Janata Jaladhare: ಮೇ 13ರಂದು ನೆಲಮಂಗಲ ಬಳಿ ಜೆಡಿಎಸ್‌ ಬೃಹತ್ ಜಲಧಾರೆ ಸಮಾವೇಶ

ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ಯಸ್ವಿಯಾಗಿ ನಡೆದಿದ್ದು, ಇದೇ ಮೇ ತಿಂಗಳ 13ರಂದು ನೆಲಮಂಗಲ ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ.

jds mega janata jaladhare conclave to be held near nelamangala on may 13th gvd

ವರದಿ: ಸುರೇಶ್.ಎ.ಎಲ್. ಏಷ್ಯಾ ನೆಟ್ ಸುವರ್ಣ ನ್ಯೂಸ್.

ಬೆಂಗಳೂರು (ಮೇ.05): ಕಳೆದ ತಿಂಗಳು 16ರಂದು ಹನುಮ ಜಯಂತಿ ದಿನ ಆರಂಭವಾದ ಜನತಾ ಜಲಧಾರೆ (Janata Jaladhare) ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಇದೇ ಮೇ ತಿಂಗಳ 13ರಂದು ನೆಲಮಂಗಲ (Nelamangala) ಟೋಲ್ ಪ್ಲಾಜಾ ಬಳಿ ಬೃಹತ್ ಜನತಾ ಜಲಧಾರೆ ಸಮಾವೇಶ ನಡೆಯಲಿದೆ. ಜಲಧಾರೆ ಕಾರ್ಯಕ್ರಮವು ಈ ಸಮಾವೇಶದ ಮೂಲಕ ಸಮಾಪ್ತಿಯಾಗಲಿದ್ದು, ಆ ಬೃಹತ್ ಸಮಾವೇಶದ ಸಿದ್ಧತೆ ಮತ್ತು ರೂಪುರೇಶೆಗಳ ಬಗ್ಗೆ ಇಂದು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆ (ಕೋರ್ ಕಮಿಟಿ) ಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು (HD Devegowda), ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಸಮಕ್ಷಮದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಸಭೆಯ ನಂತರ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅವರು ಹೇಳಿದ್ದಿಷ್ಟು, ರಾಜ್ಯದ 184 ವಿಧಾನಸಭೆ  ಕ್ಷೇತ್ರಗಳಲ್ಲಿ ಜಲಧಾರೆಯ 15  ಗಂಗಾ ರಥಗಳು ಯಶಸ್ವಿಯಾಗಿ ಸಂಚರಿಸುತ್ತಿವೆ. ಇವುಗಳ ಮೂಲಕ ರಾಜ್ಯದ ಎಲ್ಲಾ ಜೀವ ನದಿಗಳಿಂದ ಸಂಗ್ರಹ ಮಾಡಲಾಗಿರುವ ಪುಣ್ಯಜಲವನ್ನು ಒಂದು ಬೃಹತ್ ಕಲಶಕ್ಕೆ ತುಂಬಿಸಿ ಸಮಾವೇಶದಲ್ಲಿ ಪೂಜೆ ನೆರವೇರಿಸಲಾಗುವುದು.

ಗುತ್ತಿಗೆದಾರರಿಂದ ಸರ್ಕಾರ ಶೇ.60ರಷ್ಟು ಕಮಿಷನ್‌ ವಸೂಲಿ: ಎಚ್‌.ಡಿ ಕುಮಾರಸ್ವಾಮಿ

ಈ ಸಮಾವೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನ ಸೇರಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕರೆ ಐದು ವರ್ಷಗಳಲ್ಲಿ ಜನತಾ ಸರಕಾರ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಆ ಸಮಾವೇಶದಲ್ಲಿ ಸಂಕಲ್ಪ ಮಾಡಲಾಗುವುದು. ಸಂಜೆ 4 ಗಂಟೆಗೆ ಆರಂಭ ಆಗಲಿರುವ ಸಮಾವೇಶದಲ್ಲಿ ಮಾಜಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಹಿರಿಯ ಮುಖಂಡರು, ಸಾಹಿತಿಗಳು, ಬುದ್ಧಿಜೀವಿಗಳು, ಕನ್ನಡಪರ, ರೈತಪರ ಹೋರಾಟಗಾರರು ಭಾಗಿಯಾಗುವರು.

ಗಂಗಾ ಆರತಿ: ಸಮಾವೇಶದ ಕೊನೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ಮೇಲೆ ಅತ್ಯಂತ ಸಂಪ್ರದಾಯ ಬದ್ಧವಾಗಿ ಗಂಗಾ ಆರತಿಯನ್ನು ನೆರವೇರಿಸಲಾಗುವುದು. ಈ ಕಾರ್ಯಕ್ರಮ ನಡೆಸಿಕೊಡಲು ವಾರಾಣಸಿಯಿಂದ ಪಂಡಿತರನ್ನು ಕರೆಸಲಾಗುವುದು. ಸಂಜೆಯ ಹೊತ್ತಿನಲ್ಲಿ ಆರತಿ ಕಾರ್ಯಕ್ರಮ ವಿಶೇಷವಾಗಿ ಮೂಡಿಬರಲಿದೆ.

ಐದು ಉಪ ಸಮಿತಿ ರಚನೆ: ಜಲಧಾರೆ ಸಮಾವೇಶವನ್ನು ಯಶಸ್ವಿಯಾಗಿ ಮಾಡುವ ಉದ್ದೇಶದಿಂದ ಐದು ಉಪ ಸಮಿತಿಗಳನ್ನು ರಚನೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ವಾಹನ ನಿಲುಗಡೆ, ಊಟ, ಮಾಧ್ಯಮ, ಸಭಾಂಗಣ ಹಾಗೂ ಗಂಗಾ ಆರತಿ ವ್ಯವಸ್ಥೆಗಾಗಿ ಈ ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳ ಮುಖ್ಯಸ್ಥರು ಯಾರು ಎಂಬುದನ್ನು ಒಂದೆರಡು ದಿನದಲ್ಲಿ ತಿಳಿಸಲಾಗುವುದು.

ಆಟದ ವಸ್ತವಾದ ಚನ್ನಪಟ್ಟಣ ತಹಶೀಲ್ದಾರ್ ಹುದ್ದೆ, 24 ಗಂಟೆಯಲ್ಲಿ ಇಬ್ಬರು ತಹಶೀಲ್ದಾರ್ ವರ್ಗಾವಣೆ

ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ: ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿ ಚಂದ್ರಶೇಖರ್ ಲೋಣಿ ಅವರನ್ನು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆಗೆ, ಮಾಜಿ ಸಚಿವ ಎನ್. ಎಂ.ನಬಿ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಗೋವಿಂದರಾಜು, ಶಾಸಕರಾದ ಕೆ.ಎಂ. ಕೃಷ್ಣಾರೆಡ್ಡಿ, ವೆಂಕಟರಾವ್ ನಾಡಗೌಡ, ಪುಟ್ಟರಾಜು, ಅನ್ನದಾನಿ, ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್, ತಿಮ್ಮರಾಯಪ್ಪ, ವೆಂಕಟ ಶಿವಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹಾಗೂ ಜಪ್ರುಲ್ಲಾ ಖಾನ್, ಸುಧಾಕರ ಶೆಟ್ಟಿ, ಸಮೃದ್ಧಿ ಮಂಜುನಾಥ್, ನಾಸಿರ್ ಭಗವಾನ್, ವಿಲ್ಸನ್ ರೆಡ್ಡಿ, ಹನುಮಂತಪ್ಪ ಮಾವಿನಮರದ ಮುಂತಾದವರು ಹಾಜರಿದ್ದರು.

Latest Videos
Follow Us:
Download App:
  • android
  • ios