ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಸಾಕಷ್ಟು ಸದ್ದಾಗುತ್ತಿದ್ದು, ಇದ್ರ ಬಗ್ಗೆ ಮಾತಾಡೋದು ನಮ್ಮ ಸ್ಟೇಟಸ್‌ಗೆ ಒಳ್ಳೇದಲ್ಲ ಎಂದು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಹೇಳಿದ್ದಾರೆ.

 ಹಾಸನ (ಮಾ.04):  ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ವಿಚಾರವಾಗಿ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಹಾಗಾಗಿ ವಿಚಾರ ತಿಳಿದುಕೊಳ್ಳದೆ ಅವರ ಬಗ್ಗೆ ಮಾತನಾಡುವುದು ನಮ್ಮ ಸ್ಟೇಟಸ್‌ಗೆ ಒಳ್ಳೆಯದಲ್ಲ. ವಿಚಾರ ತಿಳಿದುಕೊಂಡ ಮೇಲೆ ನಡೆಯುವ ವಿಧಾನಸಭಾ ಅ​ಧಿವೇಶನದಲ್ಲಿ ಮಾತನಾಡುವುದಾಗಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು.

ನಗರದ ಜಿಲ್ಲಾ​ಧಿಕಾರಿ ಕಚೇರಿಯಲ್ಲಿ ಬುಧವಾರ ಕೆಲ ಸಮಯ ಜಿಲ್ಲಾಧಿ​ಕಾರಿಗಳ ಜೊತೆ ಕಾರ್ಯನಿಮಿತ್ತ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೂಳಿ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿನ್ನೆ ದೆಹಲಿಗೆ ಹೋಗಿ ರಾತ್ರಿ ಬಂದಿದ್ದೇನೆ. ಏನು ನಡೆದಿದೆ ಎಂಬುದು ವಿಚಾರ ಗೊತ್ತಿಲ್ಲ. ವಿಷಯ ತಿಳಿದುಕೊಂಡು ಈ ಬಗ್ಗೆ ಮಾತನಾಡುತ್ತೇನೆ ಎಂದರು.

ರಮೇಶ್ ರಾಸಲೀಲೆ ಪ್ರಕರಣ; ಯಾರ್ಯಾರು, ಏನೇನಂದ್ರು.? ...

ರಮೇಶ್‌ ಜಾರಕಿಹೊಳಿ ವಿಚಾರವಾಗಿ ಮಾತನಾಡಲು ಸಿಎಂ, ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಇದ್ದಾರೆ. ಸರಿಯಾಗಿ ವಿಷಯ ತಿಳಿದುಕೊಳ್ಳದೇ ಮಾತನಾಡುವುದು ಸ್ಟೇಟಸ್‌ಗೆ ಒಳ್ಳೆಯದಲ್ಲ ಎಂದರು.

ಇನ್ನು ವಕೀಲರು ಕರ್ತವ್ಯದಲ್ಲಿದ್ದಾಗ ಕೊಲೆ ಮತ್ತು ಹಲ್ಲೆಯಂತಹ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು, ವಕೀಲರಿಗೆ ಎಲ್ಲೆ ತೊಂದರೆ ಕೊಟ್ಟರೂ ಸರಕಾರವು ಗಂಭೀರವಾಗಿ ತೆಗೆದುಕೊಂಡು ಅವರ ಜೊತೆ ಬೆಂಬಲವಾಗಿರಬೇಕು ಎಂಬುದು ನನ್ನ ಅಭಿಪ್ರಾಯ. ನಾವು ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾ ರಂಗಕ್ಕೆ ಗೌರವ ಕೊಡಬೇಕು ಎಂದು ವಕೀಲರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.