ಹಾಸನ (ನ.13):  ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಚುಣಾವಣಾ ಚಾಣಕ್ಯನಿದ್ದಂತೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ 2023 ರ ಲೋಕಸಭಾ ಚುನಾವಣಾ ಉಸ್ತುವಾರಿಯನ್ನು ವಿಜಯೇಂದ್ರಗೆ ವಹಿಸಲಿ ಎಂದು ಮಾಜಿ ಶಾಸಕ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯು ಜನರು ಜೆಡಿಎಸ್‌ಗೆ ಇಷ್ಟೊಂದು ಮತ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಜೆಡಿಎಸ್‌ ಪಕ್ಷವು ಇನ್ನು ಬಡವರ ಮತ್ತು ಜನರ ಹೃದಯದಲ್ಲಿದೆ. ಜನತೆ ತೀರ್ಪಿಗೆ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರದ ನಮ್ಮ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

1989 ರಲ್ಲೂ ಹಾಸನ ಜಿಲ್ಲೆಯಲ್ಲಿ 8 ಕ್ಷೇತ್ರದಲ್ಲೂ ಜೆಡಿಎಸ್‌ ಸೋಲು ಅನುಭವಿಸಿತ್ತು. ರಾಜ್ಯದಲ್ಲಿ 18 ಸ್ಥಾನವನ್ನು ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಗೆದ್ದಿದ್ದೆವು. ಕೆಲ ಬಿಜೆಪಿ ಮುಖಂಡರು ಇಷ್ಟುಪಾರದರ್ಶಕ ಚುನಾವಣೆ ನಡೆದಿಲ್ಲ ಎಂದಿದ್ದಾರೆ. ಚುನಾವಣಾ ಆಯೋಗವು ಮೊದಲು ಶಿರಾ ಕ್ಷೇತ್ರಕ್ಕೆ ಹೋಗಿ ನೋಡಿಬರಲಿ. ಏನಾಗಿತ್ತು ಅಂತ ತಿಳಿಯುತ್ತದೆ. ನವೆಂಬರ್‌ 1 ರಿಂದ 3 ರವರೆಗೆ ಎಸ್ಪಿ, ಡಿಸಿ ಮತ್ತು ಚುನಾವಣಾಧಿಕಾರಿಗಳ ಅದಿಕಾರವನ್ನು ಆರ್‌ಎಸ್‌ಎಸ್‌ಗೆ ನೀಡಲಾಗಿತ್ತು ಮತ್ತು ಸ್ವಯಂ ಸೇವಕರೇ ಉಸ್ತುವಾರಿ ವಹಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದರು.

ನಾನೊಬ್ಬ ಇದ್ದೀನಿ-ಯಾರನ್ ಕೇಳಿ ಈ ತೀರ್ಮಾನ ಮಾಡಿದ್ರಿ : ರೇವಣ್ಣ ಗರಂ ..

ಯಾವ ಪೊಲೀಸ್‌ ಇಲ್ಲ ಏನೂ ಇಲ್ಲ. ಮುಖ್ಯಮಂತ್ರಿ ಮಗನೇ ಅಲ್ಲೆ ಕುಳಿತು ಉಸ್ತುವಾರಿ ಮಾಡುತ್ತಿದ್ದರು. ಮೊದಲು ಶಿರಾ ಕ್ಷೇತ್ರದ ಜನರು ನೀರು ಇಲ್ಲದೆ ನೊಂದಿದ್ದಾರೆ. ಈಗಲಾದರೂ ನೀರು ಕೊಟ್ಟು ವಿಶ್ವಾಸ ಗಳಿಸಲಿ. ಉಪ ಚುನಾವಣೆ ಹಿನ್ನೆಲೆಯಲ್ಲಿ ಆರ್‌.ಆರ್‌. ನಗರಕ್ಕೆ 900 ಕೋಟಿ ಅನುದಾನ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಕಾಲದ ಅನುದಾನವನ್ನು ಬೇಕಾದರೆ ಅವರಿಗೆ ಕೊಡಲಿ. ನಾವು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಮೆಟ್ಟಿನಿಂತು ಹೋರಾಟ ಮಾಡುತ್ತಿದ್ದೇವೆ. ನಾವು ಎಂದಿಗೂ ಎದೆಗುಂದುವುದಿಲ್ಲ. ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ನಮಗೆ ಸೋಲು-ಗೆಲುವು ಮುಖ್ಯವಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವುದು ಮುಖ್ಯ. ನಾವು ಮನಸ್ಸು ಮಾಡಿದ್ದರೆ ಗೆಲ್ಲುವ ಕುದುರೆ ಸೋಲಿಸಬಹುದಿತ್ತು. ಆದರೆ ನಮ್ಮ ಕಾರ್ಯಕರ್ತರಿಗೆ ಟಿಕೆಟ್‌ ಕೊಡುವುದು ಮುಖ್ಯವಾಗಿತ್ತು. ರಾಜ್ಯದಲ್ಲಿ ಇಂತಹ ಭ್ರಷ್ಟಸರಕಾರ ಇದೆ ಎಂದು ಅನೇಕರು ಮತ ಹಾಕಲು ಮುಂದೆ ಬಂದಿರುವುದಿಲ್ಲ ಎಂದರು.

ಇದೇ ವೇಳೆ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌ ಉಪಸ್ಥಿತರಿದ್ದರು.