ಹುಬ್ಬಳ್ಳಿ(ಸೆ.13): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಕುರಿತಂತೆ ಆಗಾಗ ಚರ್ಚೆಗಳು ಚಾಲ್ತಿಗೆ ಬರುತ್ತಿರುವ ಬೆನ್ನಲ್ಲೆ ವಿಧಾನಪರಿಷತ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರೂ ಇದಕ್ಕೆ ದನಿಗೂಡಿಸಿದ್ದು, ‘ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಬೇಕು’ ಎಂಬ ಚರ್ಚೆ ನನ್ನೆದುರೇ ನಡೆದಿದೆ ಎಂದು ಹೇಳಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಶನಿವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವ ಬಿಜೆಪಿ ಮುಖಂಡರು ನಮ್ಮೆದುರು ಮಾತನಾಡಿದ್ದಾರೆ ಎಂಬುದನ್ನು ಈಗ ಬಹಿರಂಗಪಡಿಸುವುದಿಲ್ಲ ಎಂದೂ ಹೇಳಿದರು. ಶುಕ್ರವಾರ ಬಿಎಸ್‌ವೈ- ಎಚ್‌ಡಿಕೆ ಭೇಟಿ ಹಿನ್ನೆಲೆಯಲ್ಲೂ ಇದೇ ವಿಚಾರ ಅಡಗಿರಬಹುದು ಎಂದು ಹೇಳುವ ಮೂಲಕ ಹೊಸ ಸಾಧ್ಯತೆಯ ಕುರಿತು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.

ಮಕ್ಕಳಿಗೆ ಮಗ್ಗಿ ಕೇಳಿ, ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಅವರಿಬ್ಬರೂ (ಬಿಎಸ್‌ವೈ- ಎಚ್‌ಡಿಕೆ) ಯಾವಾಗ್ಯಾವಾಗ ಲವ್‌ ಮಾಡ್ತಾರೋ, ಯಾವಾಗ ಬೇರೆಯಾಗ್ತಾರೋ ನನಗೆ ಗೊತ್ತಿಲ್ಲ. ಭೇಟಿ ಕುರಿತು ಮಾಧ್ಯಮದ ಮೂಲಕವೇ ತಿಳಿದುಕೊಂಡಿದ್ದೇನೆ. ಅದರಲ್ಲಿ ರಾಜಕೀಯ ಉದ್ದೇಶವಿರಬಹುದು. ಇವತ್ತಿನ ಪರಿಸ್ಥಿತಿಯಲ್ಲಿ ಬಹಳಷ್ಟು ಮಂದಿಗೆ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯಲಿ ಎಂಬ ಇಚ್ಛೆ ಇದೆ. ಆದರೆ ಬಿಜೆಪಿಯಲ್ಲಿ ಕೆಲವರಿಗೆ ಬಿಎಸ್‌ವೈ ಸಿಎಂ ಸ್ಥಾನದ ಕುರಿತು ಭಿನ್ನಾಭಿಪ್ರಾಯ ಇದೆ. ಕೆಲವರು ತಾವೇ ಮುಖ್ಯಮಂತ್ರಿ ಆಗಬೇಕು ಎಂದು ದೊಡ್ಡ ಲಾಬಿಯನ್ನೂ ಮಾಡುತ್ತಿದ್ದಾರೆ ಎಂದರು.

ಆದರೆ, ಯಡಿಯೂರಪ್ಪ ಸಾಕಷ್ಟು ಹೋರಾಟ ಮಾಡಿದವರು. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಿದವರು. ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು. ಇನ್ನು ಮುಖ್ಯಮಂತ್ರಿಯಾಗಿ ಇದು ಅವರ ಕೊನೆ ಅವಧಿ. ಅವರನ್ನು ಸಿಎಂ ಸ್ಥಾನದಿಂದ ಇಳಿಸುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನು ಬದಲಾವಣೆ ಪರಿಸ್ಥಿತಿ ಬಂದರೆ, ರಾಜ್ಯದ ಜನತೆಗೆ ಅನ್ಯಾಯ ಆಗಬಾರದು, ಜನತೆಯ ಹಿತದೃಷ್ಟಿಯಿಂದ ಜೆಡಿಎಸ್‌ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದು. ಎಚ್‌ಡಿಕೆ ಮತ್ತು ಬಿಎಸ್‌ವೈ ಭೇಟಿ ಹಾಗೂ ಚರ್ಚೆ ಈ ಹಿನ್ನೆಲೆಯಲ್ಲೂ ನಡೆದಿರಬಹುದು ಎಂದು ಹೊರಟ್ಟಿ ಹೇಳಿದರು.