5 ವರ್ಷದಲ್ಲಿ ನೀರಾವರಿ ಯೋಜನೆ ಪೂರ್ಣ, ಮಾತು ತಪ್ಪಿದರೆ ಜೆಡಿಎಸ್ ವಿಸರ್ಜನೆ
ಜೆಡಿಎಸ್‌ಗೆ ಪೂರ್ತಿ ಐದು ವರ್ಷ ಕಾಲ ಅಧಿಕಾರ ಕೊಡಿ, ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಈ ಮಾತಿಗೆ ತಪ್ಪಿದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ವರದಿ- ಸುರೇಶ್ ಎ ಎಲ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು(ಎ.5): ನಮ್ಮ ಪಕ್ಷಕ್ಕೆ ಪೂರ್ತಿ ಐದು ವರ್ಷ ಕಾಲ ಅಧಿಕಾರ ಕೊಡಿ, ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಈ ಮಾತಿಗೆ ತಪ್ಪಿದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD kumaraswamy) ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಇಂದು ನಡೆದ ರೈತರ ಜೊತೆಗಿನ ಸಂವಾದ ಕಾರ್ಯಕ್ರ ದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ರೈತರ ಸಮಸ್ಯೆ ಗಳ ಬಗ್ಗೆ ಮಾತನಾಡುತ್ತಿದ್ದರು. ಇದೇ ವೇಳೆ ಜೆಡಿಎಸ್ ಪಕ್ಷವನ್ನು ಕುಟುಂಬದ ಪಕ್ಷ ಎನ್ನುತ್ತಾರೆ. ಆದರೆ ಇಡೀ ರಾಜ್ಯವೇ ನಮ್ಮ ಕುಟುಂಬ ಇದ್ದಂತೆ. ರೈತರು ಮುಂದೆ ಬಂದರೆ ನಮ್ಮ ಪಕ್ಷದಿಂದ ಟಿಕೆಟ್ ನೀಡಲು ಸಿದ್ದನಿದ್ದೇನೆ.
ನಿಮ್ಮ ಕ್ಷೇತ್ರದ ಸೇವೆ ಮಾಡಲು ಸಿದ್ದರಿರುವವರು, ಚುನಾವಣೆ ನಡೆದಲು ಶಕ್ತ ರಾಗಿಲ್ಲದೇ ಇರುವವರು ಮುಂದೆ ಬನ್ನಿ ನಮ್ಮ ಪಕ್ಷದಿಂದ ಬೆಂಬಲ ಕೊಡುತ್ತೇವೆ. ಹತ್ತು ಜನ ರೈತ ನಾಯಕರಿಗೆ ನಮ್ಮ ಜೆಡಿಎಸ್ ಪಕ್ಷದಿಂದ ಬೆಂಬಲಿಸುವುದಾಗಿ ಹೇಳಿದರು.ನಾನು ಯಾವಾಗಲೂ ರೈತ ಪರವಾಗಿ ಇದ್ದೇನೆ. ಹಿಂದೆ ನಾನು ಸಿಎಂ ಆದಾಗ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದೆ. ನಮ್ಮ ಮೈತ್ರಿ ಪಕ್ಷ ನನಗೆ ಬೆಂಬಲ ಕೊಡದೇ ಇದ್ದರೂ ಸಹಾ ನಾನು ಯೋಚನೆ ಮಾಡದೇ ಸಾಲಮನ್ನಾ ಮಾಡಿದ್ದೆ.
ನನಗೆ ಮತ್ತೆ ಸಿಎಂ ಆಗಬೇಕು ಎಂಬ ಆಸೆ ಇಲ್ಲ, ನಾನು ಯಾವಾಗಲೋ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಬಯಸಿದ್ದೆ. ಆದರೆ ಜನರಿಗಾಗಿ ನಾನು ಇನ್ನೂ ರಾಜಕೀಯದಲ್ಲಿ ಉಳಿದುಕೊಂಡಿದ್ದೇನೆ. ಅದ್ಯಾರೋ ಸ್ವಾಮೀಜಿ ನನಗೆ ಸವಾಲು ಹಾಕಿದ್ದಾರೆ ಜೆಡಿಎಸ್ ಪಕ್ಷದಿಂದ ದಲಿತರನ್ನು ಮುಖ್ಯಮಂತ್ರಿ ಮಾಡುತ್ತಾರಾ ಹೇಳಿ ಎಂದಿದ್ದಾರೆ. ನಾನು ಈಗಲೂ ಹೇಳುತ್ತೇನೆ, ಅಂತಾ ಸಂಧರ್ಭ ಬಂದರೆ ದಲಿತರನ್ನೇ ಸಿಎಂ ಮಾಡುತ್ತೇನೆ.
ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರಬೇಕು ಎಂದು ನನಗೇನೂ ಆಸೆ ಇಲ್ಲ. ಈಗಾಗಲೇ ಸಿಎಂ ಆಗಿ ನನ್ನ ಹೆಸರು ಮತ್ತು ಫೋಟೋ ವಿಧಾನಸೌಧದಲ್ಲಿ ಇದೆ.ನಾನು ಎರಡನೇ ಬಾರಿ ಸಿಎಂ ಆಗಿದ್ದಾಗ ನಾನು ಮಾಡಿದ್ದ ಕೆಲಸಗಳಿಗೆ ಸರಿಯಾದ ಪ್ರಚಾರ ಸಿಗಲಿಲ್ಲ. ನಾನು ಸಿಎಂ ಆಗಿದ್ದಾಗ ಯಾವುದೇ ಕೋಮು ಗಲಭೆ ನಡೆಯಲಿಲ್ಲ, ಯಾವುದೇ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿರಲಿಲ್ಲ ಎಂದರು.
ಜನತಾ ಜಲಧಾರೆಗೆ ಡೇಟ್ ಫಿಕ್ಸ್: ಇದೇ ವೇಳೆ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಯೋಜನೆ ಜನತಾ ಜಲಧಾರೆಗೆ (Janata Jaladhare ) ದಿನಾಂಕ ಘೋಷಣೆ ಮಾಡಿದ್ದಾರೆ, ಇದೇ ತಿಂಗಳ 16 ನೆಯ ತಾರೀಖು ಅಂದರೆ ಹನುಮ ಜಯಂತಿ ದಿವಸ ಜನಾತಾ ಜಲಧಾರೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ. ಈ ಕಾರ್ಯಕ್ರಮ ಚುನಾವಣೆ ದೃಷ್ಟಿಯಿಂದ ಮಾಡುತ್ತಿಲ್ಲ, ರಾಜ್ಯದ ಜನರ ನೀರಿನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿಯೇ ರೂಪಿಸಿರುವ ಕಾರ್ಯಕ್ರಮ ಇದು. ಇದನ್ನು ನೀವೇ ರೈತರೆಲ್ಲರೂ ಸೇರಿ ಮುನ್ನಡೆಸಿ ಎಂದು ಕುಮಾರಸ್ವಾಮಿ ಕರೆ ಕೊಟ್ಟರು.
ಮುಸಲ್ಮಾನರ ಬಳಿ ಮಾವು ಕೊಳ್ಳಬೇಡಿ ಎನ್ನುವವರು ರೈತದ್ರೋಹಿಗಳು: ಮುಸಲ್ಮಾನರ ಬಳಿ ಮಾವು ಖರೀದಿಸಬೇಡಿ ಎಂಬ ಅಭಿಯಾನಕ್ಕೆ ಕಿಡಿಕಾರಿದ ಮಾಜಿ ಸಿಎಂ ಕುಮಾರಸ್ವಾಮಿ, ಈ ರೀತಿ ಹೇಳುವವರು ರೈತದ್ರೋಹಿಗಳು, ರಾಷ್ಟ್ರದ್ರೋಹಿಗಳು. ಮಾವನ್ನು ಬೆಳೆಯುವವರಲ್ಲಿ ಹಿಂದೂಗಳೇ ಹೆಚ್ಚು, ಮುಸಲ್ಮಾನರು ಅವರ ಬಳಿ ಮಾವು ಕೊಂಡು ವ್ಯಾಪಾರ ಮಾಡುತ್ತಾರೆ. ಒಂದು ವೇಳೆ ಮುಸಲ್ಮಾನರ ಬಳಿ ಮಾವು ಖರೀದಿ ಮಾಡಬೇಡಿ ಎಂದರೆ ಅದು ನಮ್ಮ ಹಿಂದೂಗಳಿಗೇ ನಷ್ಟ, ಮೋದಿ ಅವರಾಗಲೀ,ಬೊಮ್ಮಾಯಿ ಅವರಾಗಲೀ ಮಾವನ್ನು ಕೊಂಡು ವ್ಯಾಪಾರ ಮಾಡ್ತಾರಾ ಕೇಳಿ ಎಂದು ವ್ಯಂಗ್ಯವಾಡಿದ್ದಾರೆ.ಇದೇ ರೀತಿ ಬಿಜೆಪಿಯ ಅಂಗ ಪಕ್ಷಗಳು ದಿನಕ್ಕೊಂದು ವಿವಾದ ಸೃಷ್ಟಿ ಮಾಡುತ್ತಾ ಹೋದರೆ ಜನ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ..