನಿಷ್ಠಾವಂತರಿಗಿಲ್ಲ ಜೆಡಿಎಸ್‌ನಲ್ಲಿ ಬೆಲೆ - ಹಣವೇ ಮುಖ್ಯ : ಮುಖಂಡರ ಗಂಭೀರ ಆರೋಪ ..

ಸಭೆಯಲ್ಲಿ ಜಿಲ್ಲಾ​ಧಿಕಾರಿ ಆರ್‌. ಗಿರೀಶ್‌, ಜಿಪಂ ಮುಖ್ಯಕಾರ‍್ಯನಿರ್ವಹಣಾಧಿ​ಕಾರಿ ಬಿ.ಎ. ಪರಮೇಶ್‌, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಆಲೂರು -ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಶ್ರವಣಬೆಳಗೊಳಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ, ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್‌ ಇತರರು ಪಾಲ್ಗೊಂಡಿದ್ದರು.

 ಕಾಮಗಾರಿ ವಿಳಂಬಕ್ಕೆ ಆಕ್ಷೇಪ

ಇದೇ ವೇಳೆ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಸಂಸದ ಪ್ರಜ್ವಲ್‌ ರೇವಣ್ಣ ಮಾಹಿತಿ ಸಂಗ್ರಹಿಸಿದರು. ಹಾಸನ ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ಬಾಕಿ ಕಾಮಗಾರಿ ಶೀಘ್ರವಾಗಿ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು. ಹಾಸನದಿಂದ ಸಕಲೇಶಪುರ ತಾಲೂಕಿನ ಮಾರನಹಳ್ಳಿವರೆಗೆ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ವರ್ಷದ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಸಲು ತಾಕೀತು ಮಾಡಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾ​ಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.