ಜೆಡಿಎಸ್‌ನಲ್ಲಿ  ನಿಷ್ಠಾವಂತರಿಗೆ ಬೆಲೆ ಇಲ್ಲ.  ಹಣವಂತರಿಗೆ ಮಾತ್ರವೇ ಬೆಲೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವರು ಪಕ್ಷ ತೊರೆದಿದ್ದು ಮುಖಂಡರಿಗೆ ದೂರು ನೀಡಿದರು ಪ್ರಯೋಜನವಿಲ್ಲದಂತಾಗಿದೆ ಎಂದು ಕೆಲ ನಾಯಕರು ಆರೋಪಿಸಿದ್ದಾರೆ.

 ಬೇಲೂರು (ಏ.17):  ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡದೆ ಹಣವಂತರಿಗೆ ಮಣೆ ಹಾಕಿ ಬಿ ಫಾರಂ ನೀಡಿರುವುದು ಪಕ್ಷಕ್ಕೆ ಹಿನ್ನಡೆಯಾಗಿದ್ದು, 8 ಸ್ಥಾನ ಗೆಲ್ಲುವುದು ಕಷ್ಟಎಂದು ಪುರಸಭಾ ಮಾಜಿ ಸದಸ್ಯರಾದ ರವಿ ಅಣ್ಣೇಗೌಡ ಮತ್ತು ಮಂಜುನಾಥ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಿಷ್ಠಾವಂತ ಜೆಡಿಎಸ್‌ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇವೆ. ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಅರ್ಜಿ ಹಾಕಿದ್ದೆವು. ಆದರೆ ಪಕ್ಷದ ಮುಖಂಡರು ನಿಷ್ಠಾವಂತಗಿಂತರನ್ನು ಕಡೆಗಣಿಸಿ ಜೆಡಿಎಸ್‌ ಪಕ್ಷದಲ್ಲಿ ಕೆಲಸ ಮಾಡದವರಿಗೆ ಟಿಕೆಟ್‌ ನೀಡಿ ನಮ್ಮಂಥ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ವಿಶೇಷವಾಗಿ 1ನೇ ವಾರ್ಡ್‌ ಡಿಂಪಲ್‌ ಮೋಹನಕುಮಾರ್‌, 2ನೇ ವಾರ್ಡ್‌ ಮಂಜುನಾಥ, 5ನೇ ವಾರ್ಡ್‌ ಫಾರುಖ್‌, ಮಾಜಿ ಅಧ್ಯಕ್ಷರಾದ ಬಿ.ಗಿರೀಶ್‌, ಆರ್‌.ಎಸ್‌.ಪ್ರಸನ್ನ ಕುಮಾರ್‌ ಕುಟುಂಬದವರಿಗೆ ಹಾಗೂ ಚೆನ್ನಕೇಶವ ನಗರದ ನಿಂಗರಾಜು ಇನ್ನೂ ಮುಂತಾದವರಿಗೆ ಇದೇ ರೀತಿಯಲ್ಲಿ ಅನ್ಯಾಯವಾಗಿದೆ ಎಂದರು.

ದಳಕ್ಕೆ ಅಧಿಕಾರದ ಚುಕ್ಕಾಣಿ : ಪ್ರಜ್ವಲ್ ರೇವಣ್ಣ ಭರವಸೆ

ಜೆಡಿಎಸ್‌ ಪಕ್ಷದ ಸ್ವಾರ್ಥವನ್ನು ಗಮನಿಸಿ ಈಗಾಗಲೇ ಮಾಜಿ ಅಧ್ಯಕ್ಷರಾದ ಜಿ.ಶಾಂತಕುಮಾರ್‌ ಮತ್ತು ದಯಾನಂದ ಪಕ್ಷ ತೊರೆದು ಅನ್ಯ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಸದ್ಯ ಜೆಡಿಎಸ್‌ ಯುವಮುಖಂಡರು ಹಾಗೂ ಪ್ರಭಾವಿಗಳು ಇಲ್ಲದ ಖಾಲಿ ಮನೆಯಾಗಿದೆ. ಜೆಡಿಎಸ್‌ ಪಕ್ಷದಲ್ಲಿ ಚಾಡಿ ಹೇಳುವವರಿಗೆ ಮಾತ್ರ ಕಾಲವಾಗಿದೆ ಎಂದು ದೂರಿದರು.

ತಾಲೂಕಯ ಜೆಡಿಎಸ್‌ ಪಕ್ಷದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಅವರು ತಮ್ಮ ಮಗ ಶ್ರೀನಿ​ ಪುರಸಭಾ ಅಧ್ಯಕ್ಷರಾಗುವ ಸಂದರ್ಭದಲ್ಲಿ ನಾವುಗಳು ಬೆಂಬಲಿಸಿಲ್ಲ ಎಂದು 9ನೇ ವಾರ್ಡ್‌ ಟಿಕೆಟ್‌ ತಪ್ಪಿಸಿದ್ದಾರೆ. ಬೇಲೂರು ಜೆಡಿಎಸ್‌ ಪಕ್ಷದಲ್ಲಿ ಅಪ್ಪ ಮಕ್ಕಳಿಂದ ಪಕ್ಷ ನೆಲಕಚ್ಚುತ್ತಿದೆ. ಈ ಬಗ್ಗೆ ಹತ್ತಾರು ಬಾರಿ ಜೆಡಿಎಸ್‌ ವರಿಷ್ಠರಿಗೆ ದೂರು ನೀಡಿದರೂ ಯಾವ ಪ್ರಯೋಜವಾಗಿಲ್ಲ. ಜೆಡಿಎಸ್‌ ಪಕ್ಷದಿಂದ ಹಾಲಿನ ಡೇರಿ ಜೊತೆಗೆ ಕೆಲಸ ಮತ್ತು ಅಧಿ​ಕಾರದ ಫಲವನ್ನು ತೊ.ಚ.ಕುಟುಂಬ ಪಡೆದಿದೆ ಎಂದು ಆರೋಪಿಸಿದರು.

ಶಾಸಕ ಕೆ.ಎಸ್‌.ಲಿಂಗೇಶ್‌ ಅವರು ಕೂಡ ನಮಗೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡಿದ್ದಾರೆ. ಇನ್ನೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣನವರಿಗೆ ಚಾಡಿ ಮಾತು ನೀಡುವ ಮೂಲಕ ಜೆಡಿಎಸ್‌ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ ಎಂದರು.