ಹಾಸನ (ನ.03):  ಮಹಾಮಾರಿ ಕೊರೋನಾದಿಂದಾಗಿ 9 ತಿಂಗಳಿಂದ ಕಾಲೇಜುಗಳು ಆರಂಭವಾಗಿಲ್ಲ. ಅವುಗಳಲ್ಲಿ ಮೂಲಭೂತ ಸೌಕರ‍್ಯಗಳು ಕೂಡ ಇಲ್ಲದಂತಾಗಿದೆ. ಆದರ ಸರ್ಕಾರ ನ.17ರಿಂದ ಕಾಲೇಜುಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಗೆ ಸಲಹೆಗಾರರನ್ನಾಗಿ ಪ್ರೊ. ದೊರೆಸ್ವಾಮಿ ಅವರನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ ಆತನ ಹಿನ್ನೆಲೆ ಏನು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತು. ಅಂತಹವರನ್ನು ಸರ್ಕಾರ ನೇಮಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ರೇವಣ್ಣ : ಗರಂ ಆದ ಜೆಡಿಎಸ್ ನಾಯಕ ..

ದೊರೆಸ್ವಾಮಿಗೆ ಬಡವರ ಕಷ್ಟಗೊತ್ತಿದೆಯಾ? ಒಂದು ಸೀಟಿಗೆ 60 ಲಕ್ಷ ರು. ತೆಗೆದುಕೊಳ್ಳುತ್ತಾರೆ. ಆತ ಬಡ ವಿದ್ಯಾರ್ಥಿಗಳಿಗೆ ಏನು ಸಹಾಯ ಮಾಡಿದ್ದಾರೆ? ಜನ ರಿಂದ ಲೂಟಿ ಮಾಡುವವರು ಶಿಕ್ಷಣ ಇಲಾಖೆಗೆ ಸಲಹೆಗಾರರಾಗಿದ್ದಾರೆ. ಇಂತಹವರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೊರೆಸ್ವಾಮಿಯ ಕೊಡುಗೆ ಏನು? ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆಯ ಸಚಿವರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ ಅವರು, ಶಾಲಾ-ಕಾಲೇಜುಗಳನ್ನು ಆರಂಭ ಮಾಡಿದರೆ ಸರ್ಕಾರದಿಂದಲೇ ಕಡ್ಡಾಯವಾಗಿ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ಗಳನ್ನು ನೀಡಬೇಕು ಮತ್ತು 1 ರಿಂದ 9ನೇ ತರಗತಿಯವರೆಗೂ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಿ ಅವರನ್ನು ಪಾಸ್‌ ಮಾಡಬೇಕು ಎಂದು ಹೇಳಿದರು. ಶಿರಾ ಉಪ ಚುನಾವಣೆಯಲ್ಲಿ ಎರಡೂ ಪಕ್ಷದವರು ಎಷ್ಟೇ ಹಣ ಹಂಚಿದರೂ ಕೂಡ ಜೆಡಿಎಸ್‌ ಪಕ್ಷದ ಅಭ್ಯರ್ಥಿಯ ಗೆಲುವು ನಿಶ್ಚಿತ. ನಾನು ಕೂಡ ಎರಡು ವಾರ ಶಿರಾದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಸೋಲುವ ಭಯ ನಮಗಿಲ್ಲ. ನಮ್ಮ ಅಭ್ಯರ್ಥಿಯ ಗೆಲುವು ನೂರಕ್ಕೆ ನೂರರಷ್ಟುಖಚಿತ ಎಂದು ಹೇಳಿದರು.