Town Municipal Council Election : ಬಿಡದಿ ನನ್ನ ರಾಜಕೀಯ ಜನ್ಮಭೂಮಿ - ಎಚ್‌ಡಿಕೆ
- ಬಿಡದಿ ತಾಲೂಕು ಕೇಂದ್ರವಾಗಿ ರಚನೆಗೊಳ್ಳಲಿದೆ
- ಜೆಡಿಎಸ್ ಅಭ್ಯರ್ಥಿಗಳ ಪರ ದಳಪತಿಗಳ ಭರ್ಜರಿ ಪ್ರಚಾರ
- ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಮಾಜಿ ಸಿಎಂ
ರಾಮನಗರ (ಡಿ.24): ಬಿಡದಿ (Bidadi) ಪುರಸಭಾ ಚುನಾವಣೆಯಲ್ಲಿ (Election ) ಜೆಡಿಎಸ್ (JDS) ಅಭ್ಯರ್ಥಿಗಳ ಪರ ಪ್ರಚಾರ ಕಣಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಧುಮುಕಿದ್ದಾರೆ. ಪುರಸಭೆ 1ನೇ ವಾರ್ಡಿನ ಕಲ್ಲುಗೋಪಳ್ಳಿಯಿಂದ ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣಾ (Election) ಪ್ರಚಾರ ಆರಂಭಿಸಿದರು. ಕಲ್ಲುಗೋಪಳ್ಳಿಗೆ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಜೆಸಿಬಿ ಮೂಲಕ ಹೂಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.
ಡಿ. 27ರಂದು ನಡೆಯಲಿರುವ ಚುನಾವಣೆಗೆ ರೋಡ್ ಶೋ ಮೂಲಕ ಕುಮಾರಸ್ವಾಮಿರವರು ಶಾಸಕ ಎ.ಮಂಜುನಾಥ್, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಅಭ್ಯರ್ಥಿಗಳೊಂದಿಗೆ ವಾರ್ಡುಗಳಲ್ಲಿ ಮತ ಬೇಟೆ ನಡೆಸಿದರು. ಕಲ್ಲುಗೋಪಳ್ಳಿ ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ 2ನೇ ವಾರ್ಡಿನಲ್ಲಿ ಕರಿಯಪ್ಪನದೊಡ್ಡಿ, ಹಲಸಿನಮರದೊಡ್ಡಿ, 3ನೇ ವಾರ್ಡಿನ ಜನತಾ ಕಾಲೋನಿ, 4ನೇ ವಾರ್ಡಿನ ಕೆಂಚನಕುಪ್ಪೆ, 5ನೇ ವಾರ್ಡಿನ ಎಂ.ಕರೇನಹಳ್ಳಿ, 6ನೇ ವಾರ್ಡಿನ ಅವರೆಗೆರೆ ಸೇರಿದಂತೆ ಅನೇಕ ವಾರ್ಡುಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೊಂದಿಗೆ ಭರ್ಜರಿ ಪ್ರಚಾರ ( Campaign) ಮಾಡಿದರು.
ಪ್ರಚಾರ ವೇಳೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ಗ್ರಾಮ ಪಂಚಾಯಿತಿಯಾಗಿದ್ದ ಬಿಡದಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ್ದೇವೆ. ಮುಂದಿನ 10 ವರ್ಷದ ನಂತರ ಬಿಡದಿ ತಾಲೂಕು ಕೇಂದ್ರವಾಗಿ ರೂಪುಗೊಳ್ಳಲಿದೆ. ಬಿಡದಿ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಕೊಡುಗೆ ಹೆಚ್ಚಾಗಿದೆ ಎಂದರು.
ಬಿಡದಿಗೆ ದೊಡ್ಡ ದೊಡ್ಡ ಕೈಗಾರಿಕೆಗಳು ಬಂದ ನಂತರ ವಿಶ್ವ ವಿಖ್ಯಾತಿ ಹೊಂದಿದೆ. ಅದಕ್ಕೆ ಪೂರಕವಾಗಿ ಬಿಡದಿ ಅಭಿವೃದ್ಧಿಗೆ ಜೆಡಿಎಸ್ (JDS) ಅಧಿಕಾರದಲ್ಲಿದ್ದಾಗ ಸ್ಪಂದಿಸಿದೆ. ಪ್ರತಿ ಕುಟುಂಬವನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಕೆಲಸ ಮಾಡಿದ್ದೇವೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿರುವ ಕಾರಣ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಿಡದಿ ನಮ್ಮ ತಂದೆ ಹಾಗೂ ನನಗೆ ರಾಜಕೀಯವಾಗಿ (Politics) ಜನ್ಮ ನೀಡಿದ ಭೂಮಿ.ಕೊನೆಯ ಉಸಿರು ಇರುವವರೆಗೂ ಬಿಡದಿ ಜನರ ಋುಣ ಮರೆಯುವುದಿಲ್ಲ. ನಾವು ಕಾಂಗ್ರೆಸ್ಸಿಗರಂತೆ (congress) ದಬ್ಬಾಳಿಕೆ ಅಥವಾ ಕಾನೂನು ಬಾಹಿರ ಮಾಡಿ ರಾಜಕರಣ ಮಾಡುತ್ತಿಲ್ಲ. ಕಾಂಗ್ರೆಸ್ ನಾಯಕರ ಸುಳ್ಳು ಭರವಸೆ ಮನಸೋಲಬೇಡಿ. ನಾನು ನಾಡದೊರೆ ಅಲ್ಲ, ನಿಮ್ಮ ಮನೆ ಮಗ ಎಂಬುದನ್ನು ಮತದಾರರು ಮರೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಟೀಕೆಗೆ ಮಹತ್ವ ನೀಡುವುದು ಬೇಡ. ರಾಜಕಾರಣದಲ್ಲಿ ಸಂಸ್ಕಾರ ಇಲ್ಲದ ವ್ಯಕ್ತಿಗಳು ಶಿಖಂಡಿ ಎಂದೆಲ್ಲಾ ಸಂಬೋಧಿಸುತ್ತಿದ್ದಾರೆ. ಅವರನ್ನು ನಾಟಕದ ಮಂಡಳಿಗೆ ಸೇರಿಸಬೇಕು ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಶಾಸಕ ಎ.ಮಂಜುನಾಥ್ ಮಾತನಾಡಿ, ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಿಗೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು (water) ಸರಬರಾಜಿಗೆ 73.40 ಕೋಟಿ ಮತ್ತು ಒಳಚರಂಡಿಗೆ ಯೋಜನೆಗೆ 98.20 ಕೋಟಿ ಯೋಜನೆ ಮಂಜೂರು ಮಾಡಿಸಿದ್ದೇನೆ. ಇದೊಂದು ಸಾಧನೆ ಸಾಕಲ್ಲವೆ. ಆದರೂ ಕಾಂಗ್ರೆಸ್ ನಾಯಕರು ನಮ್ಮ ಸಾಧನೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಿಡದಿ ಮತ್ತು ಮಾಗಡಿ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟುಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಕಾಂಗ್ರೆಸ್‌ನ ಸಂಸದರು, ವಿಧಾನ ಪರಿಷತ್ ಸದಸ್ಯರ ಕೊಡುಗೆ ಏನು, ಮಾಜಿ ಶಾಸಕರು ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆ ಏನೆಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಣ್ಣ, ಸೋಮೇಗೌಡ, ಶೇಷಪ್ಪ, ರಮೇಶ್ ಕುಮಾರ್ ಮತ್ತಿತರರು ಹಾಜರಿದ್ದರು.