Asianet Suvarna News Asianet Suvarna News

ದೇಶದ ಸಹಕಾರ ಕ್ಷೇತ್ರ ವಿಶ್ವದಲ್ಲಿಯೇ ದೊಡ್ಡಣ್ಣ: ಜಿ.ಟಿ. ದೇವೇಗೌಡ

ಏ. 1ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಸಹಕಾರ ಸಮ್ಮೇಳನ ಆಯೋಜನೆ

JDS MLA GT Devegowda Talks Over Cooperation Sector in India grg
Author
Bengaluru, First Published Jul 31, 2022, 1:33 PM IST

ಹುಣಸೂರು(ಜು.31):  ಭಾರತ ದೇಶ ಸಹಕಾರ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಅಂದರೆ 30 ಕೋಟಿಗೂ ಅಧಿಕ ಸದಸ್ಯ ಬಳಗ, 8.5 ಲಕ್ಷ ವಿವಿಧ ರೀತಿಯ ಸಹಕಾರ ಸಂಘಗಳನ್ನು ಹೊಂದಿದೆ. 11 ಲಕ್ಷ ಕೋಟಿ ರು. ಅಧಿಕ ಬಂಡವಾಳವಾಗಿದ್ದು, 6 ಲಕ್ಷ ಕೋಟಿ ರು. ಠೇವಣಿಗಳನ್ನು ಹೊಂದುವುದರ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು. ಪಟ್ಟಣದ ಮುನೇಶ್ವರ ಮೈದಾನದಲ್ಲಿ ಶನಿವಾರ ನಡೆದ ಸಹಕಾರ ಸಮ್ಮಿಲನ ಕಾರ್ಯಕ್ರಮದಲ್ಲಿ 10.7 ಕೋಟಿ ರು. ವೆಚ್ಚದ ವಿವಿಧ ಡೈರಿ ಮತ್ತು ಸಹಕಾರ ಸಂಘದ ಕಟ್ಟಡಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಮಾಡಿದ ನಂತರ ನೂತನ ಬಿಎಂಸಿ ಕೇಂದ್ರಗಳನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

ಕರ್ನಾಟಕದಲ್ಲಿ 46 ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು ನೋಂದಣಿಯಾಗಿದ್ದು, 2.30 ಕೋಟಿ ಸದಸ್ಯ ಬಳಗವನ್ನು ಹೊಂದಿದೆ. ಇವುಗಳಲ್ಲಿ ಸುಮಾರು 40 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 6,344 ಕೋಟಿ ರು.ಗಳ ಷೇರು ಬಂಡವಾಳ, 1 ಲಕ್ಷ 56 ಸಾವಿರ ಕೋಟಿ ರು. ದುಡಿಯುವ ಬಂಡವಾಳ, 1 ಲಕ್ಷ 15 ಸಾವಿರ ಕೋಟಿ ರು. ಗಳ ಠೇವಣಿ ಇದ್ದು, ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ 4 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಮಾಡಲಾಗಿದೆ ಎಂದು ಅವರು ಹೇಳಿದರು.

ಸರ್ಕಾರ ನಡೆಸಲು ಆಗದಿದ್ದರೆ ರಿಸೈನ್‌ ಆ್ಯಂಡ್‌ ಗೆಟ್‌ಔಟ್‌: ಸಿದ್ದರಾಮಯ್ಯ

ಕಳೆದ ವರ್ಷ ಕೇಂದ್ರ ಸರ್ಕಾರ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರದಲ್ಲಿ ಸಹಕಾರ ಸಚಿವಾಲಯವನ್ನು ರಚನೆ ಮಾಡಿ, ಸಹಕಾರಿ ಮುಖಂಡರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರನ್ನು ನೇಮಕ ಮಾಡಿರುತ್ತಾರೆ. ಇದು ಸ್ವಾಗತಾರ್ಹ ವಿಚಾರ. ಏ. 1ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಸಹಕಾರ ಸಮ್ಮೇಳನವನ್ನು ಆಯೋಜನೆ ಮಾಡಲಾಗಿತ್ತು ಎಂದರು.

ಹಾಲು ಉತ್ಪಾದನೆಯಲ್ಲಿ ಮತ್ತು ವಹೀವಾಟಿನಲ್ಲಿ ಗುಜರಾತ್‌ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ವಾರ್ಷಿಕ 20 ಸಾವಿರ ಕೋಟಿ ರು. ಗಳ ವಹೀವಾಟು ಹಾಲು ಉತ್ಪಾದಕ ಕೇಂದ್ರಗಳಲ್ಲಿ ನಡೆದಿದೆ. ಹುಣಸೂರಿನಲ್ಲಿ ಇದೀಗ 200ನೇ ಹಾಲು ಉತ್ಪಾದಕರ ಕೇಂದ್ರ ಸ್ಥಾಪನೆಯಾಗಿದ್ದು, 17,588 ಸದಸ್ಯರು ಪ್ರತಿ ತಿಂಗಳು 44.78ಲಕ್ಷ ರು.ಗಳ (ವಾರ್ಷಿಕ 14 ಕೋಟಿ ರು. ಗಳು) ವಹೀವಾಟು ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಸಹಕಾರಿ ಸದಸ್ಯರು ಇದನ್ನು ಅರ್ಥ ಮಾಡಿಕೊಂಡು ಸಹಕಾರಿ ಸಂಘಗಳ ಅಗತ್ಯತೆಯನ್ನು ಅರಿಯಬೇಕು ಎಂದು ಅವರು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡಗಳನ್ನು ಸಂಸದ ಪ್ರತಾಪ್‌ ಸಿಂಹ ಉದ್ಘಾಟಿಸಿ ಮಾತನಾಡಿ, ಹುಣಸೂರಿನಲ್ಲಿ ನಡೆಯುವ ಹನುಮ ಜಯಂತಿಯ ನಂತರ ಅಷ್ಟೇ ಪ್ರಮಾಣದ ಜನಸಂಖ್ಯೆಯನ್ನು ನಾನಿಲ್ಲಿ ನೋಡುತ್ತಿದ್ದೇನೆ. ಸಹಕಾರಿಗಳ ಈ ಬಾರಿ ಸಂಖ್ಯೆಯ ಆಗಮನಕ್ಕೆ ಸಹಕಾರ ಕ್ಷೇತ್ರದಲ್ಲಿನ ಎರಡು ಶಕ್ತಿಗಳಾದ ಜಿ.ಟಿ. ದೇವೇಗೌಡ ಮತ್ತು ಅವರ ಪುತ್ರ ಜಿ.ಡಿ. ಹರೀಶ್‌ಗೌಡ ಅವರ ಅವಿರತ ಶ್ರಮವೇ ಕಾರಣವಾಗಿದೆ ಎಂದು ಹೇಳಿದರು.
ಸಹಕಾರಿ ಧುರೀಣ ಜಿಟಿಡಿಯವರೊಂದಿಗೆ ನಾನು ಕೆಲಸ ಮಾಡುತ್ತಿದ್ದು, ತಂದೆ-ಮಗನಷ್ಟೆನನ್ನ ಅವರ ಸಂಬಂಧವಿದೆ. ಹಾಲು ಉತ್ಪಾದಕರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 2008ರಲ್ಲಿ 2ರು. ಗಳ ಪೋ›ತ್ಸಾಹಧನ ನೀಡುವ ಮೂಲಕ ರಾಜ್ಯದಲ್ಲಿ ಹಾಲು ಉತ್ಪಾದನೆಗೆ ಇಂಬು ನೀಡಿದರು. ಎಲ್ಲರೂ ಸೇರಿ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡೋಣವೆಂದರು.

ಶಾಸಕ ಎಚ್‌.ಪಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಕಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್‌ ಶಕ್ತಿ ಹೆಚ್ಚಲು ಸಹಕಾರಿಗಳು ಸಹಕಾರಿ ತತ್ವದ ಮೇಲಿಟ್ಟಿರುವ ನಂಬಿಕಯೇ ಮೂಲ ಕಾರಣ. ಅವರ ನಂಬಿಕೆಯನ್ನು ನಾಯಕರು ಸದ್ಬಳಕೆ ಮಾಡಿಕೊಂಡಲ್ಲಿ ಮತ್ತೆ ಅಭಿವೃದ್ಧಿ ಹೊಂದಲು ಸಾಧ್ಯವೆನ್ನುವುದನ್ನು ಜಿ.ಡಿ. ಹರೀಶ್‌ಗೌಡ ತೋರಿಸಿಕೊಟ್ಟಿದ್ದಾರೆ ಎಂದರು. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ. ಪ್ರಸನ್ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಮೈಮುಲ್‌ ನಿರ್ದೇಶಕ ಕೆ.ಎಸ್‌. ಕುಮಾರ್‌, ಟಿಎಪಿಸಿಎಂಎಸ್‌ ಕಟ್ಟಡ ಶಂಕುಸ್ಘಾಪನೆ ನೆರವೇರಿಸಿ ಗಣ್ಯರಿಗೆ ಸ್ವಾಗತ ಸ್ವಾಗತಿಸಿದರು.. ಮೈಮುಲ್‌ ನಿರ್ದೇಶಕಿ ಶಿವಗಾಮಿ, ಎಂಡಿಸಿಸಿ ಬ್ಯಾಂಕ್‌ ಮತ್ತು ಮೈಮುಲ್‌ ನಿರ್ದೇಶಕರು, ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಮತ್ತು ಸಹಕಾರಿಗಳು ಭಾಗವಹಿಸಿದ್ದರು.

ಜನವೋ ಜನ...

ಸಹಕಾರಿ ಸಮ್ಮಿಲನ ಕಾರ್ಯಕ್ರಮಕ್ಕೆ ತಾಲೂಕಿನ 200 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸಾವಿರಾರು ಸದಸ್ಯರು ಬಂದಿದ್ದರು. ಅದರಲ್ಲೂ ಸಾವಿರಕ್ಕೂ ಹೆಚ್ಚು ಮಹಿಳಾ ಸದಸ್ಯರು ಬಣ್ಣಬಣ್ಣದ ರೇಷ್ಮೆ ಸೀರೆಯುಟ್ಟು ಕಲಶಹೊತ್ತು ಮೆರವಣಿಗೆಯಲ್ಲಿ ಸಾಗಿ ಬಂದು ಕಳೆಹೆಚ್ಚಿಸಿದರು.

ಮೇಳೈಸಿದ ಕಲಾತಂಡಗಳು: ನಗರದ ಆಂಜನೇಯಸ್ವಾಮಿ ದೇವಾಲಯದಿಂದ ಬೆಳಗ್ಗೆ 11ಕ್ಕೆ ಮೆರವಣಿಗೆ ಆರಂಭಗೊಂಡಿತು. ಜಿಟಿಡಿ, ಜಿ.ಡಿ. ಹರೀಶ್‌ಗೌಡ, ಸಂಸದ ಪ್ರತಾಪ್‌ ಸಿಂಹ, ಕೆ.ಎಸ್‌. ಕುಮಾರ ಅವರನ್ನು ಮೆರವಣಿಗೆ ಮೂಲಕ ಮೈದಾನಕ್ಕೆ ಕರೆ ತರಲಾಯಿತು.

ಮೆರವಣಿಗೆಯಲ್ಲಿ ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಯಕ್ಷಗಾನ ನೃತ್ಯ, ಚಂಡೆವಾದನ, ಕೀಲುಕುದುರೆಗಳ ಅಬ್ಬರ ಎಲ್ಲವೂ ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. ಹುಣಸೂರಿಗೆ ಅನುದಾನದ ಸುರಿಮಳೆ: ಜಿ.ಡಿ. ಹರೀಶ್‌ಗೌಡ ಮಾಹಿತಿ ನೀಡಿ, ಹುಣಸೂರು ತಾಲೂಕಿಗೆ ದಾಖಲೆಯ 145 ಕೋಟಿ ರು.ಗಳ ಸಾಲಸೌಲಭ್ಯ ನೀಡಲಾಗಿದೆ. 13ಸಾವಿರ ಕುಟುಂಬ ಸಾಲ ಸೌಲಭ್ಯ ಪಡೆದಿದೆ. ಇದೀಗ 12 ಕೋಟಿ ರು. ಗಳ ವಿವಿಧಯೋಜನೆ ಜಾರಿ ಗೊಂಡಿದೆ ಎಂದರು.

ಇದೇನಾ ನೀವು ಹಿಂದೂ ಧರ್ಮ ಕಾಪಾಡೋದು?: ಬಿಜೆಪಿ ಸರ್ಕಾರದ ವಿರುದ್ಧ ಎಚ್‌ಡಿಕೆ ಗರಂ

ಸಹಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಪ್ರಸ್ತಾಪ: ಸಂಪೂರ್ಣವಾಗಿ ಸಹಕಾರಿ ಕಾರ್ಯಕ್ರಮವಾಗಿದ್ದರೂ ರಾಜಕಾರಣಿಗಳು ತಮ್ಮ ರಾಜಕೀಯ ಮಾತುಗಳನ್ನು ಮಾತ್ರ ಬಿಡಲೇ ಇಲ್ಲ. ಸಂಸದರು ರಾಜಕೀಯ ಮಾತಿಗೆ ನಾಂದಿ ಹಾಡಿದರು. ಜಿಟಿಡಿಯನ್ನು ಹಾಡಿ ಹೊಗಳಿದರು. ರಾಜಕಾರಣಕ್ಕೆ ಯುವಕರು ಬರಲು ಅವಕಾಶ ನೀಡಬೇಕೆಂದು ತಿಳಿಸಿ ಅನುಭವಿಗಳು ಹೊಸಚಿಗುರಿಗೆ ಅವಕಾಶ ನೀಡಬೇಕಿದೆ ಎಂದರು.

ಶಾಸಕ ಎಚ್‌.ಪಿ. ಮಂಜುನಾಥ್‌ ಭಾಷಣದಲ್ಲಿ ನಾನು ನಾಲ್ಕು ಚುನಾವಣೆಗೆ ನಿಂತಾಗಲೂ ಒಂದಲ್ಲಾ ಒಂದು ರೀತಿಯಲ್ಲಿ ನನಗೆ ಜಿಟಿಡಿ ಬೆಂಬಲ ನೀಡಿದ್ದಾರೆ. ಆಶೀರ್ವದಿಸಿದ್ದಾರೆ. ಹಾಗಾಗಿಯೇ ನಾನು ಗೆದ್ದಿದ್ದೇನೆ. ಈಬಾರಿಯೂ ನನಗೆ ಆಶೀರ್ವಾದ ಮಾಡಲಿ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು. ಕೆಎಂಎಫ್‌ ನಿರ್ದೇಶಕ ಎಸ್‌. ಕುಮಾರ್‌ ಮತ್ತು ಎಂಸಿಡಿಸಿಸಿ ಬ್ಯಾಂಕ್‌ ಮತ್ತು ಮೈಮುರ್‌ ನಿರ್ದೆಶಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
 

Follow Us:
Download App:
  • android
  • ios