ರಾಜ್ಯ ಸರ್ಕಾರ ಗುತ್ತಿಗೆದಾರರಿಂದ ಶೇ.60 ರಷ್ಟುಕಮಿಷನ್‌ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದರು. ಪಟ್ಟಣದ ಜಿ.ಕೆ.ಬಿ.ಎಂ.ಎಸ್‌ ಕ್ರೀಡಾಂಗಣದಲ್ಲಿ ಜೆಡಿಎಸ್‌ ಪಕ್ಷದ ಜನತಾ ಜಲಧಾರೆ ರಥಯಾತ್ರೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಣಿಗಲ್‌ (ಮೇ.01): ರಾಜ್ಯ ಸರ್ಕಾರ (Karnataka BJP Government) ಗುತ್ತಿಗೆದಾರರಿಂದ ಶೇ.60 ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಮಾಜಿ ಮುಖಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದರು. ಪಟ್ಟಣದ ಜಿ.ಕೆ.ಬಿ.ಎಂ.ಎಸ್‌ ಕ್ರೀಡಾಂಗಣದಲ್ಲಿ ಜೆಡಿಎಸ್‌ ಪಕ್ಷದ ಜನತಾ ಜಲಧಾರೆ (Janata Jaladhare) ರಥಯಾತ್ರೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಿನ ರೈತರ ನೀರಾವರಿ ಯೋಜನೆಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳು ವಿಫಲಗೊಂಡಿದೆ. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ 90 ವರ್ಷಗಳ ವಯಸ್ಸಿನಲ್ಲಿಯೂ ಹೋರಾಟ ಮಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಜೆಡಿಎಸ್‌ ಪಕ್ಷಕ್ಕೆ ಜನರು ಐದು ವರ್ಷದ ಪೂರ್ಣ ಆಡಳಿತ ಅಧಿಕಾರ ನೀಡಿದರೆ ಮೇಕೆದಾಟು ಸೇರಿದಂತೆ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು.ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ 25000 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದರು.

ನಮ್ಮ ಜಾತ್ಯತೀತ ತತ್ವ ಯಾರಿಗೂ ಮಾರಾಟ ಮಾಡಿಲ್ಲ: ಸಿದ್ದು ವಿರುದ್ಧ ಎಚ್‌ಡಿಕೆ ಗರಂ

2023ರ ಚುನಾವಣೆಯಲ್ಲಿ ಕುಣಿಗಲ್‌ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮಂತ್ರಿ ಡಿ.ನಾಗರಾಜಯ್ಯ ಸ್ಪರ್ಧಿಸುತ್ತಾರೆ. ಅವರ ಗೆಲುವಿಗೆ ನೀವೆಲ್ಲರೂ ಈಗಿನಿಂದಲೇ ಒಗ್ಗಟ್ಟಾಗಿ ಶ್ರಮಿಸಿದರೆ ಅವರ ಗೆಲುವು ನಿಶ್ಚಿತ. ಅವರನ್ನು ಇನ್ನೊಮ್ಮೆ ಸಚಿವರಾಗಿ ನೀಡುವ ಭಾಗ್ಯ ನಿಮ್ಮದಾಗಲಿದೆ. ನಾಗರಾಜಯ್ಯರ ಪುತ್ರರಾದ ರವಿ ಬಾಬು ಹಾಗೂ ಜಗದೀಶ್‌ ಲವಕುಶರಂತೆ ಕ್ಷೇತ್ರದ ಜನರ ಒಡನಾಡಿಯಾಗಿ ಕೆಲಸ ಮಾಡಬೇಕೆಂದರು. ರಾಜ್ಯ ಯುವ ಜೆಡಿಎಸ್‌ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಮಾಜಿ ಸಚಿವ ಡಿ. ನಾಗರಾಜಯ್ಯ ಮಾತನಾಡಿ, ಹುಲಿಯೂರುದುರ್ಗ ಹೋಬಳಿ, ಹುತ್ತರಿದುರ್ಗ ಹೋಬಳಿ, ಕಸಬಾ ಹೋಬಳಿಯ ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಲ್ಪಿಸಲು ಹೇಮಾವತಿ ಕೆನಾಲ್‌ ಮೂಲಕ ನೀರನ್ನು ತರಿಸಲಾಗುವುದು. ತಾಲೂಕಿನಲ್ಲಿ 208 ಕೆರೆಗಳಿದ್ದು ನೀರಾವರಿ ಪ್ರದೇಶವಾಗಿ ಮಾರ್ಪಡಿಸಲು ನೀರಾವರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅನ್ನದಾತನ ಬದುಕು ಹಸನು ಮಾಡಲು ಕೋರಿದರು. ಮಹಿಳೆಯರಿಂದ ಪೂರ್ಣಕುಂಭ, ಕಳಸ, ತಮಟೆ ವಾದ್ಯಗಳೊಂದಿಗೆ ಭವ್ಯವಾಗಿ ತೆರೆದ ವಾಹನದಲ್ಲಿ ಪ್ರವಾಸಿ ಮಂದಿರದಿಂದ ನಿಖಿಲ್‌ ಕುಮಾರಸ್ವಾಮಿ, ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಸಮಾವೇಶಕ್ಕೆ ಕಾರ್ಯಕರ್ತರು ಕರೆತಂದರು.

ಮಾಜಿ ಶಾಸಕರಾದ ಎಚ್‌.ಡಿ. ಕೃಷ್ಣಪ್ಪ, ಸುಧಾಕರ್‌ ಲಾಲ್‌, ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆಂಜನಪ್ಪ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಜಗದೀಶ್‌ ಬಿ.ನಾಗರಾಜಯ್ಯ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರವಿ ನಾಗರಾಜಯ್ಯ, ಮುಖಂಡ ಬಾಂಬೆ ಶಿವಣ್ಣ, ವರದರಾಜು, ಜಿಯಾವುಲ್ಲಾ, ಮಾಜಿ ಪುರಸಭೆ ಅಧ್ಯಕ್ಷ ಕೆ.ಎಲ್‌.ಹರೀಶ್‌, ರಂಗಸ್ವಾಮಿ, ಹರೀಶ್‌ ನಾಯಕ್‌, ವಕ್ತಾರ ತರೀಕರೆ ಪ್ರಕಾಶ್‌, ಯಡಿಯೂರು ದೀಪು ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ..!

ಹಿರಿಯ ನಾಗರಿಕರಿಗೆ 5000 ರು. ಪ್ರೋತ್ಸಾಹ ಧನ: ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಅಭ್ಯರ್ಥಿಗಳನ್ನು ಬೀದಿಪಾಲು ಮಾಡಿದ್ದಾರೆ. ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಮೂಲಕ ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತವಾದ ಶಾಲೆಗಳು, 30 ಹಾಸಿಗೆಗಳುಳ್ಳ ಆಸ್ಪತ್ರೆ, ರೈತರ ಸಾಲ ಮನ್ನಾ, ಮಹಿಳೆಯರು ಗುಡಿ ಕೈಗಾರಿಕೆ ಆರಂಭಿಸಲು ಉತ್ತೇಜನ, ಹಳ್ಳಿಯ ಯುವಕರಿಗೆ ಉದ್ಯೋಗ, ಹಿರಿಯ ನಾಗರಿಕರಿಗೆ 5000 ರು. ಪ್ರೋತ್ಸಾಹಧನ ನೀಡುವುದಾಗಿ ಎಚ್‌.ಡಿ ಕುಮಾರಸ್ವಾಮಿ ತಿಳಿಸಿದರು.