ಮಕ್ಕಳಿಗೆ ಮಗ್ಗಿ ಕೇಳಿ, ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಎಸಿ ಕಾರು ಬಿಟ್ಟು ವಾರ್ತಾ ಇಲಾಖೆ ಸ್ವರಾಜ್‌ ಮಜ್ದಾ ಏರಿದ ಸಚಿವರು| ನಾಡಗೀತೆ ಹಾಡಿಸಿ, ನಾಡಗೀತೆಯ ರಚನೆಕಾರರು, ರಾಷ್ಟ್ರಗೀತೆಯ ಕರ್ತೃ, ಅವರಿಗೆ ದೊರೆತ ಪ್ರಶಸ್ತಿಗಳು, ಭಾರತದ ಈಗಿನ ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಯಾರು ಎಂಬ ಪ್ರಶ್ನೆಗಳನ್ನು ಕೇಳಿ ಕಲಿಕಾಮಟ್ಟ ಪರಿಶೀಲಿಸಿದ ಸುರೇಶ್‌ ಕುಮಾರ್‌| 

Minister Suresh Kumar Interaction with School Children in Dharwad District

ಧಾರವಾಡ(ಸೆ.11): ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿರುವ ಸಚಿವ ಸುರೇಶ್‌ ಕುಮಾರ್‌ ಅವರು ಗುರುವಾರ ಧಾರವಾಡ ಗ್ರಾಮೀಣದ ಸಲಕಿನಕೊಪ್ಪ ಹಾಗೂ ಬಾಡ ಗ್ರಾಮಗಳಲ್ಲಿ ವಿದ್ಯಾಗಮ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಕ್ಷರಶಃ ಮೇಸ್ಟ್ರು ರೀತಿಯಲ್ಲಿ ಮಕ್ಕಳೊಂದಿಗೆ ಆತ್ಮೀಯವಾಗಿ ಪ್ರಶ್ನೆ ಕೇಳಿದ್ದಾರೆ.

ಮಕ್ಕಳಿಂದ ನಾಡಗೀತೆ ಹಾಡಿಸಿ ಪಾಠ, ಮಗ್ಗಿ ಹೇಳಿಸಿ ಮಕ್ಕಳ ಶಿಕ್ಷಣಮಟ್ಟ ಪರೀಕ್ಷಿಸಿದರು. ಸಲಕಿನಕೊಪ್ಪದಲ್ಲಿ ವಿದ್ಯಾಗಮ ಪಾಠದಲ್ಲಿ ನಿರತರಾಗಿರುವ ಮಕ್ಕಳಿಗೆ ಭಾರತದ ಮೊದಲ ರಾಷ್ಟ್ರಪತಿ ಯಾರು? ಎಂದು ಕೇಳಿದರು. ಮಗ್ಗಿಯನ್ನು ಕ್ರಮವಾಗಿ ಹಾಗೂ ವಿರುದ್ಧವಾಗಿ ಹೇಳಿಸಿದರು. ಮಕ್ಕಳ ಕೈಬರಹ ಕಂಡು ಸಂತಸಪಟ್ಟರು. ಕೊರೋನಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಮಕ್ಕಳಿಂದ ವಿವರಿಸಲು ಹೇಳಿದ ಸಚಿವರು, ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳುವುದು, ಶಾರೀರಿಕ ಅಂತರ ಕಾಪಾಡಿಕೊಳ್ಳುವುದರ ಸಲಹೆ ನೀಡಿದರು. ಅಲ್ಲದೇ, ಶಾಲೆ ಪುನರಾರಂಭದ ಕುರಿತು ಮಕ್ಕಳ ಅಭಿಪ್ರಾಯ ಆಲಿಸಿದ್ದಾರೆ.

ಬಾಡ ಗ್ರಾಮದಲ್ಲಿ ಮಕ್ಕಳಿಂದ ನಾಡಗೀತೆ ಹಾಡಿಸಿದ ಸಚಿವರು, ನಾಡಗೀತೆಯ ರಚನೆಕಾರರು, ರಾಷ್ಟ್ರಗೀತೆಯ ಕರ್ತೃ, ಅವರಿಗೆ ದೊರೆತ ಪ್ರಶಸ್ತಿಗಳು, ಭಾರತದ ಈಗಿನ ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಯಾರು ಎಂಬ ಪ್ರಶ್ನೆಗಳನ್ನು ಕೇಳಿ ಕಲಿಕಾಮಟ್ಟ ಪರಿಶೀಲಿಸಿದರು.

9 ರಿಂದ 12 ನೇ ತರಗತಿಗೆ ಶಿಕ್ಷಕರ ಮಾರ್ಗದರ್ಶನಕ್ಕೆ ಅವಕಾಶ: ಸಚಿವ ಸುರೇಶ್‌ ಕುಮಾರ್‌

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಮೋಹನಕುಮಾರ್‌ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಶಿಕ್ಷಕರಾದ ಪಿ.ಎಂ. ಪಾಟೀಲ, ಜಿ.ಎಂ. ಕೋಟಿಗೌಡರ, ಜಿನ್ನಿ ತರಗಲ್‌, ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಭಾವಿ ಮತ್ತಿತರರು ಇದ್ದರು.

ಸ್ವರಾಜ್‌ ಮಜ್ದಾ ಏರಿದ ಸಚಿವರು

ವಿದ್ಯಾಗಮ ಪರಿಶೀಲನೆಗಾಗಿ ಸಲಕಿನಕೊಪ್ಪ ಗ್ರಾಮದಿಂದ ಬಾಡ ಗ್ರಾಮಕ್ಕೆ ತೆರಳುವ ವೇಳೆ ತಮ್ಮ ಕಾರಿನಿಂದಿಳಿದ ಸಚಿವರು ನೇರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ವಾಹನ ಏರಿದರು. ಬಿರು ಬಿಸಿಲಿನ ಮಧ್ಯೆಯೂ ಎಸಿ ಕಾರು ಬಿಟ್ಟು ವಾರ್ತಾ ಇಲಾಖೆಯ ಸ್ವರಾಜ್‌ ಮಜ್ದಾ ವಾಹನ ಏರಿದ ಸಚಿವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಸರಳವಾಗಿ ಬೆರೆತರು. ಕೊರೋನಾ ಸಂಕಷ್ಟ ಕಾಲದಲ್ಲಿ ಶೈಕ್ಷಣಿಕ ಚಟುವಟಿಕೆಯನ್ನು ಕ್ರಿಯಾಶೀಲವಾಗಿರಿಸಲು ಅನುಸರಿಸಬಹುದಾದ ಕ್ರಮಗಳು ಹಾಗೂ ಶಾಲಾ ಪುನರಾರಂಭದ ಬಗ್ಗೆ ಮುಕ್ತವಾಗಿ ಚರ್ಚಿಸಿದರು.

ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಕೊರೋನಾ ಹೆಸರಿನಲ್ಲಿ ಶುಲ್ಕ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಅಂತಹ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ. ನಿಯಮಬಾಹಿರವಾಗಿ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ದುಡಿಯುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಯ ಹಿತ ಕಾಯಬೇಕು. ಮಕ್ಕಳಿಗೆ ನಿರ್ದಿಷ್ಟವ್ಯಕ್ತಿ ಅಥವಾ ವ್ಯಾಪಾರಿಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಖರೀದಿಸಲು ಸೂಚನೆ ನೀಡಬಾರದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios