ರಾಮನಗರ [ಫೆ.29]:  ನಮ್ಮ ಪಕ್ಷದ ಯಾರೋ ಒಂದಿಬ್ಬರು ಸಭೆಗೆ ಗೈರು ಹಾಜರಾದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇವರನ್ನು ಶಾಸಕರಾಗಿ ಮಾಡಿರುವ ಕಾರ್ಯಕರ್ತರು ನಮ್ಮ ಪಕ್ಷದಲ್ಲಿ ಇರುವವರೆಗೆ ಯಾವುದೇ ಭಯವಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಇತ್ತೀಚಿಗೆ ಜೆಡಿಎಸ್‌ ಶಾಸಕಾಂಗ ಸಭೆಗೆ ಗೈರಾಗಿದ್ದ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಟಾಂಗ್‌ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1977-78ರಲ್ಲಿ 68 ಶಾಸಕರು ಗೆದ್ದಿದ್ದರು. ಆದರೆ ಕೊನೆಗೆ ಉಳಿದಿದ್ದು ಕೇವಲ 12 ಮಂದಿ ಶಾಸಕರು ಮಾತ್ರ. ರಾಜಕಾರಣದಲ್ಲಿ ಒಂದು ಪಕ್ಷದಲ್ಲಿ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಯಾರು ಎಲ್ಲಿ ಇರುತ್ತಾರೆ ಎಂಬ ನಿರೀಕ್ಷೆಯನ್ನು ನಾವು ಇಟ್ಟುಕೊಳ್ಳುವುದಿಲ್ಲ ಎಂದರು.

ಮೂರು ನಾಲ್ಕು ಜನ ಪಕ್ಷ ಬಿಟ್ಟು ಹೋಗುತ್ತಾರೆ:

ಯಾರೋ ಮೂರು ನಾಲ್ಕು ಶಾಸಕರು ಪಕ್ಷ ಬಿಟ್ಟು ಹೋಗಬಹುದು. ಇವರಿಗೆ ಬಿಜೆಪಿ, ಕಾಂಗ್ರೆಸ್‌ ಪ್ರೋತ್ಸಾಹ ನೀಡುತ್ತಿದೆ. ಅವರು ಗೆದ್ದಿರುವ ಕ್ಷೇತ್ರಗಳಲ್ಲಿ ತಮ್ಮ ಪಕ್ಷಕ್ಕೆ ಶಕ್ತಿ ಇಲ್ಲ. ಈ ಕಾರಣಕ್ಕಾಗಿ ನಮ್ಮ ಶಾಸಕರನ್ನು ಕರೆದುಕೊಂಡು ಶಕ್ತಿ ಬೆಳೆಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಕಾರ್ಯಕರ್ತರು ಎಲ್ಲೂ ಹೋಗಲ್ಲ, ಅಲ್ಲೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

2023ರಲ್ಲಿ ಅಧಿಕಾರ ಹಿಡಿಯಲು ಚುನಾವಣಾ ತಂತ್ರಜ್ಞನ ಮೊರೆ ಹೋದ ಜೆಡಿಎಸ್...

ನಮ್ಮ ಪಕ್ಷವನ್ನು ಮುಗಿಸಬೇಕೆಂದು 50 ವರ್ಷಗಳಿಂದ ಮಹಾ​ನ್‌ ನಾಯಕರು ಪ್ರಯತ್ನ ಮಾಡುತ್ತಾ ಬರುತ್ತಿದ್ದಾರೆ. ಆದರೆ ಇವರ ಪ್ರಯತ್ನ ಹಿಂದೆಯೂ ಸಫಲವಾಗಿಲ್ಲ, ಮುಂದೆಯೂ ಆಗುವುದಿಲ್ಲ. ನಮ್ಮ ಪಕ್ಷದ ಶಕ್ತಿಯೇ ಕಾರ್ಯಕರ್ತರು. ಈ ಶಾಸಕರು ಹೋದರೆ ಹೊಸ ನಾಯಕನನ್ನು ಕಾರ್ಯಕರ್ತರೇ ಹುಡುಕಿಕೊಳ್ಳುತ್ತಾರೆ. ಹಾಗಾಗಿ ನಾನು ಈ ನಾಯಕ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.