'ಕಾಂಗ್ರೆಸ್, ಬಿಜೆಪಿಗರ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ'
* ಬಿಜೆಪಿ ಸರ್ಕಾರದಿಂದ ಪ್ರಗತಿಯಾಗುತ್ತಿಲ್ಲ
* ಜೆಡಿಎಸ್‌ದಿಂದ ರಾಜಕೀಯ ಅಸ್ತಿತ್ವ ಪಡೆದುಕೊಂಡ ನಂತರ ಪಕ್ಷಾಂತರ ಮಾಡಿದ ಭೀಮನಾಯ್ಕ
* ತಾಪಂ, ಜಿಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು
ಮರಿಯಮ್ಮನಹಳ್ಳಿ(ಜು.15): ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಪರಸ್ಪರ ಕಚ್ಚಾಟ, ತೆಗಳಾಟದಲ್ಲಿ ತೊಡಗಿ ಕಾಲಹರಣ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ ವೆಂಕಟೇಶ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮನಾಯ್ಕ ಅವರು ಜೆಡಿಎಸ್‌ದಿಂದ ರಾಜಕೀಯ ಅಸ್ತಿತ್ವ ಪಡೆದುಕೊಂಡು ನಂತರ ಪಕ್ಷಾಂತರ ಮಾಡಿದರು. ಜೆಡಿಎಸ್‌ನಲ್ಲಿ ಉಳಿದುಕೊಂಡಿದ್ದರೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಭೀಮಾನಾಯ್ಕ ಅವರು ಮಂತ್ರಿಯಾಗುತ್ತಿದ್ದರು. ಪಕ್ಷದ ಕಾರ್ಯಕರ್ತರು ಈಗಿನಿಂದಲೇ ತಾಪಂ, ಜಿಪಂ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರಮಾಲೆಯಲ್ಲೇ ದುರಾಡಳಿತ ನಡೆಸ್ತಿದೆ:ಲಾಡ್
ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ ಮಾತನಾಡಿದರು. ಜಿಲ್ಲಾ ಕೋರ್ ಕಮಿಟಿ ಸದಸ್ಯ ಎಚ್. ಪಾಂಡುರಂಗ ಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸುಭಾನಸಾಬ್, ತಾಲೂಕು ಉಪಾಧ್ಯಕ್ಷ ಪಿ. ಮುಕ್ಕುಂದ, ಎಲ್.ಡಿ. ನಾಯ್ಕ, ಕಚಟಿ ಮಂಜುನಾಥ, ವಕೀಲ ಕೊಟ್ರೇಶ, ಗರಗ ರಮೇಶ್, ಬಾಳೆಕಾಯಿ ಹನುಮಂತ, ತಳವಾರ ಸೋಮಣ್ಣ, ಷಣ್ಮುಖ ತಿಮ್ಮಲಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.