Asianet Suvarna News Asianet Suvarna News

ಐಟಿ ದಾಳಿ ಹೆಸರಲ್ಲಿ ಜತೆಗಾರರನ್ನೇ ವಂಚಿಸಿದ JDS ಮುಖಂಡ..!

ಸಮಾಜ ಸೇವೆ ಹೆಸರಿನಲ್ಲಿ ಹಾಗೂ ನನ್ನ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ನಂಬಿಸಿ ಜೊತೆಯಲ್ಲಿದ್ದ ಮಹೇಶ್‌ ಕುಮಾರ್‌ ಎಂಬುವರಿಗೆ 30 ಲಕ್ಷ ರು.ಗೂ ಅಧಿಕ ವಂಚನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ಜೆಡಿಎಸ್‌ ಮುಖಂಡ ಹಾಗೂ ಚಂದ್ರಗುಪ್ತ ಮೌರ್ಯ ಟ್ರಸ್ಟ್‌ನ ಅಧ್ಯಕ್ಷ ಲೋಕೇಶ್‌ ಮೌರ್ಯ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.

 

jds leader cheats companion projecting fake it raid
Author
Bangalore, First Published Nov 16, 2019, 11:26 AM IST

ಚಾಮರಾಜನಗರ(ನ.16): ಸಮಾಜ ಸೇವೆ ಹೆಸರಿನಲ್ಲಿ ಹಾಗೂ ನನ್ನ ಮನೆ ಮೇಲೆ ಐಟಿ ದಾಳಿ ನಡೆದಿದೆ ಎಂದು ನಂಬಿಸಿ ಜೊತೆಯಲ್ಲಿದ್ದ ಮಹೇಶ್‌ ಕುಮಾರ್‌ ಎಂಬುವರಿಗೆ 30 ಲಕ್ಷ ರು.ಗೂ ಅಧಿಕ ವಂಚನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ಜೆಡಿಎಸ್‌ ಮುಖಂಡ ಹಾಗೂ ಚಂದ್ರಗುಪ್ತ ಮೌರ್ಯ ಟ್ರಸ್ಟ್‌ನ ಅಧ್ಯಕ್ಷ ಲೋಕೇಶ್‌ ಮೌರ್ಯ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.

ಕೊಳ್ಳೇಗಾಲ ಹನೂರು ಕ್ಷೇತ್ರದಲ್ಲಿ ನನಗೆ ಜೆಡಿಎಸ್‌ ಟಿಕೆಟ್‌ ಸಿಗಲಿದೆ. ನನ್ನನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಘಟನೆಗೆ ಕಳುಹಿಸಿದ್ದಾರೆ ಎಂದು ಕಳೆದ 2 ವರ್ಷದ ಹಿಂದೆ ಲೋಕೇಶ್‌ ಮೌರ್ಯ ಎಂಬಾತ ಸಮಾಜ ಸೇವೆ ಸೋಗಿನಲ್ಲಿ ಕ್ಷೇತ್ರಕ್ಕೆ ಕಾಲಿಟ್ಟಿದ್ದ. ಬಡ ಮಕ್ಕಳಿಗೆ ನೋಟ್‌ ಪುಸ್ತಕ ವಿತರಣೆ, ಕಡು ಬಡವರಿಗೆ ಆರ್ಥಿಕ ನೆರವು, ವಿದ್ಯಾಭ್ಯಾಸಕ್ಕೆ ಸಹಾಯಧನ, ಕ್ರೀಡಾಕೂಟಕ್ಕೆ ಪೋ›ತ್ಸಾಹ ಸೇರಿದಂತೆ ಹಲವು ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ. ಪ್ರಾರಂಭದಲ್ಲೇ ಕ್ಷೇತ್ರದಲ್ಲಿ ಒಬ್ಬರಿಂದ 10 ಲಕ್ಷ ರು. ಪಡೆದು ವಿವಾದಕ್ಕೀಡಾಗಿದ್ದ. ಬಳಿಕ ರೈತರು ಸೇರಿದಂತೆ ಬಡ ರೋಗಿಗಳ ನೆರವಿಗೆ ವಿತರಿಸಿದ್ದ ಅನೇಕ ಚೆಕ್‌ಗಳು ಸಹ ಬೌನ್ಸ್‌ ಆಗಿ ಸಾಕಷ್ಟುಟೀಕೆಗೂ ಗುರಿಯಾಗಿದ್ದ.

‘ಸಿದ್ದರಾಮಯ್ಯ ದರ್ಪ ಮಾಡ್ತಾರೆ - ಡಿಕೆಶಿ ಫೋಸ್ ಕೊಡ್ತಾರೆ ’

ನರಸೀಪುರ ಕ್ಷೇತ್ರದ ಪ್ರಬಲ ಟಿಕೇಟ್‌ ಆಕಾಂಕ್ಷಿಯಾಗಿದ್ದ ಮಹೇಶ್‌ ಕುಮಾರ್‌ ಅವರ ಪರಿಚಯ ಬೆಳೆಸಿಕೊಂಡ ಲೋಕೇಶ್‌, ಮಹೇಶ್‌ ಅವರಿಗೂ 30 ಲಕ್ಷ ರು.ಗೂ ಅಧಿಕ ವಂಚನೆ ಮಾಡಿರುವ ಕುರಿತು ಸ್ವತಃ ಅವರೇ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?

ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ನೀಡಿರುವ ಮಹೇಶ್‌ ಅವರು ‘ನನಗೆ ಲೋಕೇಶ್‌ ಮೌರ್ಯ ಕಳೆದ 2 ವರ್ಷದಿಂದ ಪರಿಚಯ. ನಾನು ನರಸೀಪುರ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆ ವೇಳೆ ನನ್ನ ಮನೆ ಮೇಲೆ ಐಟಿ ದಾಳಿ ಆಗಿದೆ. ಕೋಟಿಗಟ್ಟಲೆ ಹಣ ಜಪ್ತಿಯಾಗಿದೆ ಎಂದು ಕೆಲ ಬಾಕ್ಸ್‌ಗಳ ಜೊತೆ ಇರುವ ಫೋಟೊ ತೋರಿಸಿ ಕಷ್ಟ ಹೇಳಿಕೊಂಡರು. ಹಾಗಾಗಿ ನಾನು ನನ್ನ ಕುವೆಂಪು ನಗರದ ಆ್ಯಕ್ಸಿಸ್‌ ಬ್ಯಾಂಕ್‌ ಖಾತೆಯಿಂದ ಲೋಕೇಶ್‌ ಅವರ ಕರ್ನಾಟಕ ಬ್ಯಾಂಕ್‌ನ ಮೈಸೂರು ಶಾಖೆಯ ಖಾತೆ ಸೇರಿದಂತೆ ಹಲವು ಖಾತೆಗಳಿಗೆ ಅನೇಕ ಬಾರಿ 50 ಸಾವಿರ ರು., 20 ಸಾವಿರ ರು., 5 ಲಕ್ಷ ರು. ಸೇರಿದಂತೆ ಮನೆ ಅಡವಿಟ್ಟು 30 ಲಕ್ಷ ರು.ಗೂ ಅಧಿಕ ಹಣ ನೀಡಿರುವೆ. ಗುಂಬಳ್ಳಿ ಸುರೇಖಾ ಅವರಿಗೂ ಸಹ ನಾನು 5ಲಕ್ಷ ರು. ನಗದನ್ನು ಲೋಕೇಶ್‌ ಅವರ ಆಪ್ತ ಗೋವರ್ಧನ್‌ ಸಮ್ಮುಖದಲ್ಲಿ ನೀಡಿರುವೆ. ಈ ಹಣ ಕೇಳಿದ್ದಕ್ಕೆ ಪ್ರೇಮಾ, ಹೇಮಾ, ಲೋಕೇಶ್‌ ಹಾಗೂ ಗುಂಬಳ್ಳಿ ಸುರೇಖಾ ಅವರು ನನಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಕಾಲೇಜಿಗೆ ತೆರಳಿದ ನಿಮ್ಮ ಮಕ್ಕಳು ಮನೆಗೆ ಬರಬೇಕಾ ಬೇಡವೆ? ಎಂದು ಧಮಕಿ ಹಾಕಿದ್ದು, ನನಗೆ ರಕ್ಷಣೆ ನೀಡಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚೆಕ್‌ ಬೌನ್ಸ್‌ ವಿವಾದ

ರೈತರ ಹೆಸರಲ್ಲಿ ವಾಹಿನಿಯೊಂದು 2 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಿ ಲೋಕೇಶ್‌ ಎಂಬುವರಿಂದ ನೆರವು ಕೊಡಿಸಿತ್ತು. ಅಂದು ಲೋಕೇಶ್‌ ಹಲವು ರೈತರಿಗೆ 10 ಸಾವಿರ ರು.ನಂತೆ ಚೆಕ್‌ ನೀಡಿದ್ದ. ಈ ಪೈಕಿ ಬಹುತೇಕ ಚೆಕ್‌ ಗಳು ಸಹ ಬೌನ್ಸ್‌ ಆಗಿ ವಿವಾದ ಸೃಷ್ಟಿಯಾಗಿತ್ತು.

ಅದೇ ರೀತಿಯಲ್ಲಿ ಮಾರ್ಟಳ್ಳಿಯಲ್ಲಿ ವ್ಯಾಸಂಗಕ್ಕೆ ನೆರವು ಎಂದು ವಿತರಿಸಿದ್ದ 1.37 ಲಕ್ಷ ರು. 12 ಚೆಕ್‌ಗಳೂ ವಾಪಸ್ಸಾಗಿ ಸಾಕಷ್ಟುವಿವಾದ ಉಂಟಾಗಿತ್ತು. ಈ ಬಗ್ಗೆ ಸ್ವತಃ ಅಂದಿನ ಜಿಲ್ಲಾಧ್ಯಕ್ಷ ಕಾಮರಾಜು ಅವರೇ ಈತನ ಸಮಾಜ ಸೇವೆ ವರ್ತನೆ ಕುರಿತು ಟೀಕಿಸಿದ್ದರು. ನೆರವು ನೀಡುವುದಾಗಿ ನೂರಾರು ಮಂದಿಗೆ ಭರವಸೆ ನೀಡುತ್ತಿದ್ದಾರೆ. ಆದರೆ ಈಡೇರಿಸುತ್ತಿಲ್ಲ. ಹಾಗಾಗಿ ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದನ್ನು ಸ್ವತಃ ಮಾಧ್ಯದವರಿಗೆ ಹೇಳಿಕೆ ನೀಡಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.

ಜೆಡಿಎಸ್‌ನಿಂದ ಉಚ್ಚಾಟನೆಗೆ ಆಗ್ರಹ

ಲೋಕೇಶ್‌ ಮೌರ್ಯ ಸಮಾಜ ಸೇವೆ ಹೆಸರಲ್ಲಿ ಹನೂರಿಗೆ ಆಗಮಿಸಿ ಸಾಕಷ್ಟುಅಧ್ವಾನ ಸೃಷ್ಟಿಸಿದ್ದಾರೆ. ಜೆಡಿಎಸ್‌ ಪಕ್ಷದ ಹೆಸರೇಳಿಕೊಂಡು ಪಕ್ಷದ ಹೆಸರಿಗೆ ಕಳಂಕ ತಂದಿದ್ದಾರೆ. ಸಮಾಜ ಸೇವೆ ಹೆಸರಲ್ಲಿ ವಂಚಿಸಿ ಕಳೆದ 2 ವರ್ಷಗಳಿಂದಲೂ ಹನೂರಿನಲ್ಲಿ ತಿರುಗಿಯೂ ನೋಡದ ಈತನನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬುದು ನಿಷ್ಟಾವಂತ ಕಾರ್ಯಕರ್ತರ ಅಭಿಪ್ರಾಯವೂ ಆಗಿದೆ. ಜೊತೆಗೆ ಹನೂರು ಕ್ಷೇತ್ರಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅನೇಕ ಮುಖಂಡರು ಆಗ್ರಹಿಸಿದ್ದಾರೆ.

ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಕೋಟಿ ಕೋಟಿ ಲಾಭ

Follow Us:
Download App:
  • android
  • ios