ಮಳವಳ್ಳಿ (ಸೆ.06): ಪೂರಿಗಾಲಿ ಏತ ನೀರಾವರಿ ಯೋಜನೆಯಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಎಷ್ಟುಕಿಕ್‌ಬ್ಯಾಕ್‌ ಪಡೆದಿದ್ದಾರೆ ಎನ್ನುವುದು ಗೊತ್ತಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ಗಂಭೀರ ಆರೋಪ ಮಾಡಿದರು.

ಪಟ್ಟಣದ ದೊಡ್ಡಕೆರೆ ಮತ್ತು ಮಾರೇಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪೂರಿಗಾಲಿ ಏತ ನೀರಾವರಿ ಯೋಜನೆಯ 580 ಕೋಟಿ ಹಣದಲ್ಲಿ ಎಷ್ಟುಕಿಕ್‌ಬ್ಯಾಕ್‌ ಪಡೆದಿದ್ದೀರಿ, ಕಮಿಷನ್‌ ಎಷ್ಟುಪಡೆದಿದ್ದೀರಾ ಅಂತ ಗೊತ್ತಿದೆ. ದಿವಾಳಿ ಹೊಂದಿರುವ ಜೈನ್‌ ಇರಿಗೇನ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಿದ್ದೀರಿ. ಮೂರು ವರ್ಷವಾದರೂ ಆ ಸಂಸ್ಥೆಯವರು ಏಕೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಎಂಬುದನ್ನು ನೀವೇ ಕೇಳಿ ಎಂದು ಪ್ರಶ್ನಿಸಿದರು.

ಪೂರಿಗಾಲಿ ನೀರಾವರಿ ಯೋಜನೆ ಬಗ್ಗೆ ಎಬಿಸಿಡಿ ಗೊತ್ತಿಲ್ಲದವರು ಜನರಿಗೆ ಸುಳ್ಳು ಹೇಳಿ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಲಘುವಾಗಿ ಮಾತನಾಡಿದ್ದಾರೆ. ಹೌದು., ನನಗೆ ಎಬಿಸಿಡಿ ಗೊತ್ತಿಲ್ಲ. ಏಕೆಂದರೆ, ನಾನು ಬಿಎ ಮಾಡಿ ಪಿಎಚ್‌.ಡಿ ಮಾಡಿರುವುದು. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ಬಂದವನು, ನಿಮ್ಮ ಹಾಗೆ ನಾನು ಸಿವಿಲ್‌ ಎಂಜಿನಿಯರ್‌ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳು ಯಾರ ಅವಧಿಯಲ್ಲಾದರೇನು, ಎಲ್ಲ ಜನರ ತೆರಿಗೆ ಹಣವನ್ನು ಸರ್ಕಾರ ಅನುದಾನ ರೂಪದಲ್ಲಿ ನೀಡುವುದಲ್ಲವೇ ಎಂದು ಪ್ರಶ್ನಿಸಿದರು.

ಡ್ರಗ್ಸ್ ಮಾಫಿಯಾ ಗದ್ದಲದ ಮಧ್ಯೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಪತ್ರ .

ದೊಡ್ಡಕೆರೆ ಹೂಳು ತೆಗೆಸುವುದಾಗಿ 5 ಕೋಟಿ ಮಂಜೂರು ಮಾಡಿಸಿಕೊಂಡು ಬಂದರು. ಎಷ್ಟುಪ್ರಮಾಣದ ಹೂಳು ತೆಗೆದಿದ್ದಾರೆ. ಕನಿಷ್ಠ ಮೂರು ಅಡಿಗಳಷ್ಟುಹೆಚ್ಚುವರಿ ನೀರು ಸಂಗ್ರಹವಾಗುತ್ತಿಲ್ಲ. ನಾಲ್ಕೈದು ಗಿಡ ನೆಟ್ಟು, ವಾಕಿಂಗ್‌ ಪಾಯಿಂಟ್‌ ಮಾಡಿ .5 ಕೋಟಿ ಹಣವನ್ನು ಗುತ್ತಿಗೆದಾರರ ಜೊತೆಗೂಡಿ ಬಿಡುಗಡೆ ಮಾಡಿಸಿಕೊಂಡರು ಎಂದು ಆರೋಪಿಸಿದರು.

ಭೀಮಾ ಜಲಾಶಯ ಯೋಜನೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ತಡೆದಿದ್ದರೂ ಎನ್ನುವುದು ಸುಳ್ಳು. ಯೋಜನೆ ಪೂರ್ಣಗೊಳ್ಳಲು ಕೆಲ ತಾಂತ್ರಿಕ ಆಡಚಣೆ ಉಂಟಾಗಿತ್ತು. ಸಮಸ್ಯೆ ಬಗೆಹರಿಸಿ ಅದಷ್ಟುಬೇಗ ಆ ಭಾಗದ ಜನರಿಗೆ ನೀರು ಒದಗಿಸಲಾಗುವುದು ಎಂದರು.

ನಿಮಗಿಂತ ಮೊದಲೇ ಶಾಸಕನಾಗಿ ಆಯ್ಕೆಯಾದವನು ನಾನು. ಎರಡು ಬಾರಿ ಸೋತಿದ್ದೀರಿ ಎಂಬ ಕಾರಣಕ್ಕೆ ಕ್ಷೇತ್ರದ ಜನರು ಅನುಕಂಪದಿಂದ ಅಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಮ್ಮನ್ನು ಗೆಲ್ಲಿಸಿದರು. ಆ ಸಂದರ್ಭವನ್ನು ನೀವು ಅರ್ಥ ಮಾಡಿಕೊಳ್ಳಿ. ಇದೀಗ ಜನ ನಿಮ್ಮನ್ನು ಸೋಲಿಸಿದ್ದಾರೆ. ಐದು ವರ್ಷ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಿ. ಬಾಯಿಗೆ ಬಂದಂತೆ ಮಾತನಾಡಬೇಡಿ. ಇನ್ನೂ ಮುಂದೆಯಾದರೂ ಗೌರವದಿಂದ ಮಾತನಾಡುವುದನ್ನು ಕಲಿಯಿರಿ ಎಂದು ವಾಗ್ದಾಳಿ ನಡೆಸಿದರು.

ಕಂದಾಯ ಮಾಜಿ ಸಚಿವರಿಗೆ ತರಾಟೆ:

ಇದೇ ವೇಳೆ ಕಂದಾಯ ಮಾಜಿ ಸಚಿವ ಬಿ.ಸೋಮಶೇಖರ್‌ ವಿರುದ್ಧ ಶಾಸಕರು ಬೇಕಿದ್ದರೆ ನಾಳೆಯಿಂದಲೇ ನಿಮ್ಮ ಒಂದೊಂದೇ ಬಂಡವಾಳ ಬಿಚ್ಚಿಡಲೇ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಈಚೆಗೆ ಮಾಜಿ ಸಚಿವ ಬಿ.ಸೋಮಶೇಖರ್‌ ಅವರು ನನ್ನ ಅವಧಿಯಲ್ಲಿ ಮಂಜೂರು ಆಗಿರುವ ಹಲವಾರು ನೀರಾವರಿ ಯೋಜನೆಗಳಲ್ಲಿ ಹೆಸರು ಪಡೆಯಲು ಹಾಲಿ ಮತ್ತು ಮಾಜಿ ಶಾಸಕರು ಪೈಪೋಟಿ ನಡೆಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಜಾರಿಗೆ ತಂದಂತಹ ಹಲವಾರು ಯೋಜನೆಗಳಲ್ಲಿ ಬಹುಪಾಲು ಯೋಜನೆಗಳು ನೆನಗುದಿಗೆ ಬೀಳಲು ಶಾಸಕ ಡಾ.ಕೆ.ಅನ್ನದಾನಿ ಅವರೇ ಕಾರಣ ಎಂದು ದೂರಿದ್ದರು.

 ರಾಗಿಣಿ ಅರೆಸ್ಟ್: ನಮ್ಮ ಪಕ್ಷಕ್ಕೂ, ಅವರಿಗೂ ಯಾವುದೇ ಸಂಬಂಧವಿಲ್ಲ ಎಂದ ಸಚಿವ .

ಈ ಬಗ್ಗೆ ಕೆಂಡಾಮಂಡಲರಾದ ಶಾಸಕರು, ನೀವು 1983ರಿಂದ ನಾಲ್ಕು ಬಾರಿ ಶಾಸಕರು ಮತ್ತು ಎರಡು ಬಾರಿ ಸಚಿವರಾಗಿದ್ದವರು. ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎನ್ನುವುದನ್ನು ಸಾರ್ವಜನಿಕವಾಗಿ ಚರ್ಚೆ ಮಾಡೋಣ ಬನ್ನಿ. ಸುಮ್ಮನೆ ಪ್ರಚಾರಕ್ಕಾಗಿ ನನ್ನ ಅಭಿವೃದ್ಧಿ ಕಾರ್ಯಗಳನ್ನು ಬಗ್ಗೆ ಟೀಕೆ ಮಾಡಬೇಡಿ. ನಿಮ್ಮ ಬಂಡವಾಳ ಬಿಚ್ಚಿಡುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಬ್ಬರು ಮಾಜಿ ಸಚಿವರ ಅವಧಿಯ ಒಂದೇ ಒಂದು ಯೋಜನೆಯನ್ನೂ ನನ್ನ ಅವಧಿಯಲ್ಲಿ ತಡೆಹಿಡಿದಿಲ್ಲ. ಈ ಬಗ್ಗೆ ನಾಳೆಯೇ ಸಾರ್ವಜನಿಕವಾಗಿ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮತ್ತು ಬಿ.ಸೋಮಶೇಖರ್‌ ಅವರಿಗೆ ಶಾಸಕ ಡಾ.ಕೆ.ಅನ್ನದಾನಿ ಬಹಿರಂಗ ಸವಾಲು ಹಾಕಿದರು.