ಬೆಳಗಾವಿ(ನ.25): ಉಪಚುನಾವಣೆಯ ನಡೆಯುವ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು ನಿಶ್ಚಿತವಾಗಿದೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಬಿಜೆಪಿ ಸುಳ್ಳು ಹೇಳಿದೆ. ಬಿಜೆಪಿ ನಾಯಕರ ಹೇಳಿಕೆಯ ದಾಖಲೆಯನ್ನು ಸಂಗ್ರಹಿಸಿ ಸುಪ್ರೀಂ ‌ಕೋರ್ಟ್ ಗೆ ಸಲ್ಲಿಸುತ್ತೇವೆ. ಚುನಾವಣೆ ನಂತರ ಮಂತ್ರಿ ಮಾಡುತ್ತೇನೆ ಎಂದು ಬಿಜೆಪಿಯರು ಆಸೆ ತೋರಿಸಿದ್ದಾರೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಹೋರಾಟ ನಡೆಸುತ್ತೇವೆ. ಈ ಬಗ್ಗೆ ರಾಜ್ಯ ಚುನಾವಣೆ ‌ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸುತ್ತೇವೆ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಂಶಪೂರ್ ಅವರು ಹೇಳಿದ್ದಾರೆ. 

ಸೋಮವಾರ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರು ಮತ್ತೆ ಅನರ್ಹರಾಗುತ್ತಾರೆ. ಅನರ್ಹ ಶಾಸಕರಿಂದಲೇ ನಾನು ಸಿಎಂ ಆದೇ ಅಂತ ಯಡಿಯೂರಪ್ಪ ಅವರು  ಹೇಳುತ್ತಿದ್ದಾರೆ. ಅನರ್ಹ ಶಾಸಕರನ್ನು ಮಂತ್ರಿ ಮಾಡ್ತೀವಿ, ಪ್ರಾಣ ಬೇಕಾದರೂ ಕೊಡ್ತೀನಿ ಅಂತಿದ್ದಾರೆ. ಈ ಎಲ್ಲಾ ಹೇಳಿಕೆಗಳ ಪೇಪರ್ ಕಟಿಂಗ್, ಮಾಧ್ಯಮ ಹೇಳಿಕೆ ದಾಖಲೆ ಸಂಗ್ರಹಿಸಿ, ಸುಪ್ರೀಂಕೋರ್ಟ್ ಗೆ ಸಲ್ಲಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನರ್ಹ ಶಾಸಕರಿಗೆ ಮಂತ್ರಿ ಮಾಡ್ತೇವೆ ಅನ್ನೋದು ಆಮಿಷವೊಡ್ಡಿದಂತೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಸಹ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.  ಇಂದಿನಿಂದ ಗೋಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಕ್ಷೇತ್ರ ಮತ ಪ್ರಚಾರ ಆರಂಭಿಸಿದೆ. ಅಶೋಕ ಪೂಜಾರಿಗೆ ಮಾಜಿ ಸಚಿವ ಬಂಡೆಪ್ಪ ಕಾಂಶಪೂರ್ ಅವರು ಸಾಥ್ ನೀಡಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.