Asianet Suvarna News Asianet Suvarna News

ಇದೇನಾ ನೀವು ಹಿಂದೂ ಧರ್ಮ ಕಾಪಾಡೋದು?: ಬಿಜೆಪಿ ಸರ್ಕಾರದ ವಿರುದ್ಧ ಎಚ್‌ಡಿಕೆ ಗರಂ

ರಾಜ್ಯದಿಂದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ: ಕುಮಾರಸ್ವಾಮಿ 

Former CM HD Kumaraswamy Slams to BJP Government grg
Author
Bengaluru, First Published Jul 29, 2022, 12:34 PM IST

ಮೈಸೂರು(ಜು.29):  ಪ್ರವೀಣ್‌ ಹತ್ಯೆ ವಿಚಾರವು ಬಿಜೆಪಿಗೆ ಮತಫಸಲಿನ ರಾಜಕಾರಣ. ಇಂತಹ ಘಟನೆ ಅವರಿಗೆ ಒಳ್ಳೆ ರಾಜಕೀಯದ ಬೇಳೆ ಬೇಯಿಸಿಕೊಂಡಂತೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜನರಲ್ಲಿ ವಿಶ್ವಾಸದ ಕೊರತೆ ಮೂಡಿಸುತ್ತಿದ್ದಾರೆ. ಎಲ್ಲಾ ಸಮಾಜದ ಧಾರ್ಮಿಕ ಸಭೆಗೆ ಸಲಹೆ ನೀಡಿದ್ದೆ ಆದರೆ ಸರ್ಕಾರ ಮೌನಕ್ಕೆ ಶರಣಾಗಿತ್ತು. ಶಾಂತಿ ನೆಲೆಸಲು ಗಮನ ಕೊಡಿ ಅಂತಾ ಹಿಂದೆಯೇ ಹೇಳಿದ್ದೆ. ನನ್ನ ಮಾತನ್ನು ಇವರು ಕೇಳಲಿಲ್ಲ. ವಾರದಲ್ಲಿ ಒಂದೇ ಭಾಗದಲ್ಲಿ ಕೋಮು ಸಂಘರ್ಷದ ಎರಡು ಹತ್ಯೆಯಾಗಿದೆ. ಆ ಕುಟುಂಬದ ಪರಿಸ್ಥಿತಿಯನ್ನು ನೋಡಬೇಕು. ವಯಸ್ಸಾದ ತಂದೆ, ತಾಯಿ ಆರೋಗ್ಯ ಸರಿ ಇರುವುದಿಲ್ಲ. ಚಿಕ್ಕ ವಯಸ್ಸಿನ ಪತ್ನಿ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ, ಭಜರಂಗದ ದಳ ಮಾತ್ರವಲ್ಲ, ಎಲ್ಲರೂ ಕ್ಷೇಮವಾಗಿ, ನೆಮ್ಮದಿಯಾಗಿರಬೇಕು ಎಂದರು.

ಘಟನೆಯಿಂದ ಮನಸು ಕಲಕಿದೆ. ಆ ರೋಧನೆಯನ್ನು ನಿಲ್ಲಿಸಿ ಎಲ್ಲಿಯವರೆಗೂ ಇಂತಹ ವಾತಾವರಣ ನಿರ್ಮಿಸಬೇಕು? ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟುಕೊಲೆಯಾಗಿದೆ? ಶಿವಮೊಗ್ಗ ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಎಲ್ಲಾ ಸವಲತ್ತು ನೀಡಲಾಗಿದೆ, ಇದೇ ನಿಮ್ಮ ಆಡಳಿತನಾ? ಏನು ಒಳ್ಳೆ ಆಡಳಿತ, ಏನು ಸಾಧನೆ? ಯಾವ ಪುರುಷಾರ್ಥಕ್ಕೆ ಸಮಾವೇಶಕ್ಕೆ ಸಿದ್ಧತೆ ಮಾಡಿದ್ದೀರಿ? ಇದು ಸಾವಿನ ಸಾಧನಾ ಸಮಾವೇಶನಾ? ಎಂದು ಅವರು ಪ್ರಶ್ನಿಸಿದರು.

ಪ್ರವೀಣ್‌ ಹಂತಕರನ್ನು ಎನ್‌ಕೌಂಟರ್‌ ಮಾಡಿ: ಅಭಯ ಪಾಟೀಲ

ಎಷ್ಟು ಜನ ಅಮಾಯಕರು ಸಾಯಬೇಕು? ಕರಾವಳಿ ಆಯ್ತು, ಶಿವಮೊಗ್ಗ ಆಯ್ತು, ಮುಂದೆ ಎಲ್ಲಿ? ಇದೇನಾ ನೀವು ಹಿಂದೂ ಧರ್ಮ ಕಾಪಾಡುವುದು? ಹಿಂದುತ್ವದ ಕಾರ್ಡ್‌ನಲ್ಲಿ ಮತ ಪಡೆಯಬಹುದೆಂಬ ಲೆಕ್ಕಾಚಾರ ಸಾವುಗಳಾದರೆ ಅಧಿಕಾರ ಹಿಡಿಯಬಹುದು ಅನ್ನೋದು ಅವರ ಲೆಕ್ಕಾಚಾರ. ಇವರದ್ದು ಕೃತಕ ಸಾಂತ್ವನ ಆಕ್ರೋಶದ ಮಾತುಗಳಾಡಿದರೆ ಏನು ಬದಲಾವಣೆ ಆಗುವುದಿಲ್ಲ ಎಂದು ಅವರು ಹೇಳಿದರು.

ನಾನು ಸಿಎಂ ಆಗಿದ್ದೆ, ನನ್ನ ಕಾಲದಲ್ಲಿ ಏಕೆ ಈ ರೀತಿ ಆಗಲಿಲ್ಲ? ಸಂಸದ ತೇಜಸ್ವಿ ಸೂರ್ಯ ಅಂತವರನ್ನು ಗೆಲ್ಲಿಸಿದ ಮೇಲೆ ಈ ರೀತಿಯ ಮಾತು ಕೇಳಲೇಬೇಕು. ನಿಮ್ಮನ್ನು ಯಾರು ಗನ್‌ ಮ್ಯಾನ್‌ ಕೊಡಿ ಅಂತಾ ಕೇಳಲ್ಲ. ಶಾಂತಿಯುತವಾದ ನೆಮ್ಮದಿಯ ಆಡಳಿತ ಕೊಡಿ ಅಂತಾ ಕೇಳುತ್ತಾರೆ ಅಷ್ಟೇ. ಚುನಾವಣೆ ವೇಳೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಇದಕ್ಕೆ ಉದಾಹರಣೆ. ಹಿಂದೆ ಚುನಾವಣೆ ಬಂದಾಗ ದೇಶದ ಎಲ್ಲಾ ಭಾಗದಲ್ಲೂ ಈ ರೀತಿ ಆಗಿದೆ. 2016ರ ಯುಪಿ ಚುನಾವಣೆ ವೇಳೆ ಮುಜಾಫರ್‌ ನಗರದಲ್ಲಿ ಕೋಮು ಗಲಭೆ ಆಯ್ತು. ಇಂದಿಗೂ ಅದರ ಹಿಂದೆ ಇದ್ದವರು ಯಾರು ? ಏಕೆ ಆಯ್ತು? ಗೊತ್ತಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬಿಜೆಪಿಯ ಬಣ್ಣ ಬಣ್ಣದ ಜಾಹಿರಾತು ನೋಡಿ ಮುಂದುವರಿದರೆ ಮತ್ತಷ್ಟು ಕೆಟ್ಟಕಾಲ ಬರಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆಯೇ ಇಲ್ಲ. ಇವರಿಗೆ ಧರ್ಮದ ಹೆಸರಿನ ಸಾವುಗಳಾದರೆ ಹಿಂದೂ ಧರ್ಮದ ಬದ್ಧತೆ ಇರುವ ಕಳಕಳಿಯಿರುವ ಕುಟುಂಬದಲ್ಲಿ ಹತ್ಯೆಯಾದರೆ ಫಸಲು. ಇವರಿಗೆ ಬದುಕು ಕಟ್ಟುವುದು ಬೇಡ ಇಂತಹ ಘಟನೆಯ ಮೇಲೆ ಸೌಧ ಕಟ್ಟಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಿಂದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು. ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂದರು.
 

Follow Us:
Download App:
  • android
  • ios