ಚನ್ನಪಟ್ಟಣ (ಫೆ.08):  ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನಡೆಯುತ್ತಿರುವ ಹೋರಾಟ ದಾರಿ ತಪ್ಪುವ ಮುನ್ನಾ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸ್ವಕ್ಷೇತ್ರದಲ್ಲಿ ನಡೆದ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ತಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಆಯಾ ಸಮಾಜದ ಧಾರ್ಮಿಕ ಗುರುಗಳೇ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಈ ಹೋರಾಟ ವಿಕೋಪಕ್ಕೆ ತಿರುಗುವ ಎಲ್ಲ ಸಾಧ್ಯತೆ ಇದೆ. ಸರ್ಕಾರ ಇದನ್ನು ಗಮನದಲ್ಲಿರಿಸಿಕೊಂಡು ಈ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂದರು.

ಈ ಎಲ್ಲ ಬೆಳವಣಿಗೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮಠಾಧಿ​ೕಶರ ಭಾವನೆಗಳಿಗೆ ಧಕ್ಕೆಯಾಗದ ರೀತಿ ಆಯಾ ಸಮಾಜದ ಮುಖಂಡರ ಜತೆಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕಿದೆ. ಧಾರ್ಮಿಕ ಮುಖಂಡರಿಗೆ ಗೌರವ ನೀಡುವ ಮೂಲಕ ಈ ಹೋರಾಟ ಬೇರೆ ದಿಕ್ಕು ಪಡೆಯುವ ಮುನ್ನಾ ಸರ್ಕಾರ ಸ್ಪಂದಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಿಸಿದ ಕುಮಾರಸ್ವಾಮಿ .

ಸಭಾಪತಿ ಹುದ್ದೆಗೆ ಮಾತ್ರ ಮೈತ್ರಿ:

ಬಿಜೆಪಿ ಜತೆಗೆ ಜೆಡಿಎಸ್‌ ಮಾಡಿಕೊಂಡಿರುವ ಮೈತ್ರಿ ಕೇವಲ ಮೇಲ್ಮನೆ ಸಭಾಪತಿ ಹುದ್ದೆಗೆ ಮಾತ್ರ. ಇದನ್ನು ಬಿಟ್ಟು ಆ ಪಕ್ಷದೊಂದಿಗೆ ನಮ್ಮ ಪಕ್ಷ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿ ಹಾಗೂ ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ಜತೆಗೆ ನಾವು ವಿಷಯಾಧಾರಿತವಾಗಿ ಮೈತ್ರಿಯಾಗುತ್ತೇವೆ. ಸರ್ಕಾರದ ಜನವಿರೋಧಿ ​ನೀತಿಗಳನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ, ಯಾವುದೇ ಸರ್ಕಾರವಾಗಲಿ ರೈತರು ಹಾಗೂ ಜನತೆಗೆ ವಿರುದ್ಧವಾದ ನಿಲುವನ್ನು ಕೈಗೊಂಡಲ್ಲಿ ನಮ್ಮ ಪಕ್ಷ ಮುಂದೆ ನಿಂತು ಹೋರಾಡುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನ ಮಂತ್ರಿಯೇ ಮಾತನಾಡಬೇಕು:

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಪ್ರಧಾನ ಮಂತ್ರಿಗಳಿಗೆ ರೈತರ ಬಗ್ಗೆ ಗೌರವ ಇದ್ದಲ್ಲಿ ಪ್ರತಿಭಟನಾ ನಿರತ ರೈತರ ಜತೆಗೆ ಮಾತುಕತೆ ನಡೆಸಲು ಕೃಷಿ ಮಂತ್ರಿಯನ್ನು ಕಳುಹಿಸುವ ಬದಲು ತಾವೇ ಹೋಗಬೇಕು. ರೈತರ ಜತೆಗೆ ಅವರು ಸಭೆ ನಡೆಸಲು, ಅವರು ಜಾರಿಗೆ ತರಲು ಉದ್ದೇಶಿಸುವ ಕಾಯ್ದೆಗಳಿಂದ ರೈತರಿಗೆ ಆಗುವ ಉಪಯೋಗವೇನು ಎಂದು ತಿಳಿಸಲಿ. ರೈತರಿಗೆ ಈ ಕಾಯ್ದೆಗಳ ಬಗ್ಗೆ ಇರುವ ಅನುಮಾನವನ್ನು ಸ್ವತಃ ಪ್ರಧಾನಿಗಳೇ ಪರಿಹರಿಸಲಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಈಗ ರೈತರು ಮುಂದಿನ ಅಕ್ಟೋಬರ್‌ವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ. ಕಳೆದ 70 ದಿನಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡ್ತಿದ್ದಾರೆ. ಹಾಗಾಗಿ ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಮಂತ್ರಿ ಕ್ರಮವಹಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ಅಧ್ಯಕ್ಷ ಜಯಮುತ್ತು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ, ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು ತಾಪಂ ಮಾಜಿ ಸದಸ್ಯ ಗುರುಕುಮಾರ್‌ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಪೋಟೋ:7ಕೆಸಿಪಿಟಿ1: ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉದ್ಯಾನವನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅನಾವರಣ ಗೊಳಿಸಿದರು.